ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖಾಸಗಿ ಹಾಗೂ ಐಟಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಆದ್ಯತೆ ನೀಡಬೇಕೆಂಬ ಸರ್ಕಾರದ ಹೇಳಿಕೆಯನ್ನು ಬೆಂಬಲಿಸುತ್ತಲೇ, ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಬೃಹತ್ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡದಿರುವುದನ್ನು ಪ್ರಶ್ನಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಖಾಸಗಿ ರಂಗದಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಸರ್ಕಾರದ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲೇ ಇರುವ ಲಕ್ಷಾಂತರ ಖಾಲಿ ಹುದ್ದೆಗಳ ನೇಮಕಾತಿ ಕುರಿತು ಸರ್ಕಾರ ವಹಿಸಿರುವ ಮೌನವನ್ನು ಖಂಡಿಸಿದ್ದಾರೆ.
ಸರ್ಕಾರಿ ಹುದ್ದೆಗಳ ನಿರ್ಲಕ್ಷ್ಯ: ರಾಜ್ಯ ಸರ್ಕಾರದಲ್ಲಿ ಸುಮಾರು 2.50 ಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳು ಖಾಲಿ ಇವೆ. ಇವುಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸದೇ, ನಿರುದ್ಯೋಗಿ ಕನ್ನಡ ಯುವಕ-ಯುವತಿಯರನ್ನು ಅವಕಾಶ ವಂಚಿತರನ್ನಾಗಿಸಿ ಅವರ ಭವಿಷ್ಯಕ್ಕೆ ಕಲ್ಲು ಹಾಕಲಾಗುತ್ತಿದೆ.
ಡೋಂಗಿ ಕಾಳಜಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ ಎಂದು ಹೇಳುವ ಸರ್ಕಾರ, ತನ್ನ ಅಧೀನದಲ್ಲಿರುವ ಹುದ್ದೆಗಳನ್ನು ಭರ್ತಿ ಮಾಡದಿರುವುದು ಕನ್ನಡಿಗರ ಮೇಲಿನ 'ಡೋಂಗಿ ಕಾಳಜಿ' ಮತ್ತು 'ಮೊಸಳೆ ಕಣ್ಣೀರು' ಎಂಬುದನ್ನು ಸಾಕ್ಷೀಕರಿಸುತ್ತದೆ.
ಯುವಸಮೂಹದ ಆಕ್ರೋಶ: ಕಳೆದ 3 ವರ್ಷಗಳಿಂದ ನಿರಂತರವಾಗಿ ಯುವಜನರ ಭವಿಷ್ಯಕ್ಕೆ ಧಕ್ಕೆ ತರಲಾಗಿದ್ದು, ಸರ್ಕಾರದ ಧೋರಣೆ ವಿರುದ್ಧ ನಿರುದ್ಯೋಗಿ ಯುವಸಮೂಹ ಈಗಾಗಲೇ ಬೀದಿಗಿಳಿದು ಹೋರಾಟ ನಡೆಸಿದೆ.
ಕಾಳಜಿ ತೋರಲು ಆಗ್ರಹ: ಜೆನ್-ಝೀ ಸಮೂಹವನ್ನು ದಿಕ್ಕುತಪ್ಪಿಸುವ ಬದಲು, ರಾಜ್ಯದ ನಿರುದ್ಯೋಗಿ ಯುವಕರ ಆಕ್ರಂದನಕ್ಕೆ ಸ್ಪಂದಿಸಿ, ಸರ್ಕಾರಿ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಿ ಬದ್ಧತೆ ತೋರಬೇಕು ಎಂದು ಒತ್ತಾಯಿಸಿದ್ದಾರೆ.




