ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಸಾಹಿತ್ಯ, ಭಾಷಾಶಾಸ್ತ್ರ ಹಾಗೂ ಸಾಂಸ್ಕೃತಿಕ ಚಿಂತನೆಗೆ ಅಪಾರ ಕೊಡುಗೆ ನೀಡಿದ್ದ ನಾಡಿನ ಹಿರಿಯ ವಿದ್ವಾಂಸ, ಸಂಶೋಧಕ ಡಾ. ಕೆ.ವಿ. ನಾರಾಯಣ್ (ಕೆ.ವಿ.ಎನ್) ಅವರ ನಿಧನಕ್ಕೆ ಸಾರಸ್ವತ ಲೋಕ ತೀವ್ರ ಕಂಬನಿ ಮಿಡಿದಿದೆ.
ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ಸಕ್ರಿಯ ಸಾಹಿತ್ಯ ಸೇವಕರಾಗಿ ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಅವರು ನೀಡಿದ ಅನುಪಮ ಸೇವೆ ಚಿರಸ್ಮರಣೀಯ. ಭಾಷಾಶಾಸ್ತ್ರ ಮತ್ತು ಕನ್ನಡ ಸಂಸ್ಕೃತಿಯ ಆಳವಾದ ಚಿಂತನೆಗಳ ಮೂಲಕ ಹೊಸ ತಲೆಮಾರಿನ ಅಧ್ಯಯನಕಾರರಿಗೆ ಮಾರ್ಗದರ್ಶಕರಾಗಿದ್ದ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಅಮೂಲ್ಯ ಗ್ರಂಥಗಳು ಹಾಗೂ ಪ್ರಬಂಧಗಳ ಮೂಲಕ ಭಾಷಾ ಪ್ರಪಂಚಕ್ಕೆ ಕೊಡುಗೆ ನೀಡಿದ ಡಾ. ಕೆ.ವಿ.ಎನ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ, ಶಿಷ್ಯಂದಿರು ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಕನ್ನಡಾಭಿಮಾನಿಗಳು ಪ್ರಾರ್ಥಿಸಿದ್ದಾರೆ.




