ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಮಸ್ಥರು ಹಾಗೂ ರೈತರ ಕುರಿತು 'ಗುಗ್ಗು' ಎಂಬ ಪದ ಬಳಸಿ ವಿವಾದ ಸೃಷ್ಟಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಜಾತ್ಯತೀತ ಜನತಾದಳ (ಜೆಡಿಎಸ್) ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದೆ. ಖರ್ಗೆ ಅವರ ನಾಲಿಗೆಯ ಮೇಲಿನ ಹಿಡಿತ ತಪ್ಪಿದ್ದು, ಗ್ರಾಮೀಣ ಭಾಗದ ಜನರನ್ನು ಹಾಗೂ ರೈತರನ್ನು ಅವಮಾನಿಸಿದ್ದಾರೆ ಎಂದು ಪಕ್ಷ ಕಿಡಿಕಾರಿದೆ.
'ಆಡುಭಾಷೆ' ಸಮರ್ಥನೆಗೆ ತೀವ್ರ ತರಾಟೆ: ರೈತರನ್ನು ಅವಮಾನಿಸಿದ ತಪ್ಪನ್ನು ಮುಚ್ಚಿಕೊಳ್ಳಲು ಪ್ರಿಯಾಂಕ್ ಖರ್ಗೆ ಈಗ 'ಆಡುಭಾಷೆ' ಎಂದು ಗುರಾಣಿ ಬಳಸುತ್ತಿದ್ದಾರೆ. ಎಸಿ ಕೊಠಡಿಯಲ್ಲಿ ಬೆಳೆದ ಇಂತಹ ಸಿಟಿ ಶೋಕಿ ರಾಜಕಾರಣಿಗಳಿಗೆ ಹಳ್ಳಿಯ ಭಾಷೆಯ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಜೆಡಿಎಸ್ ಟೀಕಿಸಿದೆ.ಸಾಲ ಮನ್ನಾ ನೆನಪಿಸಿದ ಜೆಡಿಎಸ್: ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕುಳಿತೇ ನಾಡಿನ ರೈತರ 25,000 ಕೋಟಿ ಸಾಲ ಮನ್ನಾ ಮಾಡಿ ಅನ್ನದಾತರ ಬೆನ್ನಿಗೆ ನಿಂತಿದ್ದರು. ಆದರೆ, ಹಾಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ನೆರವಾಗುವ ಬದಲು ಬೆಲೆ ಏರಿಕೆ ಮಾಡಿ ಜನರ ಜೇಬು ಲೂಟಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ಬೆಲೆ ಏರಿಕೆಯ ವಿರುದ್ಧ ಕಿಡಿಕಾರಿದ ಜೆಡಿಎಸ್: ಹಾಲಿ ಸರ್ಕಾರ 'ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು' ಎಂಬಂತೆ ಆಡಳಿತ ನಡೆಸುತ್ತಿದ್ದು, ವಿಧಾನಸೌಧದಲ್ಲಿ ಕುಳಿತು ಬಡವರ ಬಸ್ ದರ ಹಾಗೂ ನಿತ್ಯ ಬಳಕೆಯ ಹಾಲು-ಮೊಸರಿನ ದರವನ್ನು ಏರಿಕೆ ಮಾಡಿದೆ ಎಂದು ಜೆಡಿಎಸ್ ಟೀಕಿಸಿದೆ.
ಚುನಾವಣೆಯಲ್ಲಿ ಚಿಕಿತ್ಸೆ ನೀಡುವ ಎಚ್ಚರಿಕೆ: "ಕೈಲಾಗದವನು ಮೈ ಪರಚಿಕೊಂಡಂತೆ" ನಡೆದುಕೊಳ್ಳುತ್ತಿರುವ ಸಚಿವರಿಗೆ ಮತ್ತು ಅವರ ಧಿಮಾಕಿಗೆ ಮುಂಬರುವ ಚುನಾವಣೆಯಲ್ಲಿ ಇದೇ 'ಹಳ್ಳಿ ಗುಗ್ಗುಗಳು' ಮತದಾನದ (ಇವಿಎಂ) ಯಂತ್ರದ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪಕ್ಷ ಎಚ್ಚರಿಸಿದೆ.
ಹಳ್ಳಿಗರು ಮತ್ತು ರೈತರನ್ನು ಕೀಳಾಗಿ ಕಂಡಿರುವ ಸಚಿವರ ಅಹಂಕಾರದ ಧೋರಣೆಗೆ ಶೀಘ್ರದಲ್ಲೇ ಮಣ್ಣಿನ ಮಕ್ಕಳು ತಮ್ಮ ತಾಕತ್ತು ಏನೆಂಬುದನ್ನು ತೋರಿಸಲಿದ್ದಾರೆ ಎಂದು ಜೆಡಿಎಸ್ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.




