ಇಡಿ ಅಧಿಕಾರಿಗಳಿಗೆ ಎಲ್ಲ ರೀತಿಯ ಮಾಹಿತಿ ನೀಡಲು ಸೂಚಿಸಿದ್ದೇನೆ-ಪರಮೇಶ್ವರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಟಿ ರನ್ಯಾ ರಾವ್ ಅವರ ಕ್ರೆಡಿಡ್ ಕಾರ್ಡ್ ಬಿಲ್ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಪಾವತಿ ಮಾಡಿರುವ ಆರೋಪದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟವಾಗಿ ತಿಳಿಸಿದ್ದಾರೆ.

- Advertisement - 

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರನ್ಯಾ ರಾವ್ ಅವರ ಕ್ರೆಡಿಟ್ ಕಾರ್ಡ್‌ನ 40 ಲಕ್ಷ ರೂ. ಬಿಲ್​​ ಸಂಸ್ಥೆಯಿಂದ ಪಾವತಿಯಾಗಿರುವುದಕ್ಕೆ ಸಂಬಂಧಿಸಿದಂತೆ ಈ ಪರಿಶೀಲನೆ ನಡೆಯುತ್ತಿದೆ ಎಂದು ಜಾರಿ ನಿರ್ದೇಶನಾಲಯವು ಕಳೆದ ರಾತ್ರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವುದು ನನಗೆ ಗೊತ್ತಿಲ್ಲ. ಅದರ ಬಗ್ಗೆ ಈ ಹಂತದಲ್ಲಿ ನಾನು ಪ್ರತಿಕ್ರಿಯಿಸುವುದಿಲ್ಲ. ಮೊದಲು ತನಿಖೆ ಮುಗಿಯಲಿ, ವರದಿ ಬರಲಿ. ಅದಕ್ಕೂ ಮುನ್ನ ಅನಗತ್ಯವಾಗಿ ನಾನು ಹೇಳಿಕೆ ನೀಡುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದರು.

- Advertisement - 

ಎಲ್ಲ ಹಂತದಲ್ಲೂ ನಮ್ಮ ಅಧಿಕಾರಿಗಳಿಗೆ ಸಹಕರಿಸುವಂತೆ ಸೂಚಿಸಿದ್ದೇನೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಮ್ಮ ಮೂರು ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.‌

ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ತುಮಕೂರು ಹಾಗೂ ಬೇಗೂರಿನಲ್ಲಿರುವ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯ, ಸಿದ್ದಾರ್ಥ ಅಕಾಡೆಮಿ ಆಫ್ ಹೈಯ‌ರ್ ಎಜುಕೇಷನ್ ಎಂಬ ವಿಶ್ವವಿದ್ಯಾಲಯ ಈ ಮೂರು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಹಕರಿಸುವಂತೆ ನಮ್ಮ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವರು ತಿಳಿಸಿದರು.

- Advertisement - 

ಇ.ಡಿ ಅಧಿಕಾರಿಗಳು ಶೈಕ್ಷಣಿಕ ಸಂಸ್ಥೆಗಳ ಕುರಿತಂತೆ ಏನನ್ನು ಕೇಳುತ್ತಾರೋ ಅದನ್ನೆಲ್ಲಾ ಒದಗಿಸಲು ಸೂಚನೆ ನೀಡಲಾಗಿದೆ. ಕೆಲ ಮಾಹಿತಿಗಳನ್ನು ಕಲೆ ಹಾಕಿ, ನಮ್ಮ ಅಕೌಂಟ್ಸ್ ವಿಭಾಗವನ್ನು ಪ್ರಶ್ನಿಸಿದ್ದಾರೆ. ಈ ನೆಲದ ಕಾನೂನಿನ ಮೇಲೆ ನಂಬಿಕೆ ಇಡುವ ವ್ಯಕ್ತಿಯಾಗಿ ಪರಿಶೀಲನೆಯಲ್ಲಿ ಏನು ಬರುತ್ತದೋ ಅದಕ್ಕೆ ಸಹಕರಿಸುತ್ತೇನೆ ಮತ್ತು ಸಿದ್ಧನಿದ್ದೇನೆ ಎಂದು ಅವರು ತಿಳಿಸಿದರು.
ಇಡಿ ಪರಿಶೀಲನೆಯಲ್ಲಿ ವೈಯಕ್ತಿಕ ವಿಚಾರಗಳಿಲ್ಲ
, ಸಿದ್ದಾರ್ಥ ಒಂದು ಶಿಕ್ಷಣ ಸಂಸ್ಥೆ ಎಂದು ಪ್ರತಿಕ್ರಿಯಿಸಿದರು.

ನ್ಯಾಯ ಸಮ್ಮತ ವ್ಯವಹಾರ:
ಹೆಚ್ಎಂಎಸ್ ಶಿಕ್ಷಣ ಸಂಸ್ಥೆ ಖರೀದಿಸುವಾಗ ಭೂಮಿಯ ಬೆಲೆಯನ್ನು ನಿಗದಿತ ಮೌಲ್ಯಕ್ಕಿಂತ ಕಡಿಮೆ ನಮೂದಿಸಲಾಗಿದೆ ಎಂಬ ಆರೋಪ ಕುರಿತು ಉತ್ತರಿಸಿದ ಗೃಹ ಸಚಿವರು
, ಇದನ್ನೆಲ್ಲಾ ನೋಡಲು ಪ್ರತ್ಯೇಕ ವ್ಯವಸ್ಥೆ ಇದೆ. ಕಂದಾಯ ಇಲಾಖೆಯ ಸಬ್ ರಿಜಿಸ್ಟ್ರಾರ್ ಮೌಲ್ಯಮಾಪನ ಮಾಡುತ್ತಾರೆ.

ಹೆಚ್​ಎಂಎಸ್ ಮತ್ತು ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ನಡುವೆ ನ್ಯಾಯ ಸಮ್ಮತ ವ್ಯವಹಾರ ನಡೆದಿದೆ. ಏನಾದರೂ ಲೋಪಗಳಾಗಿದ್ದರೆ ಅದನ್ನು ಪತ್ತೆ ಹಚ್ಚಲಿ. ಸದ್ಯಕ್ಕೆ ನಾನು ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ ಅವರು ತಿಳಿಸಿದರು.

 

Share This Article
error: Content is protected !!
";