Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ನಂಬಿಕೆಗಳ ಕಾಲ್ತುಳಿತ, ಎಲ್ಲಾ ದೇವರು ಮತ್ತು ಧರ್ಮಗಳಿಗೂ ಇದು ಅನ್ವಯ

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ನಂಬಿಕೆಗಳ ಕಾಲ್ತುಳಿತ (ನಮ್ಮ ದೇಶದ ಎಲ್ಲಾ ದೇವರು ಮತ್ತು ಧರ್ಮಗಳಿಗೂ ಸಮನಾಗಿ ಅನ್ವಯ)...
ಚುನಾವಣಾ ಸಮಯದಲ್ಲಿ ಹಣ, ಹೆಂಡ, ಸೀರೆ, ಪಂಚೆ, ಜಾತಿ, ಧರ್ಮ ನೋಡಿ ಮತ ಹಾಕುವುದು. ಅನಂತರ ಸರ್ಕಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಭ್ರಷ್ಟರಾಗಿದ್ದಾರೆ, ನಮ್ಮ ಬೇಡಿಕೆಗಳಿಗೆ, ಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ, ಆದ್ದರಿಂದ ನಮಗೆ ಹೀಗೆ ಆಗುತ್ತಿರುವ ಎಲ್ಲ ತೊಂದರೆಗಳಿಗೆ ಪರಿಹಾರ ಮಾಡು ಎಂದು ದೇವರಲ್ಲಿ ಮೊರೆಹೋಗುವುದು.  ದೇವರನ್ನು ಎಲ್ಲ ಕಷ್ಟಗಳು ಪರಿಹರಿಸು ಎಂದು ಕೇಳಿಕೊಳ್ಳಲು ಒಟ್ಟಾಗಿ ಹೋಗಿ ಬೆಂಕಿಯೋ, ಕಾಲ್ತುಳಿತವೋ, ಗಲಭೆಯೋ, ಮತ್ತೇನೋ ಅವಘಡಗಳಾಗಿ ಕೊನೆಗೆ ನಮ್ಮನ್ನು ರಕ್ಷಿಸಿ ಎಂದು ಮತ್ತೆ ಇದೇ ಸರ್ಕಾರಗಳನ್ನು ಬೇಡಿಕೊಳ್ಳುವುದು. ತುಂಬಾ ವಿಚಿತ್ರ ಪರಿಸ್ಥಿತಿ ಎನಿಸುತ್ತದೆ ಅಥವಾ ಇದೇ ಸಹಜ ಬದುಕೋ ಏನೋ ಒಂದೂ ಅರ್ಥವಾಗುತ್ತಿಲ್ಲ....

ಒಟ್ಟಿನಲ್ಲಿ ನಮಗೆ ಸಮಸ್ಯೆಗಳು ಇರಬಾರದು, ನೆಮ್ಮದಿಯಿಂದ ಇರಬೇಕು, ಇದಕ್ಕೆ ಸರ್ಕಾರ ಸ್ಪಂದಿಸುತ್ತದೋ ಅಥವಾ ದೇವರು ಸ್ಪಂದಿಸುತ್ತಾರೋ ನಮಗೆ ಅರ್ಥವಾಗುತ್ತಿಲ್ಲ. ಅಜ್ಞಾನ, ಮೌಢ್ಯ, ಅಂಧಕಾರ, ವಿವೇಚನಾ ರಹಿತ ಬುದ್ಧಿಯ ಬೆಳವಣಿಗೆಯಿಂದ ಈ ರೀತಿಯ ಮಂಪರು ಪ್ರಜೆಗಳನ್ನು ಆವರಿಸುತ್ತದೆ. ಈ ಮಂಪರಿನಲ್ಲಿ ಜನಗಳು ತಮ್ಮ ಎಲ್ಲಾ ಪಂಚೇಂದ್ರಿಯಗಳ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆಗ ಆಡಳಿತ ಮಾಡುವವರು ಇದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಈಗ ಆಗುತ್ತಿರುವುದು ಅದೇ. ಇಲ್ಲ ದೇವರು ರಕ್ಷಿಸಬೇಕು ಅಥವಾ ಸರ್ಕಾರ ರಕ್ಷಿಸಬೇಕು ಈಗ ನೋಡಿದರೆ ಎರಡು ಸಾಧ್ಯತೆಗಳು ಕಡಿಮೆಯಾಗುತ್ತಿದೆ. ಸಮಸ್ಯೆಗಳು ಹೆಚ್ಚಾಗುತ್ತಿದೆ. ಮಾಡುವುದಾದರೂ ಏನು ?

ಕುಂಭಮೇಳದ ಕಾಲ್ತುಳಿತ....
 ಇದು ಆಕಸ್ಮಿಕವೇ, ನಿರೀಕ್ಷಿತವೇ ಅಪಘಾತವೇ, ಅನಿರೀಕ್ಷಿತವೇ, ಅನಿವಾರ್ಯವೇ, ಅಜ್ಞಾನವೇ, ಮೂರ್ಖತನವೇ, ಸ್ವಯಂಕೃತಾಪರಾಧವೇ, ಸಹಜವೇ, ಅಸಹಜವೇ, ಸಾಮಾನ್ಯವೇ ಹೀಗೆ ಹಲವರಲ್ಲಿ ಹಲವಾರು ಪ್ರಶ್ನೆಗಳು ಹೇಳಬಹುದು....

ವಾಸ್ತವದಲ್ಲಿ ಪವಿತ್ರ ಸ್ನಾನಕ್ಕೆ  ಹೋಗಿ ಅತಿಯಾದ ಜನಸಂಖ್ಯೆಯ ಒತ್ತಡದ ಕಾರಣ ಕಾಲ್ತುಳಿತಕ್ಕೆ ಸಿಲುಕಿ ಸತ್ತವರು ಇಷ್ಟು ಜನ. ಗಾಯಗೊಂಡವರು ಮತ್ತಷ್ಟು ಜನ. ಅದರಲ್ಲಿ ಮಹಿಳೆಯರೇ ಅತಿ ಹೆಚ್ಚು. ಕೆಲವು ಮಕ್ಕಳು ಸಹ ಸೇರಿದ್ದಾರೆ.....

ಇದಕ್ಕೆ ಸರ್ಕಾರ ಹೊಣೆಯೇ, ಅಧಿಕಾರಿಗಳು ಜವಾಬ್ದಾರಿಯೇ, ಧಾರ್ಮಿಕ ಮುಖಂಡರ ಬೇಜವಾಬ್ದಾರಿಯೇ, ಮಾಧ್ಯಮಗಳ ಪ್ರೇರಣೆಯೇ, ಸಮಾಜದ ಹೊಣೆಯೇ, ವೈಯಕ್ತಿಕವಾಗಿ ವ್ಯಕ್ತಿಗಳ ನಿರ್ಲಕ್ಷ್ಯವೇ, ಧಾರ್ಮಿಕ ನಂಬಿಕೆಗಳ ಕಾರಣವೇ ಹೀಗೆ ಸಾಲು ಸಾಲು ಅನುಮಾನಗಳು ಸಹ ಮೂಡುತ್ತವೆ.....

ಉತ್ತರ ಅಷ್ಟು ಸುಲಭವಲ್ಲ ಅಥವಾ ಸರಳವಲ್ಲ. ಈ ದುರ್ಘಟನೆಯನ್ನು ಅಲ್ಲಿನ ಸರ್ಕಾರ ತನಿಖೆ ಮಾಡಿ ಮುಂದೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲೂಬಹುದು‌. ಆದರೆ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ನಿಜವಾದ ತಪ್ಪಿತಸ್ಥರು ಯಾರು ಎಂಬುದು ಮುಖ್ಯವಾಗುತ್ತದೆ. ಈ ಬಗ್ಗೆ ಸಮಗ್ರ ಅಧ್ಯಯನ ಮತ್ತು ಆತ್ಮಾವಲೋಕನದ ಅವಶ್ಯಕತೆ ಇದೆ..

 ಇದು ದಿಢೀರನೆ ಆದ ಘಟನೆ ಇರಬಹುದು. ಹಾಗಂತ ಈ ಕ್ಷಣಕ್ಕೆ ಅನಿಸುತ್ತದೆ. ಆಡಳಿತ ವ್ಯವಸ್ಥೆ ಇದಕ್ಕಾಗಿ ಇನ್ನಷ್ಟು ಭದ್ರತಾ ವ್ಯವಸ್ಥೆ ಮಾಡಬಹುದಿತ್ತು ಎಂದೂ ಅನಿಸಬಹುದು‌. ಆದರೆ ಆಳದಲ್ಲಿ ಈ ದುರ್ಘಟನೆಗೆ ಅನೇಕ ಕಾರಣಗಳು ಗೋಚರಿಸುತ್ತದೆ. ಕೇವಲ ಭದ್ರತಾ ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ. ಇದೊಂದು ಬಹಳ ಆಯಾಮದ, ಆಳವಾದ ಚಿಂತನೆ ಮತ್ತು ಅಧ್ಯಯನಕ್ಕೆ ಯೋಗ್ಯವಾದ ವಿಷಯ....

ಭಾರತದ ಸಾಮಾಜಿಕ ವ್ಯವಸ್ಥೆಯೇ ಅಸಮಾನತೆ ಮತ್ತು ಅಮಾನವೀಯ ರಚನೆಯಿಂದ ಕೂಡಿದೆ, ಅದರೊಳಗೆ ಮೌಢ್ಯ, ಅಜ್ಞಾನ, ಭಕ್ತಿ, ಭಾವನೆ, ಭ್ರಮೆಗಳೇ ತುಂಬಿಕೊಂಡಿದೆ. ಎಷ್ಟೇ ಅಕ್ಷರ ಜ್ಞಾನ ಹೊಂದಿದರು ವೈಚಾರಿಕ, ವೈಜ್ಞಾನಿಕ, ಪ್ರಗತಿಪರ, ಪ್ರಶ್ನಿಸುವ ಮನೋಭಾವ ಜನರಲ್ಲಿ ಬೆಳೆಯುತ್ತಲೇ ಇಲ್ಲ. ಪ್ರಾಕೃತಿಕ ಸಹಜ ನಿಯಮಗಳು ಸಹ ಇವರಿಗೆ ಅರ್ಥವಾಗುತ್ತಿಲ್ಲ......

ಪ್ರಕೃತಿಯನ್ನೇ ದೇವರೆಂದು, ಆ ಶಕ್ತಿಯೇ ದೈವಿಕ ಶಕ್ತಿ ಎಂದು ನಂಬುವ ಅದೇ ಜನ ಅದಕ್ಕೆ ವಿರುದ್ಧವಾದ ಅತಿಮಾನುಷ ಶಕ್ತಿಯನ್ನು ನಂಬುತ್ತಾರೆ. ಅಸ್ವಾಭಾವಿಕ, ಅಸಹಜ, ಕಾಲ್ಪನಿಕ ಶಕ್ತಿಯನ್ನು ಯಾವುದೋ ವ್ಯಕ್ತಿ ಅಥವಾ ಶಕ್ತಿ ದೇವಮಾನವನ ರೂಪದಲ್ಲಿ ಅತ್ಯಂತ ಆಕರ್ಷಕವಾಗಿ, ಕಲಾತ್ಮಕವಾಗಿ, ಕ್ರಿಯಾತ್ಮಕವಾಗಿ, ಉದಾಹರಣೆಗಳ ಸಹಿತ ವಿಜೃಂಭಿಸಿ ಜನರ ಭಾವನೆಗಳನ್ನು ಉದ್ರೇಕಿಸಿ ಇಲ್ಲಸಲ್ಲದ ವಿಷಯಗಳನ್ನು ಹೇಳಿದರೆ ಈ ಜನ ನಂಬುತ್ತಾರೆ. ತಮ್ಮ ಕಷ್ಟಗಳಿಗೆ ಇಲ್ಲಿ ಪರಿಹಾರವಿದೆ ಎಂದು ಭ್ರಮಿಸುತ್ತಾರೆ.......

ತಾವು ಜ್ಞಾನಿಗಳಾಗದೆ, ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳದೆ, ಈ ರೀತಿಯ ವಂಚಕ, ವಾಣಿಜ್ಯೀಕರಣಗೊಂಡ ಆಧ್ಯಾತ್ಮಿಕ ವ್ಯಕ್ತಿಗಳ ಮಾತುಗಳಿಗೆ ಮರುಳಾಗಿ ಅವರನ್ನೇ ದೇವಮಾನವರೆಂದು ನಂಬುತ್ತಾರೆ. ಅದರ ಪರಿಣಾಮ ಈ ಕ್ಷಣದ ಕಾಲ್ತುಳಿತ ಮಾತ್ರವಲ್ಲ, ಶತಶತಮಾನದ ಅಜ್ಞಾನದ ಕಾಲ್ತುಳಿತಗಳಿಗೆ ಈ ಜನ ಬಲಿಯಾಗುತ್ತಿದ್ದಾರೆ. ಈಗ ಪ್ರಾಣ ಕಳೆದುಕೊಂಡವರು ಕೆಲವೇ ಜನರಿರಬಹುದು. ಆದರೆ ತಮ್ಮ ಜೀವನವನ್ನೇ ಜೀತಕ್ಕಿಟ್ಟು ಅಜ್ಞಾನದಿಂದ, ಕಷ್ಟಕಾರ್ಪಣ್ಯಗಳಿಂದ ನರಳುತ್ತಿರುವ ಅಸಂಖ್ಯಾತ ಜನರಿದ್ದಾರೆ.......

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಪ್ರಾಮುಖ್ಯತೆ, ತಮ್ಮ ಮತದ ಮಹತ್ವ, ತಾವು ಮಾಡಬಹುದಾದ ಬದಲಾವಣೆ, ತಮ್ಮ ಹಕ್ಕು ಮತ್ತು ಕರ್ತವ್ಯಗಳು, ಸಂವಿಧಾನಾತ್ಮಕ ಜವಾಬ್ದಾರಿ ಮತ್ತು ಅನುಕೂಲಗಳು ಯಾವುದನ್ನೂ ಸರಿಯಾಗಿ ಯೋಚಿಸುವುದಿಲ್ಲ. ಎಲ್ಲಿಂದಲೋ, ಹೇಗೋ ತಮಗೆ ಆರ್ಥಿಕ ಅನುಕೂಲಗಳಾದರೆ ಸಾಕು, ತಮಗೆ ಯಾವುದೇ ಸಾವು ನೋವುಗಳಾಗಬಾರದು ಎಂಬ ಸಂಕುಚಿತ, ಭಯದ, ಮನಸ್ಥಿತಿಗೆ ಸಿಲುಕಿ ಈ ರೀತಿಯ ಅವಘಡಗಳಿಗೆ ಕಾರಣರಾಗುತ್ತಿದ್ದಾರೆ.‌....

ಇದನ್ನು ರಾಜಕಾರಣಿಗಳು, ಅಧಿಕಾರಿಗಳು, ಮಾಧ್ಯಮಗಳು, ಧಾರ್ಮಿಕ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ನಿರಂತರವಾಗಿ  ಪೋಷಿಸಿಕೊಂಡು ಬರುತ್ತಲೇ ಇದ್ದಾರೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು, ಜವಾಬ್ದಾರಿಯನ್ನು, ಕರ್ತವ್ಯವನ್ನು ಯಾರು ಮಾಡುತ್ತಿಲ್ಲ. ಎಲ್ಲೋ ಕೆಲವು ಅಪರೂಪದ ವ್ಯಕ್ತಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಯಾವ ಮೂಲೆಗೂ ಸಾಕಾಗುತ್ತಿಲ್ಲ. ಮೌಢ್ಯದ ವಿಜೃಂಭಣೆಯೇ ಜನಪ್ರಿಯತೆ ಗಳಿಸುತ್ತಿದೆ. ಈ ರೀತಿಯ ದೇವಮಾನವರು ಮತ್ತೆ ಮತ್ತೆ ಸೃಷ್ಟಿಯಾಗುತ್ತಲೇ ಇರುತ್ತಾರೆ.......

ಇದು ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಬಹುತೇಕ ಎಲ್ಲ ಧರ್ಮಗಳಲ್ಲೂ ಈ ರೀತಿಯ ದೇವಮಾನವರ ಸೃಷ್ಟಿಯಾಗಿ ಇಡೀ ಸಮಾಜದಲ್ಲಿ ಅಶಾಂತಿ, ಅಜ್ಞಾನ, ಬಡತನ ಹೆಚ್ಚಾಗಲು ಕಾರಣರಾಗುತ್ತಿದ್ದಾರೆ. ಈ ಅಧುನಿಕ ಕಾಲದಲ್ಲೂ, ಈ ಅದ್ಭುತ ತಂತ್ರಜ್ಞಾನದ ಬೆಳವಣಿಗೆಯ ಸಂದರ್ಭದಲ್ಲೂ, ಅಪಾರ ಅನುಭವದ ಮನುಷ್ಯ ಜೀವಿ ಇನ್ನೂ ಅನಾಗರಿಕ ಗುಣಲಕ್ಷಣಗಳನ್ನು ಹೊಂದಿರುವುದು ನಿಜಕ್ಕೂ ವಿಷಾದನೀಯ......

ದಯವಿಟ್ಟು ತಿಳಿದವರಾದ, ಪ್ರಬುದ್ಧರಾದ ಕೆಲವರಾದರು ಎಚ್ಚೆತ್ತುಕೊಳ್ಳಿ ಮತ್ತು ನಮ್ಮವರನ್ನು ಎಚ್ಚರಗೊಳಿಸಿ. ಈ ರೀತಿಯ ಅನಾಹುತಗಳನ್ನು ತಪ್ಪಿಸಲು ಪ್ರಯತ್ನಿಸಿ.......

ಏಕೆಂದರೆ.....ನೀವು ನಮ್ಮ ದೇಶದ ಯಾವುದೇ ದೇವಸ್ಥಾನ, ಮಂದಿರ, ಮಸೀದಿ, ಚರ್ಚ್, ಜೈನ ಮಂದಿರ, ಭೌದ್ಧ ಸ್ತೂಪ ಗುರುದ್ವಾರ ಹೀಗೆ ಎಲ್ಲೇ ಹೋಗಿ ಅವುಗಳ ಮುಂದೆ ಭಿಕ್ಷುಕರು ಭಿಕ್ಷೆ ಬೇಡುತ್ತಲೇ ಇರುತ್ತಾರೆ.....

ನೀವು ಯಾವುದೇ ರೈಲ್ವೇ ನಿಲ್ದಾಣಕ್ಕೆ ಹೋಗಿ, ಬಹುತೇಕ ಕಡೆ ಅನಾಥರಂತೆ  ಯಾರೂ ದಿಕ್ಕಿಲ್ಲದ ಕೆಲವು ಜನ ನಿಮಗೆ ಕಾಣಿಸುತ್ತಾರೆ.....ನೀವು ಯಾವುದೇ ಪ್ರಮುಖ ಬಸ್ ನಿಲ್ದಾಣಗಳಿಗೆ ಹೋಗಿ ನೋಡಿ ಹೊಟ್ಟೆ ಪಾಡಿನ ವೇಶ್ಯೆಯರು ಇದ್ದೇ ಇರುತ್ತಾರೆ......

ನೀವು ಯಾವುದೇ ಮಧ್ಯಮ ಮತ್ತು ಸಣ್ಣ ಪ್ರಮಾಣದ ಹೋಟೆಲ್ ಗಳಲ್ಲಿ ಗಮನಿಸಿ ನೋಡಿ ಅಲ್ಲಿನ ಕ್ಲೀನಿಂಗ್ ಕೆಲಸಗಳಲ್ಲಿ ಬಾಲ ಕಾರ್ಮಿಕರು ಇದ್ದೇ ಇರುತ್ತಾರೆ....

ನಮ್ಮೆಲ್ಲರ ಬಹುತೇಕರ ಮನೆಗಳಿಗೆ ಪ್ರತಿನಿತ್ಯ ಪತ್ರಿಕೆಗಳನ್ನು ಹಾಕುವುದು ಕೂಡ ಕಾನೂನು ಬಾಹಿರವಾಗಿ ಪುಟ್ಟ ಮಕ್ಕಳೇ ಆಗಿರುತ್ತಾರೆ....

ನಮ್ಮ ದೇಶದ ಚುನಾವಣೆಗಳಲ್ಲಿ ಶೇಕಡ 60%  ಕ್ಕಿಂತ ಹೆಚ್ಚು ಜನರು ಮತ ಹಾಕುವುದು ಹಣ,ಹೆಂಡ,ಸೀರೆ,ಪಂಚೆ ತೆಗೆದುಕೊಂಡ ಮೇಲೆಯೇ.....

ಈ ಕೆಲವೇ ಉದಾಹರಣೆಗಳು ಸಾಕು ನಮ್ಮ ದೇಶ ಆಂತರಿಕವಾಗಿ ಎಷ್ಟು ಹಿಂದೆ ಉಳಿದಿದೆ ಎಂದು ಅರ್ಥಮಾಡಿಕೊಳ್ಳಲು. ಅದರಲ್ಲೂ ಉತ್ತರ ಭಾರತದ ಬಡತನ ಮತ್ತು ಅಪರಾಧದ ಅಂಕಿ ಸಂಖ್ಯೆಗಳು ಎಲ್ಲರನ್ನೂ ಚಿಂತೆಗೀಡುಮಾಡುತ್ತದೆ.....

ಆದರೂ ಕೆಲವು ಪಂಡಿತೋತ್ತಮರು ಭಾರತ ವಿಶ್ವದ ಬಲಿಷ್ಠ ನಾಯಕನಾಗಿದೆ ಎಂದೇ ಹೇಳುತ್ತಾರೆ. ಇದು ಆತ್ಮವಂಚನೆಯಲ್ಲವೆ ?, ಭಾರತ ವಿಶ್ವ ಗುರುವಾಗಬೇಕೆಂದು ನಮ್ಮೆಲ್ಲರ ಆಶಯವೂ ಕೂಡ. ಆದರೆ ಕೇವಲ ಕೆಲವೇ ಜನ ಶ್ರೀಮಂತರಾಗಿ, ವಿಮಾನಗಳಲ್ಲಿ ಓಡಾಡುತ್ತಾ, ವಿದೇಶ ಪ್ರವಾಸಗಳನ್ನು ಮಾಡುತ್ತಾ, ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾ, ಭವ್ಯ ಬಂಗಲೆಗಳಲ್ಲಿ ವಾಸಮಾಡುತ್ತಾ, ಪ್ರತಿವರ್ಷ ತಮ್ಮ ಆದಾಯವನ್ನು ಕೋಟಿಗಟ್ಟಲೆ ಹೆಚ್ಚಿಸಿಕೊಳ್ಳುತ್ತಾ ಇದ್ದ ಮಾತ್ರಕ್ಕೆ ಭಾರತ ಶ್ರೀಮಂತ ರಾಷ್ಟ್ರ ಎಂದು ಒಪ್ಪಿಕೊಳ್ಳಲು ಖಂಡಿತ ಸಾಧ್ಯವಿಲ್ಲ.

ಮೇಲೆ ಹೇಳಿದ ಅಸಹಾಯಕರ ಎಲ್ಲಾ ವಿಷಯಗಳು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆ. ನಿಜವಾದ ಅಭಿವೃದ್ಧಿ ಎಂದರೆ ಕೇವಲ ತೋರಿಕೆಯ ಪ್ರಗತಿಯಾಗಿರದೆ ಈ ರೀತಿಯ ಸಮಾಜದ ನಿರ್ಲಕ್ಷಿತ ಅಸಂಖ್ಯಾತ ಅಸಂಘಟಿತ ಜನರ ಜೀವನಮಟ್ಟ ಸುಧಾರಿಸಿದಾಗ ಮಾತ್ರ ನಾವು ಧೈರ್ಯವಾಗಿ ಆತ್ಮಸಾಕ್ಷಿಯಿಂದ ನಮ್ಮ ದೇಶ ಅಭಿವೃದ್ಧಿ ಆಗಿದೆ ಎಂದು ಹೇಳಿಕೊಳ್ಳಬಹುದು....

ಮಾನವೀಯ ಕಾಳಜಿಯ ದಕ್ಷ ನಿಷ್ಕಳಂಕ, ನಿಸ್ವಾರ್ಥ ವ್ಯಕ್ತಿಗಳ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರ ಇದೆಲ್ಲಾ ಸಾಧ್ಯ ಆ ದಿನಗಳ ನಿರೀಕ್ಷೆಯಲ್ಲಿ......
ಲೇಖನ-ವಿವೇಕಾನಂದ. ಎಚ್. ಕೆ. 9844013068.......

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ