ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದ ಕನ್ನಡ ಚಳುವಳಿಗಳಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡಪರ ಹೋರಾಟಗಾರರ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಸಾ.ಲ ಕಮಲನಾಥ್ ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು ಮತ್ತು ವಿಕಾಸ ಪ್ರಶಿಕ್ಷಣ ಕೇಂದ್ರದ ವತಿಯಿಂದ ನಡೆದ ಸಾಹಿತ್ಯ-ವಿಜ್ಞಾನ-ಸಂಸ್ಕೃತಿ ಸಮಾಗಮ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ ಕರ್ನಾಟಕ ಏಕೀಕರಣ ಸಂದರ್ಭದಿಂದ ಹಿಡಿದು ಗೋಕಾಕ್ ಚಳವಳಿಯ ತನಕ, ರಾಜ್ಯದ ಹಲವಾರು ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದ್ದ ಸಂದರ್ಭಗಳಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡಪರ ಹೋರಾಟಗಾರರು ರಾಜ್ಯದಲ್ಲೆ ಗಮನ ಸೆಳೆಯುವ ಹೋರಾಟ ಮಾಡಿದ್ದಾರೆ.
ಕನ್ನಡ ಚಳುವಳಿಗಳು ಕರ್ನಾಟಕದ ಭಾಷೆ, ಸಂಸ್ಕೃತಿ, ಮತ್ತು ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ.ಕನ್ನಡ ಚಳುವಳಿಗಳು ಕೇವಲ ಭಾಷೆಗಾಗಿ ನಡೆದ ಹೋರಾಟಗಳಷ್ಟೇ ಅಲ್ಲದೆ, ಕನ್ನಡಿಗರ ಆತ್ಮ ಗೌರವವನ್ನು, ಸಾಂಸ್ಕೃತಿಕ ವೈವಿಧ್ಯತೆಯನ್ನು ಮತ್ತು ಪ್ರಾದೇಶಿಕ ಹಕ್ಕುಗಳನ್ನು ರಕ್ಷಿಸುವ ಜೀವನಾಡಿಯಾಗಿವೆಎಂದರು.
ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಎಂಬ ವಿಷಯ ಕುರಿತು ವೈದ್ಯರಾದ ಡಾ.ಸುಚಿತ್ರ ರಾಜಶೇಖರ್ ಮಾತನಾಡಿ ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಪ್ರಮುಖ ಘಟ್ಟ. ಈ ಹಂತದಲ್ಲಿ ಆರೋಗ್ಯದ ಬಗ್ಗೆ ಅರಿವು ಬೆಳೆಸಿಕೊಂಡರೆ ಭವಿಷ್ಯದಲ್ಲಿ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. "ಆರೋಗ್ಯವಂತ ವಿದ್ಯಾರ್ಥಿಗಳೇ ರಾಷ್ಟ್ರದ ನಿಜವಾದ ಸಂಪತ್ತು. ಆರೋಗ್ಯವಂತ ಯುವಜನತೆಯೇ ಸದೃಢ ಭಾರತದ ಭವಿಷ್ಯ ಎಂದರು.
ವಿದ್ಯಾರ್ಥಿಗಳು ಮತ್ತು ಆಹಾರ ಪದ್ದತಿ ಎಂಬ ವಿಷಯ ಕುರಿತು ವೈದ್ಯರಾದ ಡಾ.ಚಂದನ ಮಾತನಾಡಿ ಪ್ರತಿಯೊಂದು ಜೀವರಾಶಿಗಳಲ್ಲಿ ಆಹಾರಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಆಹಾರವು ಕೇವಲ ಹಸಿವನ್ನು ನೀಗಿಸುವ ಸಾಧನವಲ್ಲ. ಅದು ದೇಹದ ಬೆಳವಣಿಗೆ, ಮೆದುಳಿನ ಕಾರ್ಯಕ್ಷಮತೆ, ಕಲಿಕಾ ಸಾಮರ್ಥ್ಯ ಮತ್ತು ಆರೋಗ್ಯದ ಮೂಲಾಧಾರವಾಗಿದೆ.
ವಿದ್ಯಾರ್ಥಿ ಜೀವನದಲ್ಲಿ ಆಹಾರ ಪದ್ಧತಿಯು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಬಾಲ್ಯ ಮತ್ತು ಹದಿಹರೆಯದ ವಯಸ್ಸಿನಲ್ಲಿ ದೈಹಿಕ ಬೆಳವಣಿಗೆ ಮತ್ತು ಮಾನಸಿಕ ವಿಕಾಸ ಎರಡೂ ನಡೆಯುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಉತ್ತಮ ಆಹಾರ ಸೇವನೆಯು ಹೆಚ್ಚು ಅನುಕೂಲಕರ ಆಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಪೂರ್ಣಿಮ, ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳಾದ ಪಿ.ಗೋವಿಂದರಾಜು, ಜಿ.ಸುರೇಶ್, ನಾಗರತ್ನಮ್ಮ, ಸಫೀರ್, ಕನ್ನಡ ಜಾಗೃತ ಪರಿಷತ್ತು ಪದಾಧಿಕಾರಿ ಡಿ.ಪಿ.ಆಂಜನೇಯ, ಜಿ.ಸಿ.ಶಿವಕುಮಾರ್, ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ವೆಂಕಟರಾಜು, ಜಯಂತ್, ಪುಷ್ಪ, ವೆಂಕಟೇಶ್, ವಾಸುದೇವ್, ಸಹಶಿಕ್ಷಕರುಗಳಾದ ಗೋವಿಂದರಾಜು, ಹೆಚ್.ವೆಂಕಟೇಶ್, ಎನ್.ಆನಂದಮ್ಮ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.




