ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಸ್ಟಿಂಗ್ ಕಾರ್ಯಾಚರಣೆ, ರೈತರ ಸಮಸ್ಯೆ, ದಸರಾ ಮಹೋತ್ಸವ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರದ ನಡೆಗಳನ್ನು ಖಂಡಿಸಿದ್ದಾರೆ.
ಸ್ಟಿಂಗ್ ಕಾರ್ಯಾಚರಣೆ ತನಿಖೆ: ಸ್ಟಿಂಗ್ ಮಾಡಿದವರನ್ನು ಬಿಟ್ಟು ಅದನ್ನು ಹಂಚಿಕೊಂಡವರನ್ನು ತನಿಖೆ ಮಾಡುತ್ತಿದ್ದಾರೆ. ಸರ್ಕಾರದ ಈ ತನಿಖೆ ಮೇಲೆ ನಂಬಿಕೆ ಇಲ್ಲದ ಕಾರಣ, ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು.
ಎಚ್.ಡಿ. ಕುಮಾರಸ್ವಾಮಿ ಆರೋಪ ಬೆಂಬಲ: ದೇವೇಗೌಡರ ಕುಟುಂಬವನ್ನು ಮುಗಿಸಲು ಸಿಎಂ ₹600 ಕೋಟಿ ಡೀಲ್ ಮಾಡಿದ್ದಾರೆ ಎಂಬ ಎಚ್.ಡಿ. ಕೆ. ಆರೋಪ ಸತ್ಯಕ್ಕೆ ಹತ್ತಿರವಾಗಿದೆ.
ಕನ್ನಡಿಗರ ಉದ್ಯೋಗ ಸಮಸ್ಯೆ: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗದಿರುವ ಕುರಿತು ಸಿಎಂ ಪತ್ರಿಕಾ ಹೇಳಿಕೆ ನೀಡುವ ಬದಲು, ಕಂಪನಿಗಳ ಜತೆ ನೇರ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು.
ರೈತರ ನಿರ್ಲಕ್ಷ್ಯ: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಮುಂಚಿತವಾಗಿ ಬಗೆಹರಿಸದೆ ಸರ್ಕಾರ ರಾಜಕೀಯ ಮಾಡುತ್ತಿದೆ. ಸಿಡಿ ಹಾಗೂ ಆಂತರಿಕ ರಾಜಕೀಯದಲ್ಲೇ ಸಿಎಂ ಬ್ಯುಸಿಯಾಗಿದ್ದಾರೆ.
ದಸರಾ ನಿರ್ವಹಣೆ ಲೋಪ: ಈ ಬಾರಿಯ ದಸರಾ ‘ಜನರ ದಸರಾ’ ಆಗದೆ ‘ಡಿಕೆಶಿ ದಸರಾ’ ಆಗಿ ಮಾರ್ಪಟ್ಟಿದೆ. ಪ್ರಮೋದಾದೇವಿ ಅವರು ಸರ್ಕಾರದ ಹಲವು ತಪ್ಪುಗಳನ್ನು ಸರಿಯಾಗಿಯೇ ಎತ್ತಿ ತೋರಿಸಿದ್ದಾರೆ.
ರಾಜ್ಯೋತ್ಸವದಂದು ಪ್ರತಿಭಟನೆಗೆ ವಿರೋಧ: ಕನ್ನಡ ರಾಜ್ಯೋತ್ಸವದಂದೇ ದೆಹಲಿಯಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಕಾಂಗ್ರೆಸ್‌ನ ನಡೆ ಕನ್ನಡ ಹಾಗೂ ಸಿಖ್ ಸಮುದಾಯಕ್ಕೆ ಮಾಡುವ ಅವಮಾನ. ಇದನ್ನು ಕೈಬಿಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು.




