ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಎಲೆಕ್ಟ್ರಾನಿಕ್ ಓಟಿಂಗ್ ಮೆಷಿನ್ ಮೇಲೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್ಗೆ ವಿಧಾನಪರಿಷತ್ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಎನ್.ಡಿ.ಎ.ಮೈತ್ರಿ ಕೂಟದ ಅಭ್ಯರ್ಥಿಗಳು ಗೆದ್ದಿರುವುದು ಕಪಾಳಕ್ಕೆ ಹೊಡೆದಂತಾಗಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಬಿಜೆಪಿ. ಮೇಲೆ ಅಪ ಪ್ರಚಾರದಲ್ಲಿ ತೊಡಗಿರುವವರಿಗೆ ತಿರುಗೇಟು ನೀಡಿದರು.
ಬಿಜೆಪಿ. ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತ್ರಿವರ್ಣ ಧ್ವಜ ದೇಶದ ಏಕತೆ, ಅಖಂಡತೆ, ಸಮಗ್ರತೆಯ ಸಂಕೇತ ಎನ್ನುವ ಕನಿಷ್ಟ ಗೌರವವಿಲ್ಲದ ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಸಂವಿಧಾನ ವಿರೋಧಿ ಕೆಲಸ ಮಾಡತ್ತಿದೆ. ಕಾಂಗ್ರೆಸ್, ಸಿಜೆಪಿ, ಕಮ್ಯುನಿಸ್ಟ್ ಇವುಗಳು ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ. ಅಪ್ರಬುದ್ದ ನಾಯಕ ರಾಹುಲ್ಗಾಂಧಿಯಿಂದ ಕಾಂಗ್ರೆಸ್ಗೆ ಕೆಟ್ಟ ಪರಿಸ್ಥಿತಿ ಬಂದಿದೆ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಗಾಂಧಿ ಇವರುಗಳು ರಾಹುಲ್ಗಾಂಧಿ ಮುಂದೆ ಹೋಗಿ ನಿಲ್ಲುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.?
ದೇಶದಲ್ಲಿ ನಡೆದ ೨೮ ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಸೋತಿದೆ. ಪ್ರುಬುದ್ದ ಪದವೀಧರ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಆರಿಸಿ ಕಳಿಸಿಲ್ಲ. ೨೦೨೭ ರಲ್ಲಿ ಐದು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಹಾಗೂ ೨೦೨೮ ರಲ್ಲಿ ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ. ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಬರಗಾಲವಿದೆ. ಇದರ ಕಡೆ ಗಮನ ಕೊಡದ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇತರೆ ನಾಯಕರುಗಳು ಚುನಾವಣಾ ಆಯೋಗದ ಎದುರು ಧರಣಿ ಮಾಡುವುದು ಯಾವ ನ್ಯಾಯ.? ಸರ್ಕಾರವನ್ನು ಅಮಾನತ್ತಿನಲ್ಲಿಡಬೇಕು. ಪ್ರತಿಪಕ್ಷದ ನಾಯಕ ರಾಹುಲ್ಗಾಂಧಿ ಗೌಪ್ಯವಾಗಿ ವಿದೇಶಕ್ಕೆ ಹೋಗಿ ಕುತಂತ್ರ ನಡೆಸುತ್ತಾರೆ. ಆರ್.ಬಿ.ಐ. ಮೇಲೆ ಹಸ್ತಕ್ಷೇಪ ಮಾಡಬಾರದು. ಸೈನಿಕರ ಮೇಲೆ ಅನುಮಾನ ಪಡುವುದು ಸರಿಯಲ್ಲ. ದೇಶದ ಪ್ರಧಾನಿ ನರೇಂದ್ರಮೋದಿ ಕೊರೋನಾದಲ್ಲಿ ೧೧೦ ಕೋಟಿ ರೂ.ಗಳನ್ನು ಖರ್ಚು ಮಾಡಿ ೨೨೦ ಕೋಟಿ ಜನರಿಗೆ ಉಚಿತವಾಗಿ ಲಸಿಕೆ ಕೊಡಿಸಿದಾಗ. ಸುಳ್ಳು ಅಪ ಪ್ರಚಾರದಲ್ಲಿ ತೊಡಗಿದ ಕಾಂಗ್ರೆಸ್ನವರೇ ಜೀವ ಭಯಕ್ಕೆ ಹೆದರಿ ಮೊದಲು ಲಸಿಕೆ ಹಾಕಿಸಿಕೊಂಡರು. ಕೇಂದ್ರ ಸರ್ಕಾರ ನೀಟ್ ಪರೀಕ್ಷೆ ನಡೆಸಿದ್ದರಿಂದ ಬಡ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯವಾಗಿದೆ. ಇದನ್ನೆಲ್ಲಾ ಸಹಿಸಿಕೊಳ್ಳಲು ಕಾಂಗ್ರೆಸ್ಗೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್.ಐ.ಆರ್.ವಿರುದ್ದ ನ.೧ ರಂದು ದೆಹಲಿಯಲ್ಲಿ ಹೋರಾಟಕ್ಕೆ ಮುಂದಾಗಿರುವುದನ್ನು ಜನ ಒಪ್ಪಿಕೊಳ್ಳಲ್ಲ. ಪ್ರಜಾಪ್ರುಭತ್ವವನ್ನು ರಕ್ಷಿಸಿ ಅರಾಜಕತೆ ತೊಲಗಿಸುವುದಕ್ಕಾಗಿ ನ.೪ ರಂದು ಚಿತ್ರದುರ್ಗದಲ್ಲಿ ಜನಜಾಗೃತಿಗಾಗಿ ನಡೆಯುವ ಪಾದಯಾತ್ರೆ ಕನಕ ವೃತ್ತದಿಂದ ಒನಕೆ ಓಬವ್ವ ಪ್ರತಿಮೆವರೆಗೂ ಆಗಮಿಸಲಿದೆ. ಬಿಜೆಪಿ. ನಾಯಕ ದಿವೇದಿ ಬಿಜೆಪಿ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ಜಿಲ್ಲೆಯ ಮುಖಂಡರುಗಳು ಭಾಗವಹಿಸುವರು. ಹತ್ತರು ಸಾವಿರ ಜನ ಪಾದಯಾತ್ರೆಯಲ್ಲಿ ಸೇರುವ ನಿರೀಕ್ಷೆಯಿದೆ. ನಮಗೆ ಕಡು ವೈರಿಗಳಾಗಿರುವ ಕಾಂಗ್ರೆಸ್ ಪಕ್ಷಕ್ಕೆ ೨೦೨೮ ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ಯಾದವ್, ಮಾಧುರಿ ಗಿರೀಶ್, ಮೋಹನ್, ಬಿಜೆಪಿ. ಮುಖಂಡರುಗಳಾದ ರಾಜಣ್ಣ, ಎಸ್.ಲಿಂಗಮೂರ್ತಿ, ಡಾ.ಮಂಜು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದ್ಯಾಮಣ್ಣ, ವಕ್ತಾರ ನಾಗರಾಜ್ಬೇದ್ರೆ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.




