ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಸತಿ ನಿಲಯಗಳು ಹಾಗೂ ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಮತ್ತು ಅಡುಗೆ ಮನೆಯಲ್ಲಿ ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬ ಸಿಬ್ಬಂದಿಯ ಕರ್ತವ್ಯವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ ತಿಳಿಸಿದರು.
ನಗರದ ಲಿಡ್ಕರ್ ಭವನದಲ್ಲಿ ಮಂಗಳವಾರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಕ್ರೈಸ್ ವಸತಿ ಶಾಲೆ ಹಾಗೂ ಕಾಲೇಜುಗಳ ಮುಖ್ಯ ಅಡುಗೆಯವರು ಮತ್ತು ಅಡುಗೆ ಸಹಾಯಕರಿಗಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರದದಲ್ಲಿ ಅವರು ಮಾತನಾಡಿದದರು.
ಆಹಾರ ಧಾನ್ಯಗಳಾದ ಅಕ್ಕಿ, ಗೋಧಿ ಮುಂತಾದ ಪದಾರ್ಥಗಳನ್ನು ಯಾವುದೇ ತೇವಾಂಶ ಹಾಗೂ ಕೀಟಗಳ ಬಾಧೆ ಇಲ್ಲದಂತೆ ಸುರಕ್ಷಿತವಾಗಿ ಸಂರಕ್ಷಿಸುವುದು ಹೇಗೆ ಎಂಬ ಬಗ್ಗೆ ಅಡುಗೆ ಸಿಬ್ಬಂದಿ ಜಾಗರೂಕರಾಗಿರಬೇಕು ಎಂದು ಸ್ಪಷ್ಟ ಮಾರ್ಗದರ್ಶನ ನೀಡಿದರು.
ಅಡುಗೆ ಮನೆಯ ಸ್ವಚ್ಛತೆ, ವೈಯಕ್ತಿಕ ನೈರ್ಮಲ್ಯ ಹಾಗೂ ಕೈಗಳ ಸ್ವಚ್ಛತೆಯ ಮಹತ್ವದ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಗೌರಮ್ಮ ಹಾಗೂ ಮುಂಗಪ್ಪ ಅವರು ಸಲಹೆ ನೀಡಿದರು.
ಪಡಿತರ ಅಕ್ಕಿ, ಗೋಧಿ ಹಾಗೂ ಇತರೆ ಆಹಾರ ಸಾಮಾಗ್ರಿಗಳ ಶೇಖರಣೆ, ಎಫ್ಐಎಫ್ಒ ನಿಯಮ ಪಾಲನೆ ಮತ್ತು ಸ್ವಚ್ಛತೆಯ ಕ್ರಮಗಳ ಕುರಿತು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ ಅವರು ಉಪನ್ಯಾಸ ನೀಡಿದದರು.
ಆಹಾರ ಸುರಕ್ಷತಾ ಅಧಿಕಾರಿ ಎಂ.ಜಿ.ನಾಗೇಶ್ ಅವರು ಆಹಾರ ಧಾನ್ಯಗಳ ಸುರಕ್ಷತೆ ಹಾಗೂ ಸುರಕ್ಷಿತವಾಗಿ ಸಂರಕ್ಷಣೆ ಮಾಡುವ ಕುರಿತು ಮಾರ್ಗದರ್ಶನ ನೀಡಿದರು. ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮೊದಲು ತೆಗೆದು ಹಾಕಬೇಕು ಎಂದು ಮಾಹಿತಿ ನೀಡಿದದರು.
ಪೀಪಲ್ಸ್ ಸಂಸ್ಥೆಯ ಅಧ್ಯಕ್ಷ ಎಲ್. ಮಂಜುನಾಥ್ ಅವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಮೊಳಕೆ ಕಾಳುಗಳು, ವಿಟಮಿನ್ ಹಾಗೂ ಪ್ರೋಟೀನ್ಗಳ ಪ್ರಾಮುಖ್ಯತೆ ತಿಳಿಸಿಕೊಟ್ಟರು.
ಮೈಸೂರ್ ಕೆಫೆಯ ಶ್ವೇತಾ ಅವರು ಮೃದುವಾದ ಚಪಾತಿ, ಇಡ್ಲಿ ಹಾಗೂ ದೋಸೆ ತಯಾರಿಸುವ ಸರಳ ವಿಧಾನಗಳ ಪ್ರಾಯೋಗಿಕ ಮಾಹಿತಿ ನೀಡಿದರು.
ಕ್ರೈಸ್ ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ಆರ್.ರಮೇಶ್ ಅವರು ಮುಖ್ಯ ಅಡುಗೆಯವರು ಮತ್ತು ಅಡುಗೆ ಸಹಾಯಕರ ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿದರು.




