Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ವಿಶ್ವ ಮಹಿಳಾ ದಿನಾಚರಣೆ, ಮಾರ್ಚ್ - 8

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ" "ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು......


ಹೆಣ್ಣಿಗೆ ಜಗತ್ತಿನಲ್ಲಿಯೇ ಅತ್ಯಂತ ಪೂಜನೀಯ ಸ್ಥಾನ ನೀಡಿರುವ  ಭಾರತೀಯ ಸಂಸ್ಕೃತಿಯ ಮತ್ತೊಂದು ಮುಖದ ಅನಾವರಣವನ್ನು ಈ ಜಾನಪದ ಸಾಹಿತ್ಯ ಮಾಡುತ್ತದೆ.

ಬಹುಶಃ ಜಾಗತೀಕರಣಕ್ಕೆ ಭಾರತ ಮುಕ್ತವಾಗಿರದಿದ್ದರೆ ಹೆಣ್ಣಿನ ಸ್ಥಾನಮಾನಗಳಲ್ಲಿ ಇಷ್ಟು ಬೇಗ ಸುಧಾರಣೆ ಆಗುವ ಸಾಧ್ಯತೆ ಇರಲಿಲ್ಲ ಎನಿಸುತ್ತದೆ.......

ಹೌದು, ಈ ದಿನದ ಆಚರಣೆಯ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚಿದೆ. 2025 ರ ಈ ಸಂದರ್ಭದಲ್ಲೂ ಮಹಿಳಾ ಸ್ವಾತಂತ್ರ್ಯ- ಮಹಿಳಾ ಸಮಾನತೆ - ಮಹಿಳಾ ಹಕ್ಕು - ಮಹಿಳಾ ಸುರಕ್ಷೆ - ಮಹಿಳಾ ದೌರ್ಜನ್ಯ - ಮಹಿಳಾ ವಿಮೋಚನೆ - ಮಹಿಳಾ ಮೀಸಲಾತಿ - ವರದಕ್ಷಿಣೆ ವಿರೋಧಿ ಚಳವಳಿ - ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಘೋಷಣೆಗಳಲ್ಲಿ - ಹೋರಾಟಗಳಲ್ಲಿ ನಾವು ಬಂಧಿಯಾಗಿದ್ದೇವೆಂದರೆ ನಾಚಿಕೆ ಅವಮಾನ ಆಗಬೇಕಿರುವುದು ನಮಗೋ - ನಾಗರಿಕತೆಗೋ ಅರ್ಥವಾಗುತ್ತಿಲ್ಲ.

ಭಾರತಕ್ಕೆ ಸೀಮಿತವಾಗಿ ಹೇಳುವುದಾದರೆ ಯಾವ ಮಾನವೀಯ ಸಂಬಂಧ ನಮ್ಮ ಜೀವನದಲ್ಲಿ ಅತ್ಯಂತ ಮಹತ್ವ ಪಡೆಯುತ್ತದೆ ಎಂದು ಯಾರನ್ನೇ ಕೇಳಿದರೂ ಬಹುತೇಕರ ಉತ್ತರ ನಿಸ್ಸಂಶಯವಾಗಿ " ತಾಯಿ " ಎಂದೇ ಇರುತ್ತದೆ. ಹಾಗಾದರೆ ಇದು ನಿಜವೇ ?

ಇದು ನಿಜವಾಗುವುದು ಕೇವಲ ನಮ್ಮ ಹೆತ್ತಮ್ಮನ ವಿಷಯದಲ್ಲಿ ಮಾತ್ರ. ಇನ್ನೂ ಹೆಚ್ಚೆಂದರೆ ನಮ್ಮ ರಕ್ತ ಹಂಚಿ ಹುಟ್ಟಿದ ಅಕ್ಕ ತಂಗಿಯರ ವಿಷಯದಲ್ಲಿ ಮಾತ್ರ. ಉಳಿದ ಹೆಣ್ಣುಮಕ್ಕಳ ವಿಷಯದಲ್ಲಿ ಭಾವನೆ - ಮೇಲ್ನೋಟದ ಅಭಿಪ್ರಾಯ ಏನೇ ಇದ್ದರೂ ನಡವಳಿಕೆ ಮಾತ್ರ ಘನಘೋರ ಆತ್ಮವಂಚನೆ. ಎಲ್ಲಾ ಪಾವಿತ್ರ್ಯದ ಗುಣಗಳನ್ನು ಆಕೆಯ ಮೇಲೆ ಹೊರಿಸಿ ಅದರಿಂದ ಆಕೆಯನ್ನು ಮಾನಸಿಕವಾಗಿ ಬಂಧಿಸಿ ಆಕೆಯ ಮೇಲೆ ನಿಯಂತ್ರಣ ಹೇರಿ ಆಕೆಯನ್ನು ಶೋಷಿಸುವ ಸುಲಭೋಪಾಯ ಕಂಡುಕೊಂಡಿದ್ದೇವೆ. ಆಕೆಯನ್ನು ವಿಚಿತ್ರ ಸುಖಲೋಲುಪತೆಯ ಪ್ರಾಣಿ ಎಂದೇ ಪರಿಗಣಿಸಲಾಗಿದೆ.

ಅದು ಸಿನಿಮಾವಿರಲಿ, ಸಾಹಿತ್ಯವಿರಲಿ, ಕಲೆ ಇರಲಿ  ರಾಜಕೀಯವಿರಲಿಭಕ್ತಿ ಭಾವಗಳೇ ಇರಲಿ ಆಕೆಗೆ ಗೌರವದ ಸ್ಥಾನ ನೀಡಲಾಗುತ್ತದೆ. ಅದರೆ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗುತ್ತದೆ. ಎಲ್ಲಾ ಜೀವರಾಶಿಗಳಿಗೂ ಸ್ವಾತಂತ್ರ್ಯವಿಲ್ಲದ ಜೀವನವೆಂದರೆ ಅದು ಜೀತವಿದ್ದಂತೆ. ಈ ಕ್ಷಣದಲ್ಲಿಯೂ ಅನಧಿಕೃತವಾಗಿ ನಮ್ಮೆಲ್ಲರ ಮಾತುಗಳಲ್ಲಿ - ಮನಸ್ಸುಗಳಲ್ಲಿ - ಚರ್ಚೆಗಳಲ್ಲಿ - ಹರಟೆಗಳಲ್ಲಿ - ಅಸೂಯೆಗಳಲ್ಲಿ ಅತ್ಯಂತ ವಿಕೃತವಾಗಿ ಚಿತ್ರಿತವಾಗುವುದೇ ಮಹಿಳೆಯರ Character ಬಗ್ಗೆ.

ನಮ್ಮ ಅಕ್ಕ ತಂಗಿ ತಾಯಿ ಹೆಂಡತಿ ಬಿಟ್ಟರೆ ಉಳಿದವರ ಬಗ್ಗೆ ಅನೇಕರಲ್ಲಿ ಮಾತು ಹಗುರವಾಗುತ್ತದೆ. ಮೇಲ್ನೋಟಕ್ಕೆ ಇದು ಹೇಳುವಷ್ಟು ಗಂಭೀರವಾಗಿಲ್ಲ. ಆದರೆ ಆಂತರ್ಯದಲ್ಲಿ ಇದು ವಾಸ್ತವಕ್ಕೆ ಹತ್ತಿರವಾಗಿದೆ ಎಂದೆನಿಸುತ್ತದೆ.

ಹಾಗಾದರೆ ಮಹಿಳೆಯರೆಲ್ಲಾ ಶ್ರೇಷ್ಠರೇ - ಗೌರವಾನ್ವಿತರೇ - ಎಲ್ಲಾ ಒಳ್ಳೆಯ ಗುಣಗಳೇ ತುಂಬಿರುವ ಸಭ್ಯರೇ ? ಇಲ್ಲ. ನಾವು ಆಕೆಯ ಸ್ವಾತಂತ್ರ್ಯ- ಸಮಾನತೆಯ ಬಗೆಗೆ ಮಾತ್ರ ಹೇಳುತ್ತಿರುವುದು. ಗುಣಾವಗುಣಗಳಲ್ಲಿ ಆಕೆಯೂ ಪುರಷರಷ್ಟೇ ಸ್ವಾರ್ಥಿ - ತ್ಯಾಗಿ - ವಂಚಕಿ - ಪ್ರೀತ್ಯಾಧಾರಳು - ಅಸೂಯಪರಳು - ಭ್ರಷ್ಟಳು - ಶ್ರಮಿಕಳು - ಒಳ್ಳೆಯವಳು ಎಲ್ಲವೂ ಒಳಗೊಂಡ ವ್ಯಕ್ತಿತ್ವ. ಅದು ಮಾನವ ಸಹಜ ಖಾಸಗಿ ವರ್ತನೆ ಮತ್ತು ಸಹಜ ಸಾಮಾಜಿಕ ವ್ಯವಸ್ಥೆಯ ಪ್ರತಿಬಿಂಬ. ಕೆಲವು ಕಡೆ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಮಹಿಳೆಯರು ಅತ್ಯಂತ ಕೆಟ್ಟದಾಗಿ ನಡೆದುಕೊಂಡಿರುವ ಉದಾಹರಣೆಗಳು ಇದ್ದ ಮಾತ್ರಕ್ಕೆ ಅದು ನಾವು ಆಕೆಗೆ ನೀಡುವ ಸ್ವಾತಂತ್ರ್ಯ- ಸಮಾನತೆ ನಿರಾಕರಿಸಲು ನೆಪವಾಗಬಾರದು.

ಈ ಅಂತರರಾಷ್ಟ್ರೀಯ ಮಹಿಳಾ ದಿನದ ಆಚರಣೆಯಂದು ಮಹಿಳೆಯರ ಬಗ್ಗೆ ನಾವು ಹೊಂದಿರುವ ಧೋರಣೆಗಳನ್ನು - ಭಾವನೆಗಳನ್ನು ಆಕೆಯ ಕುರಿತು ಆಡುವ ಕುಹುಕದ ಮಾತುಗಳನ್ನು ಸಾಧ್ಯವಾದಷ್ಟೂ ನಿಯಂತ್ರಿಸಿಕೊಳ್ಳುವ ಸಂಕಲ್ಪವನ್ನು ಮನದಲ್ಲಿಯೇ ಮಾಡಿ ಕೊಳ್ಳೋಣ. ಇದು ನಾವು ನಮ್ಮ ತಾಯಿ ಅಕ್ಕ ತಂಗಿ ಗೆಳತಿಯರಿಗೆ ಕೊಡಬಹುದಾದ ದೊಡ್ಡ ಕಾಣಿಕೆ .ಇದು ಕೇವಲ ಅಕ್ಷರಗಳಲ್ಲ ನಡವಳಿಕೆಗಳಾಗಲಿ ಎಂದು ಆಶಿಸುತ್ತಾ... ವಿಶ್ವ ಮಹಿಳಾ ದಿನದ ಶುಭಾಶಯಗಳನ್ನು ಹೇಳಿಕೊಳ್ಳುತ್ತಾ. ಭಾವುಕತೆಯನ್ನು ಬದಿಗಿಟ್ಟು ವಾಸ್ತವದ ನೆಲೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಹುಡುಕಾಟದಲ್ಲಿ... ಮಹಿಳೆ/ಹೆಣ್ಣು ಸೃಷಿಯ ಸಹಜ ಜೀವಿಯಾದರೂ ಸಮಾಜದಲ್ಲಿ ಅತ್ಯಂತ ಸಂಕೀರ್ಣ ವ್ಯಕ್ತಿತ್ವವಾಗಿ ಬಿಂಬಿತವಾಗಿದೆ. ಹೆಣ್ಣಿನ ಪಾತ್ರದಲ್ಲಿ ಎಷ್ಟೊಂದು ಏರಿಳಿತ ಇದೆ ಎಂದರೆ ಆ ವೈರುಧ್ಯಗಳನ್ನು ವಿಮರ್ಶಿಸಲೂ ಕಷ್ಟವಾಗುತ್ತದೆ.

ನಾನು ಹುಟ್ಟಿರುವುದೇ ತಾಯ ಗರ್ಭದಿಂದ ಮತ್ತು ಹೊರ ಜಗತ್ತಿಗೆ ಪ್ರವೇಶಿಸಿರುವುದೇ ತಾಯಿಯ ಮುಖಾಂತರ. ಹಾಗೇ ನಾನು ಜೀವನದಲ್ಲಿ ಅನುಭವಿಸಿದ ಅತ್ಯಂತ ಸುಖಮಯ ಕ್ಷಣ ನನ್ನ ಹೆಂಡತಿಯ  ಸಂಪರ್ಕದಿಂದ. ಹಾಗೆಯೇ ನನ್ನ ಅತ್ಯಂತ ಪ್ರೀತಿ ಪಾತ್ರ ಮಗಳು ಜನಿಸಿದ್ದು ನನ್ನ ಹೆಂಡತಿಯಿಂದ. ಈ  ಕಾರಣದಿಂದ ಮಹಿಳೆ ವಿಚಿತ್ರವಾಗಿ, ವಿಶಿಷ್ಟವಾಗಿ ಕಾಣುತ್ತಾಳೆ. ದೈಹಿಕ ಭಿನ್ನತೆ ಮತ್ತು ಸಂತತಿಯ ಮುಂದುವರಿಕೆಯ ಬಹುದೊಡ್ಡ ಜವಾಬ್ದಾರಿ ಹೆಣ್ಣನ್ನು ಭಿನ್ನವಾಗಿಸಿದೆ. ಸ್ವಾತಂತ್ರ್ಯ  -ಸಮಾನತೆ - ಗೌರವ - ಪೂಜನೀಯತೆ - ಶೋಷಣೆ - ಅತ್ಯಾಚಾರ - ಸತಿ ಸಹಗಮನ - ವರದಕ್ಷಿಣೆ - ಬಾಲ್ಯ ವಿವಾಹ ಎಲ್ಲವೂ ಇದರಿಂದಲೇ ಬಹುತೇಕ ನಿರ್ಧಾರವಾಗಿದೆ.

ಇದರಿಂದಾಗಿಯೇ ಹೆಣ್ಣಿನ ವ್ಯಕ್ತಿತ್ವ ಮತ್ತು ನಡವಳಿಕೆ ನಿರ್ಧಾರವಾಗುತ್ತದೆ. ಆಕೆಯ ಉಡುಗೆ ತೊಡುಗೆ ದೈಹಿಕ ಚಲನೆ ಹಾವ ಭಾವ ನಿಯಂತ್ರಿಸಲ್ಪಡುತ್ತದೆ. ವಿಶ್ವದಲ್ಲಿ ಬೆರಳೆಣಿಕೆಯಷ್ಟು ಸಮುದಾಯಗಳನ್ನು ಹೊರತು ಪಡಿಸಿದರೆ ಬಹುತೇಕ ಪುರುಷ ಪ್ರಧಾನ ಸಮಾಜವೇ ಆಗಿದೆ. ಹೆಣ್ಣು ಹೆರುವ ಕಾರಣಕ್ಕಾಗಿಯೇ ಆಕೆ ದೈಹಿಕ ದುರ್ಬಲಳೆಂದು ಪರಿಗಣಿಸಿ ಆಕೆಗೆ ಎರಡನೇ ದರ್ಜೆಯ ನಾಗರಿಕಳಂತೆ ಕಾಣಲಾಗುತ್ತದೆ. ಗಂಡಿನ ಮೇಲೆ ಹಣಕ್ಕಾಗಿ ಅಧಿಕಾರಕ್ಕಾಗಿ ದೌರ್ಜನ್ಯ ನಡೆದರೆ ಹೆಣ್ಣಿನ ಮೇಲೆ ಬಹುತೇಕ ಆಕೆಯೊಂದಿಗಿನ ದೈಹಿಕ ಮಿಲನಕ್ಕಾಗಿ ದೌರ್ಜನ್ಯ ನಡೆಯುತ್ತದೆ. ಅನಾಗರಿಕ ಸಮಾಜ ಬಿಡಿ ಈಗಿನ ಆಧುನಿಕ ಕಾಲದಲ್ಲೂ ಇದು ನಿರಂತರವಾಗಿ ನಡೆಯುತ್ತಲೇ ಇದೆ.

ಹಾಗೆಯೇ, ಅಮ್ಮ ಅಕ್ಕ ತಂಗಿ ಹೆಂಡತಿ ಮಗಳು ಈ ಸಂಬಂಧಗಳಿಗೆ ಹೊರಗಿನವರಿಂದ ಯಾವುದೇ ಅವಮಾನವಾದರೂ ಅದನ್ನು ಪುರುಷ ಸಹಿಸುವುದಿಲ್ಲ. ಆ ಕಾರಣಕ್ಕಾಗಿಯೇ ಅವರುಗಳು ಮೇಲೆ ನಿಯಂತ್ರಣ ಸಾಧಿಸಿ ಅವರನ್ನು ಪ್ರೀತಿಯ ಬಂಧನದಲ್ಲಿರಿಸಿ ಶೋಷಿಸುತ್ತಾನೆ.

ಹೆಣ್ಣನ್ನು ಎಲ್ಲಾ ದೃಷ್ಟಿಯಿಂದಲೂ ಪುರುಷ ಸಮಾನ ಎಂದು ಪರಿಗಣಿಸಿದರೆ ಆಕೆಯ ದೈಹಿಕ ಭಿನ್ನತೆ ಅದಕ್ಕೆ ಸಂಪೂರ್ಣ ಬೆಂಬಲ ಕೊಡುವುದಿಲ್ಲ. ಇಲ್ಲ ಆಕೆ ದುರ್ಬಲಳು ಎಂದು ಪರಿಗಣಿಸಿದರೆ ಆಕೆಗೆ ಪೂಜನೀಯ ಸ್ಥಾನ ನೀಡಬಹುದು. ಆದರೆ ಆ ಕಾರಣದಿಂದಲೇ ಆಕೆಯ ಶೋಷಣೆಗೆ ದಾರಿಯಾಗುತ್ತದೆ ಮತ್ತು ಈಗ ಆಗಿರುವುದೂ ಇದೇ. ಮಹಿಳೆಯರ ಮುಂದಿರುವ ಬಹುದೊಡ್ಡ ವಾಸ್ತವದ ಮತ್ತು ಪ್ರಾಯೋಗಿಕ ಸವಾಲು ಇದೇ ಆಗಿದೆ. ಆ ಕಾರಣದಿಂದಾಗಿಯೇ ಮುಖ್ಯವಾಗಿ ಭಾರತೀಯ ಸಮಾಜದಲ್ಲಿ ಮಹಿಳೆಯರು ಪ್ರಬುದ್ಧ ಮನಸ್ಥಿತಿ ಹೊಂದದೆ ತಾನು ತನ್ನ ಗಂಡ ಮಕ್ಕಳು ಎಂಬ ಸಂಕುಚಿತ ಮನೋಭಾವಕ್ಕೆ ಶರಣಾಗಿದ್ದಾರೆ.

ಇತ್ತೀಚೆಗೆ ಒಂದಷ್ಟು ಮೇಲ್ನೋಟದ ಬದಲಾವಣೆ ಕಾಣುತ್ತಿದ್ದರೂ ಮೂಲಭೂತ ಅಂಶಗಳು ಹಾಗೇ ಉಳಿದಿದೆ. ಆದರೆ ಖಂಡಿತವಾಗಿಯೂ ಎಲ್ಲಾ ದೃಷ್ಟಿಯಿಂದ ಸಮಗ್ರವಾಗಿ ಯೋಚಿಸಿದರೆ ಮಹಿಳೆ ಸ್ವಾತಂತ್ರ್ಯ ಮತ್ತು ಸಮಾನತೆಗೆ ಅರ್ಹಳು.

ಬಹುಶಃ ಈಗಿನ ಶಿಕ್ಷಣ, ಉದ್ಯೋಗ, ಮಹಿಳಾ ಮೀಸಲಾತಿ ಮುಂತಾದ ಕ್ರಮಗಳು ಸರಿಯಾಗಿ ಜಾರಿಯಾದರೆ ಮುಂದಿನ ಪೀಳಿಗೆಯವರು ಸಮ ಸಮಾಜದ ಜೀವನ ನಡೆಸಬಹುದು. ಎಲ್ಲಕ್ಕಿಂತ ಮುಖ್ಯ ನಾಗರಿಕ ಪ್ರಜ್ಞೆ ಮೂಡಿದರೆ ಯಾವುದೇ ಸಂದರ್ಭದಲ್ಲಿಯೂ ಯಾರ ಮೇಲೂ ದೌರ್ಜನ್ಯ ನಡೆಯದ ಪುರುಷ ಮತ್ತು ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯ ದ ಸಮಾಜ ನಿರ್ಮಾಣವಾಗಬಹುದು. ಹಾಗಾಗಲಿ ಎಂದು ನಿರೀಕ್ಷಿಸುತ್ತಾ ...ಒಂದಷ್ಟು ಅತ್ಯುತ್ತಮ ಬೆಳವಣಿಗೆ ಎಂದರೆ....

ಜಾಗತೀಕರಣದಿಂದ ಭಾರತದ ಅನೇಕ ಕ್ಷೇತ್ರಗಳಿಗೆ ದೊಡ್ಡ ಹೊಡೆತ ಬಿದ್ದಿರುವುದು ನಿಜ. ಸ್ಪರ್ಧೆ ಎದುರಿಸಲಾಗದೆ ಅನೇಕ ಸಾಂಪ್ರದಾಯಿಕ ಉದ್ಯಮಗಳ ಸಮುದಾಯಗಳು ನಾಶವಾದವು. ಆದರೆ ಆ ಜಾಗತೀಕರಣದಿಂದ ಅತಿಹೆಚ್ಚು ಲಾಭ ಪಡೆದದ್ದು ಭಾರತೀಯ ಆಧುನಿಕ ಮಹಿಳೆಯರು ಎಂಬುದು ನಿಸ್ಸಂಶಯ.

ನಿಧಾನವಾಗಿ ಮಹಿಳಾ ಶಿಕ್ಷಣ ಪ್ರಾಮುಖ್ಯತೆ ಪಡೆಯುತ್ತಿದ್ದಂತೆ ಮುಕ್ತ ಮಾರುಕಟ್ಟೆಯ ಪ್ರವೇಶದಿಂದ ವಿದೇಶಿ ಕಂಪನಿಗಳು, ಐಟಿ ಬಿಟಿ ಸೇವೆಗಳ ಬೆಳವಣಿಗೆಯೊಂದಿಗೆ, ಸಂಪರ್ಕ ಕ್ರಾಂತಿಯ ಫಲವಾಗಿ ಮಹಿಳೆಯರ ಉದ್ಯೋಗಾವಕಾಶ ಯಥೇಚ್ಛವಾಗಿ ಸೃಷ್ಟಿಯಾದವು. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧ್ಯವಾಯಿತು. ಅದರ ಪರಿಣಾಮ ನಗರೀಕರಣ ಹೆಚ್ಚಾಯಿತು. ಪುರುಷ ನಿರುದ್ಯೋಗ ಜಾಸ್ತಿಯಾಯಿತು. ಅವಿಭಕ್ತ ಕುಟುಂಬಗಳು ಅಸ್ತಿತ್ವ ಕಳೆದುಕೊಂಡವು. ಮಹಿಳಾ ಪರ ಕಾನೂನುಗಳು ಹೆಚ್ಚಾಗಿ ಜಾರಿ ಮಾಡಲಾಯಿತು. ಮಹಿಳೆಯರು ಸ್ವತಂತ್ರವಾಗಿ ಜೀವಿಸಬಹುದು ಎಂಬ ವಾತಾವರಣ ನಿರ್ಮಾಣವಾಯಿತು.

ಪತಿಯೇ ಪರದೈವ, ಮದುವೆ ಏಳೇಳು ಜನ್ಮದ ಸಂಬಂಧ, ಹೆಣ್ಣು ಗಂಡನ ಅಡಿಯಾಳು, ಹೆಣ್ಣು ಅಡುಗೆ ಮನೆಯ ಪರಿಚಾರಕಿ ಎಂಬ ನಂಬಿಕೆಯ ಸೌಧ ಕುಸಿಯ ತೊಡಗಿತು ಮತ್ತು ಈ ಬದಲಾವಣೆಗಳು ಅತಿವೇಗವಾಗಿ ಘಟಿಸಿದವು..

ಈ ಎಲ್ಲಾ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಾ.....
ಹೆಣ್ಣೆಂದರೆ ಪ್ರಕೃತಿಯಲ್ಲ
, ಹೆಣ್ಣೆಂದರೆ ಸೌಂದರ್ಯವಲ್ಲ, ಹೆಣ್ಣೆಂದರೆ ಮಮತೆಯಲ್ಲ, ಹೆಣ್ಣೆಂದರೆ ಪೂಜ್ಯಳಲ್ಲ, ಹೆಣ್ಣೆಂದರೆ ಅಬಲೆಯಲ್ಲ, ಹೆಣ್ಣೆಂದರೆ ಸಹನಾಮೂರ್ತಿಯಲ್ಲ, ಹೆಣ್ಣೆಂದರೆ ದೇವತೆಯಲ್ಲ, ಹೆಣ್ಣೆಂದರೆ ಭೋಗದ ವಸ್ತುವಲ್ಲ, ಹೆಣ್ಣಿರುವುದು ಗಂಡಿಗಾಗಿಯೇ ಅಲ್ಲ.

ಮೂರ್ಖ, ಹೆಣ್ಣೆಂದರೆ ನಮ್ಮ ನಿಮ್ಮಂತೆ ಒಂದು ಜೀವಿ ಅಷ್ಟೇ, ನೀನು ತಂದೆ ಅವಳು ತಾಯಿ, ನೀನು ಅಣ್ಣ, ಅವಳು ಅಕ್ಕ, ನೀನು ಗಂಡ, ಅವಳು ಹೆಂಡತಿ, ನೀನು ತಮ್ಮ ಅವಳು ತಂಗಿ ಅಷ್ಟೇ, ನಿನ್ನಂತೆ ಅವಳೂ ಒಳ್ಳೆಯವಳು, ನಿನ್ನಂತೆ ಅವಳೂ ಮೋಸಗಾತಿ, ನಿನ್ನಂತೆ ಅವಳೂ ತ್ಯಾಗಜೀವಿ, ನಿನ್ನಂತೆ ಅವಳೂ ಕೊಲೆಗಡುಕಿ, ಕಿತ್ತೊಗೆ ನಿನ್ನ ಭ್ರಮೆಯನ್ನು, ಅವಳೇನು ನಿಮ್ಮಪ್ಪನ ಆಸ್ತಿಯಲ್ಲ, ಅವಳೂ ನಿನ್ನಂತೆ ಸೃಷ್ಟಿಯ ಕೂಸು.......

ನೀನೂ ಪವಿತ್ರನಲ್ಲ ಅವಳೂ ಪವಿತ್ರಳಲ್ಲ, 15 ರ ಕನ್ಯತ್ವ ಅವಳಿಗೂ ಇದೆ, 15 ರ ಪುರುಷತ್ವ ನಿನಗೂ ಇದೆ, ಅದು ಪ್ರಕೃತಿಯ ನಿಯಮ, ಬಿಡು ಕೊಂಕು ನುಡಿಯುವುದನ್ನು,ನಿನ್ನಂತೆ ಅವಳದೂ ಜೇನಿನ ತುಟಿ, ನಿನ್ನಂತೆ ಅವಳಿಗೂ ಅಸಿಡಿಟಿ. ಬೆಪ್ಪ, ಜೀವಗಳ ಮುಂದುವರಿಕೆಗಾಗಿ ಇರುವ ಸಣ್ಣ ದೈಹಿಕ ಭಿನ್ನತೆಗೆ ಪಾವಿತ್ರ್ಯತೆಯ ಮುಖವಾಡವೇಕೆ, ಗೊಣಗಾಟವೇಕೆ.

ಅವಳಿಗೆ ಬೇಕಿರುವುದು ತೋರಿಕೆಯ ಗೌರವವಲ್ಲ, ನಿನ್ನ ಸಹಾನುಭೂತಿಯಲ್ಲ, ಗೌರವ ಎಲ್ಲರಿಗೂ ಒಂದೇ. ಅದು ಕೊಟ್ಟು ತೆಗೆದುಕೊಳ್ಳುವ ಕ್ರಿಯೆ,ಅದರಲ್ಲಿ ವಿಶೇಷವೇನಿಲ್ಲ.....ಸಮಾನತೆ, ಸ್ವಾತಂತ್ರ್ಯ ಆಕೆಯ ಇಂದಿನ ಅವಶ್ಯಕತೆ, ಅದಿಲ್ಲದೆ ಇನ್ನೆಲ್ಲವೂ ನಿನ್ನ ಬೂಟಾಟಿಕೆಗಳೇ, ಬಿಟ್ಡುಬಿಡು ಕೊಂಕು ನುಡಿಯುವುದನ್ನು, ಆಕೆಯ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು. ಅವಳು ಶೀಲವೂ ಅಲ್ಲ, ಅಶ್ಲೀಲವೂ ಅಲ್ಲ, ಸೃಷ್ಟಿಯ ಸಕಲ ಜೀವರಾಶಿಗಳಲ್ಲಿ ಒಬ್ಬಳಷ್ಟೆ... ಪ್ರೀತಿ ಪ್ರೇಮ ಪ್ರಣಯ ಸಂಸಾರ ಜಗಳ ಗುದ್ದಾಟ ಎಲ್ಲವೂ ನಡೆಯಲಿ ಸಮಾನತೆಯ ನೆಲೆಯಲ್ಲಿ, ಲಿಂಗಭೇದವಿಲ್ಲದ ಸ್ವಾತಂತ್ರ್ಯದ ಪರಿಸರದಲ್ಲಿ......
ಲೇಖನ-ವಿವೇಕಾನಂದ. ಎಚ್. ಕೆ.



 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗ: 25,000 ರೂ. ಲಂಚ ಪಡೆಯುತ್ತಿದ್ದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆಪಶ್ಚಿಮಘಟ್ಟ ಸಂರಕ್ಷಣೆ: ಕಸ್ತೂರಿ ರಂಗನ್ ವರದಿ ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ; ಬಿ.ಕೆ.ಹರಿಪ್ರಸಾದ್ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಶಾಸಕ ಎಸ್. ಸುರೇಶ್ ಕುಮಾರ್ ಅವರು "ಸಜ್ಜನ" ಎಂಬ ಮುಖವಾಡ ಧರಿಸಿದ ದುರ್ಜನಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಮುಂದಾದ ಎಚ್.ಡಿ. ರೇವಣ್ಣಹೈಕೋರ್ಟ್‌ನಿಂದ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಎಸ್‌ಐಟಿ ತನಿಖೆಗೆ ಆದೇಶಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ: ಯುಕೆಪಿ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಗೆ ಚುರುಕುವ್ಯಾಪಕ ಭ್ರಷ್ಟಾಚಾರ: ಕಾಮಗಾರಿಗಳ ಶ್ವೇತಪತ್ರ ಹೊರಡಿಸಲು ಆಂಜನೇಯ ಆಗ್ರಹ‘ಗೌರವಯುತ ಲಂಚ’: ಕಾಂಗ್ರೆಸ್ ಸರ್ಕಾರದ ಹೊಸ 'ಪ್ರಜಾಸೇವಾ ಶುಲ್ಕ' ಎಂದು ಆರ್. ಅಶೋಕ್ಸ್ವಪಕ್ಷೀಯರ ಆಕ್ರೋಶವೇ ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ: ಆರ್. ಅಶೋಕ್ ವಾಗ್ದಾಳಿ