ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರ್‌ಸಿಬಿ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದೆ. ವಿಕ್ಟರಿ ಪರೇಡ್ ನಡೆಸುವ ಸಾಧ್ಯತೆ ಇತ್ತು. ಆದರೆ ಭದ್ರತೆ ದೃಷ್ಟಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಇಲ್ಲವೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಆ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಶೆ ಆಗಿದೆ. ಆರ್‌ಸಿಬಿ ತಂಡ ನೇರವಾಗಿ ವಿಧಾನಸೌಧದಿಂದ ಬಸ್ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಲಿದ್ದು, ಸಂಜೆ 6 ಗಂಟೆಗೆ ಆಟಗಾರರಿಂದ ಮೈದಾನದಲ್ಲಿ ಪರೇಡ್ ನಡೆಯಲಿದೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದಿಂದ ವಿಜಯಯಾತ್ರೆ ಹಿನ್ನೆಲೆ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಪರಮೇಶ್ವರ್, ಭದ್ರತೆ ದೃಷ್ಟಿಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಇಲ್ಲ ಎಂದು ಹೇಳಿದರು.
ಆರ್‌ಸಿಬಿ ತಂಡದ ಆಟಗಾರರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಅಭಿನಂದನೆ ಸಲ್ಲಿಸಲಾಗುವುದು. ಈ ವೇಳೆ ಆರ್‌ಸಿಬಿ ತಂಡದ ಪರವಾಗಿ ಒಬ್ಬರು ಮಾತನಾಡಲಿದ್ದಾರೆ. ನಂತರ ಎಲ್ಲಾ ಆಟಗಾರರು ಬಸ್ನಲ್ಲೇ ವಿಧಾನಸೌಧದಿಂದ ಸ್ಟೇಡಿಯಂಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಖಡಕ್ ಸೂಚನೆ-ಸಂಭ್ರಮಾಚರಣೆ ವೇಳೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹೀಗಾಗಿ ಆಟಗಾರರು ಮತ್ತು ಅಭಿಮಾನಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಡಿಜಿ ಮತ್ತು ಐಜಿಪಿ ಸಲೀಂ ಹಾಗೂ ಸಂಚಾರಿ ಜಂಟಿ ಆಯುಕ್ತ M.N.ಅನುಚೇತ್ಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದರು.
ಮೊದಲೇ ಸವಾರರಿಗೆ ಬೇರೆ ಬೇರೆ ಮಾರ್ಗದ ವ್ಯವಸ್ಥೆ ಮಾಡಿ. ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಟ್ರಾಫಿಕ್ ನಿಭಾಯಿಸುವಂತೆ ಸಿಎಂ ತಿಳಿಸಿದರು.
ಅಭಿಮಾನಿಗಳೆಲ್ಲ ಚಿನ್ನಸ್ವಾಮಿ ಸ್ಟೇಡಿಯಂಗೆ ಬನ್ನಿ ಎಂದ ಡಿಕೆಶಿ-ರಾಮನಗರ ಜಿಲ್ಲೆಯ ಕನಕಪುರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, RCB ಆಟಗಾರರಿಗೆ ವಿಧಾನಸೌಧದ ಮುಂದೆ ಸನ್ಮಾನ ಮಾಡುತ್ತೇವೆ. ತೆರೆದ ವಾಹನದಲ್ಲಿ ಆಟಗಾರರು ತೆರಳಿದರೆ ತೊಂದರೆ ಆಗುತ್ತದೆ. ಹಾಗಾಗಿ ತೆರೆದ ವಾಹನದಲ್ಲಿ ತೆರಳುವುದು ಬೇಡ ಎಂದಿದ್ದೇವೆ. ಅಭಿಮಾನಿಗಳೆಲ್ಲ ಚಿನ್ನಸ್ವಾಮಿ ಸ್ಟೇಡಿಯಂಗೆ ಬನ್ನಿ. ಅಭಿಮಾನ ತಪ್ಪು ಎನ್ನಲ್ಲ, ಆದರೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಶಾಲಾ-ಕಾಲೇಜಿಗೆ ರಜೆ-
ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಹೇಳಿಕೆ ನೀಡಿ, ವಿಧಾನಸೌಧದ ಮುಂದೆ RCB ಟೀಂಗೆ ಸರ್ಕಾರದಿಂದ ಸನ್ಮಾನ, ಪ್ರೋತ್ಸಾಹ ನೀಡಲಾಗುತ್ತದೆ. ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಕ್ರೀಡಾಂಗಣಕ್ಕೆ ತೆರಳುವ ಮಾರ್ಗದಲ್ಲಿ ಸಂಚಾರ ದಟ್ಟವಾಗುವ ಸಾಧ್ಯತೆ ಇದ್ದು, ಮಧ್ಯಾಹ್ನದ ಬಳಿಕ ಶಾಲಾ-ಕಾಲೇಜಿಗೆ ರಜೆ ನೀಡಲು ಸೂಚಿಸಲಾಗಿದೆ ಎಂದರು.
ಬೆಳಗ್ಗೆ 11 ಗಂಟೆಗೆ ಅಹಮದಾಬಾದ್ನಿಂದ ಹೊರಟಿರುವ ಆರ್‌ಸಿಬಿ ತಂಡ ಟ್ರೋಫಿ ಸಮೇತ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಲಿದೆ. ವಿಶೇಷ ವಿಮಾನದಲ್ಲಿ HAL ಏರ್ಪೋರ್ಟ್ಗೆ ಆಗಮಿಸುವ ಆಟಗಾರರು ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ನಡೆಯಲಿದೆ.