ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂಡ್ಯ ನಗರದ ಐತಿಹಾಸಿಕ ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಪಾಲ್ಗೊಂಡಿದ್ದರು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಗಿಡ ನೆಟ್ಟು ನೀರೆರೆದು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮೈಶುಗರ್ ಶಾಲೆಯ ಅಮೃತ ಮಹೋತ್ಸವದ ನೆನಪಿಗಾಗಿ ಗಣ್ಯರು ಅಮೃತ ಧಾರೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಯಿತು.
ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಹೆಚ್. ಡಿ. ಕುಮಾರಸ್ವಾಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅವರು ಈ ಶಾಲೆಗೆ ವಾಹನದ ವ್ಯವಸ್ಥೆ ಇರಲಿಲ್ಲ ಅಂತಾ ಗೊತ್ತಾಯ್ತು. ಆಗ ಮೈಶುಗರ್ ಕಾರ್ಖಾನೆಯ ವಾಹನ ಕೊಟ್ಟಿದ್ದರು. ಅಂದು ಶಿಕ್ಷಣ ಅನ್ನೋದು ಮಠಗಳಿಂದ ನಡೆಯುತ್ತಿತ್ತು. ಸರ್ಕಾರದಿಂದ ಶಿಕ್ಷಣಕ್ಕೆ ದೊಡ್ಡ ಮಟ್ಟದ ಅವಕಾಶ ಇರಲಿಲ್ಲ. ಕೆ.ವಿ.ಶಂಕರಗೌಡ ಸೇರಿದಂತೆ ಹಿರಿಯರ ಶ್ರಮದಿಂದ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಲಾಯಿತು ಎಂದರಲ್ಲದೆ ಮೈಶುಗರ್ ಕಾರ್ಖಾನೆ ಹಲವಾರು ಏಳು ಬೀಳು ಕಂಡಿದೆ ಎಂದು ಕುಮಾರಸ್ವಾಮಿ ನೆನೆದರು.
ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದೆ. ನಾನು ಸಿಎಂ ಆಗಿದ್ದಾಗ ಕಾರ್ಖಾನೆಗೆ 100 ಕೋಟಿ ಮೀಸಲಿಟ್ಟಿದ್ದೆ. ನನ್ನ ಸರ್ಕಾರ ಬಿದ್ದ ಪರಿಣಾಮ ಅದು ಅಲ್ಲಿಗೆ ನಿಂತು ಹೋಯಿತು. ನನ್ನಿಂದ ಜಿಲ್ಲೆಗೆ ಅನುಕೂಲ ಆಗುತ್ತೆ ಅಂತಾ ಕಳೆದ ಚುನಾವಣೆಯಲ್ಲಿ ಗೆಲ್ಲಿಸಿದ್ದಿರಿ. ಬೃಹತ್ ಕೈಗಾರಿಕಾ ಸಚಿವನಾಗಿ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದೀರಿ ಆ ನಿರೀಕ್ಷೆ ಹುಸಿ ಮಾಡಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಎಲೆಕ್ಟ್ರಿಕ್ ಬಸ್: ಈ ಜಿಲ್ಲೆಗೆ ಕಾರ್ಖಾನೆ ತರಬೇಕಾದರೆ ರಾಜ್ಯ ಸರ್ಕಾರದ ಸಹಕಾರವೂ ಬೇಕಿರುತ್ತೆ. ಈ ವರ್ಷ ದೇಶಾದ್ಯಂತ 14 ಸಾವಿರ ಎಲೆಕ್ಟ್ರಿಕ್ ಬಸ್ ಕೊಡಲು ತೀರ್ಮಾನ ಮಾಡಲಾಗಿದೆ. ಅದರಲ್ಲಿ ಬೆಂಗಳೂರಿಗೆ ನಾಲ್ಕೂವರೆ ಬಸ್ ನೀಡಲಿದ್ದೇವೆ. ಬೇರೆ ರಾಜ್ಯಕ್ಕೆ 2 ಸಾವಿರ ಬಸ್ ನೀಡಲಾಗಿದೆ. ಜಿಲ್ಲೆಗೆ ಕೈಗಾರಿಕೆ ತರಲು ನಿತ್ಯ ಪ್ರಯತ್ನ ಮಾಡ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯ ಸರ್ಕಾರದ ಸಹಕಾರ ಪಡೆಯುವ ಪ್ರಯತ್ನ ಮಾಡ್ತೀನಿ. ರೈತ ಭವನ ಪುನಶ್ಚೇತನಕ್ಕೆ ನಾಲ್ಕು ಕೋಟಿ ಅನುದಾನ ಕೊಡಿಸಿದ್ದೇನೆ. ಆ ಕೆಲಸ ಯಾರಿಗೆ ಕೊಟ್ಟು ಮಾಡಿಸಬೇಕು ಅನ್ನೋದ್ರ ಚರ್ಚೆ ಆಗ್ತಿದೆ. ನನಗೆ ಬಹಳ ನೋವು ತಂದ ದೃಶ್ಯ ಎಂದರೆ ಅದು ಮಂಡ್ಯ ಮಿಮ್ಸ್ ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ನಿಧನ ಆಗಿದ್ದು. ಪೊಲೀಸರ ವರ್ತನೆಯಿಂದ ನಾಯಿ ಕಚ್ಚಿದ ಮಗು ಮರಣ ಹೊಂದಬೇಕಾಯಿತು ಎಂದು ಕುಮಾರಸ್ವಾಮಿ ಭಾವುಕರಾದರು.
ಸರ್ಕಾರಿ ಅಧಿಕಾರಿಗಳು ಹಣದಾಸೆಗೆ ಜೀವ ಕಳೆಯಬಾರದು. ಮಿಮ್ಸ್ ಆಸ್ಪತ್ರೆ ಸಮಸ್ಯೆಗೆ ಇವತ್ತು ತಕ್ಷಣ CSR ಫಂಡ್ ನಲ್ಲಿ ಎರಡೂವರೆ ಕೋಟಿ ಕೊಡಿಸಿದ್ದೇನೆ. ಮೈಶುಗರ್ ಶಿಕ್ಷಣ ಸಂಸ್ಥೆ ಉಳಿಸಲು ನಾನು ಬದ್ಧನಾಗಿದ್ದೇನೆ. ಅದಕ್ಕೆ ಬೇಕಾದ ನೀಲನಕ್ಷೆ ಸಿದ್ಧಪಡಿಸಿಕೊಡಿ. ಮಾದರಿ ಶಾಲೆ ಮಾಡಲು ಅಗತ್ಯ ನೆರವು ನೀಡುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉಚಿತ ಇಂಗ್ಲೀಷ್ ಶಾಲೆ ತರಬೇಕು ಎಂಬ ಕನಸಿತ್ತು. ಆದರೆ ನನ್ನ ದುರಾದೃಷ್ಟ ಜನರಿಗೆ ನನ್ನ ಮೇಲೆ ವಿಶ್ವಾಸ ಇಲ್ಲ. ನಾನು ಅಂತಹ ದೊಡ್ಡ ಕಾರ್ಯಕ್ರಮ ಕೊಡ್ತೇನೆ ಅಂತ ಇನ್ನ ನಂಬಿಕೆ ಇಲ್ಲ ಅನಿಸುತ್ತೆ ಎಂದು ಕುಮಾರಸ್ವಾಮಿ ನೋವು ತೋಡಿಕೊಂಡರು.
HMT ಉಳಿಸಲು ಪಣ: ಆಂಧ್ರದಲ್ಲಿ ಐತಿಹಾಸಿ ಕಾರ್ಖಾನೆ ಉಳಿಸಿದೆ. HMT ಫ್ಯಾಕ್ಟರಿ ಉಳಿಸಲು ಪಣತೊಟ್ಟಿದ್ದೇನೆ. ಆದ್ರೆ, ಅದಕ್ಕೆ ರಾಜ್ಯ ಸರ್ಕಾರ ಭೂಮಿ ಕೊಡುತ್ತಿಲ್ಲ. ನನಗೆ ಮಂಡ್ಯ ಜನ ಸ್ವಲ್ಪ ಸಮಯ ಕೊಡಿ. ನನ್ನ ಒಂದು ಕಣ್ಣು, ಹೃದಯ ಇಲ್ಲೇ ಇರುತ್ತೆ. ನಿಮ್ಮ ನಿರೀಕ್ಷೆ – ಆಸೆಗಳನ್ನ ನಿರಾಸೆಗೊಳಿಸಲ್ಲ. ನನಗೆ ಬೇರೆ ಯಾವುದೇ ಆಸೆ ಇಲ್ಲ. ನನಗೆ ಬೇಕಿರೋದು ನಿಮ್ಮ ಹೃದಯದಲ್ಲಿ ಸ್ಥಾನ. ಆ ಶಾಶ್ವತ ಸ್ಥಾನ ಪಡೆದು ನಂತರ ನಾನು ಈ ಮಣ್ಣಿಗೆ ಹೋಗ್ತೀನಿ ಎಂದು ಕುಮಾರಸ್ವಾಮಿ ಭಾವುಕರಾದರು.
ವೇದಿಕೆಯಲ್ಲಿ ಶ್ರೀ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದ ನಾಥ ಸ್ವಾಮೀಜಿ, ಸಾಹಿತಿ ಪ್ರೊ. ಕೃಷ್ಣೇಗೌಡರು, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಮೈಷುಗರ್ ಅಧ್ಯಕ್ಷ ಗಂಗಾಧರ್, ಶಾಸಕ ಹೆಚ್. ಟಿ. ಮಂಜು, ಮಾಜಿ ಸಚಿವ ಸಿ. ಎಸ್. ಪುಟ್ಟರಾಜು, ವಿಶ್ರಾಂತ ಮುಖ್ಯ ಶಿಕ್ಷಕ ಟಿ.ರಮೇಶ್ ಹಾಗೂ ಶಾಲೆಯ ಬೋಧಕ ವರ್ಗ ಸೇರಿ ಅನೇಕರು ಈ ಸುಂದರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.