ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮೊಬೈಲ್ ವ್ಯಾಮೋಹಕ್ಕೆ ಸಿಲುಕಿ ಮಕ್ಕಳು ದಾರಿ ತಪ್ಪುತ್ತಿರುವುದರಿಂದ ಪೋಷಕರುಗಳು ಮಕ್ಕಳ ಚಲನವಲನಗಳ ಕಡೆ ಹೆಚ್ಚಿನ ಗಮನ ಕೊಡಬೇಕೆಂದು, ಮಕ್ಕಳ ಕೈಗೆ ಪೆನ್ನು ಪುಸ್ತಕ ನೀಡುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮನವಿ ಮಾಡಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ವತಿಯಿಂದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಉದ್ಗಾಟಿಸಿ ಮಾತನಾಡಿದರು.
ಪ್ರತಿಭೆಯನ್ನು ಹುಡುಕಿ ಹೊರ ತರಬೇಕು. ಚಲನಚಿತ್ರ, ಮೊಬೈಲ್ ಮಕ್ಕಳನ್ನು ದಾರಿ ತಪ್ಪಿಸುತ್ತಿದೆ. ಸಮಾಜದಲ್ಲಿ ಸಾಧನೆ ಮಾಡಿ ಉನ್ನತ ಮಟ್ಟಕ್ಕೆ ಏರಿದವರು, ತಂದೆ ತಾಯಿಗಳನ್ನು ಮಕ್ಕಳು ಮಾದರಿಯನ್ನಾಗಿಟ್ಟುಕೊಳ್ಳಬೇಕೆ ವಿನಃ ಸಿನಿ ತಾರೆಯರು, ಕ್ರಿಕೆಟ್ ಆಟಗಾರರನ್ನಲ್ಲ. ಕಡು ಬಡತನದಿಂದ ದೊಡ್ಡ ಮಟ್ಟಕ್ಕೆ ಏರಿದವರು ನಿಮಗೆ ರೋಲ್ ಮಾಡಲ್‌ಗಳಾಗಬೇಕು. ಪದವಿ ಪಡೆದು ಉದ್ಯೋಗ ಹುಡುಕುವ ಬದಲು ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವಂತ ಉದ್ಯಮಿಗಳಾಬಹುದು ಎಂದು ಸಲಹೆ ನೀಡಿದರು.
ಮೊಬೈಲ್‌ನಿಂದ ಹೊರ ಬಂದು ಶಿಕ್ಷಣವಂತರಾಗಿ. ಮುಸ್ಲಿಂ ಸಮುದಾಯದಲ್ಲಿ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆಂಬ ತಪ್ಪು ಕಲ್ಪನೆಯಿದೆ. ಅದನ್ನು ಹೋಗಲಾಡಿಸಬೇಕಾಗಿರುವುದರಿಂದ ಪೋಷಕರುಗಳು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಿ ಎಂದು ವಿನಂತಿಸಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಗೌರವಾಧ್ಯಕ್ಷ ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‌ವುಲ್ಲಾ ಮಾತನಾಡಿ ಉರ್ದು, ಕನ್ನಡ, ಇಂಗ್ಲಿಷ್ ಭಾಷೆಯನ್ನು ಪ್ರತಿಯೊಬ್ಬರು ಕಲಿಯಲೇಬೇಕು. ಭಾನು ಮುಷ್ತಾಕ್‌ಗೆ ಬುಕರ್ ಪ್ರಶಸ್ತಿ ಸಿಕ್ಕಿರುವುದಕ್ಕೆ ಇಡಿ ದೇಶವೇ ಹೆಮ್ಮೆ ಪಡುತ್ತಿದೆ. ಮುಸ್ಲಿಂ ಸಮುದಾಯದ ಹೆಣ್ಣು ಮಗಳು ಮಾಡಿರುವ ಈ ಸಾಧನೆ ಕಡೆ ವಿಶ್ವವೇ ತಿರುಗಿ ನೋಡುವಂತಾಗಿದೆ. ವಿದ್ಯೆ ಕಲಿತು ತಂದೆ-ತಾಯಿ, ಗುರು-ಹಿರಿಯರಿಗೆ ಹೆಸರು ತನ್ನಿ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹ ಮಾಡಬೇಡಿ. ಚಿಕ್ಕಂದಿನಲ್ಲಿಯೇ ಹೆಣ್ಣು ಮಕ್ಕಳ ಮದುವೆ ಮಾಡಿದರೆ ಪೋಷಕರುಗಳಿಗೆ ಶಿಕ್ಷೆಯಾಗುತ್ತದೆ ಎಂದು ಎಚ್ಚರಿಸಿದರು.
ವಿದ್ಯೆಗಿಂತ ಶ್ರೇಷ್ಠದಾನ ಬೇರೆ ಯಾವುದೂ ಇಲ್ಲ. ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಕನ್ನಡಿಗರೆ. ಹಾಗಾಗಿ ಕನ್ನಡ ಓದುವುದು, ಬರೆಯುವುದನ್ನು ಮಾತ್ರ ಮರೆಯಬೇಡಿ ಎಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡುತ್ತ ಮುಸ್ಲಿಂ ಮಕ್ಕಳು ಚಿಕ್ಕಂದಿನಲ್ಲಿಯೇ ಕೆಲಸಕ್ಕೆ ಹೋಗುತ್ತಾರೆಂಬ ತಪ್ಪು ಕಲ್ಪನೆಯಿದೆ. ಅದಕ್ಕಾಗಿ ಪೋಷಕರುಗಳು ಕಡ್ಡಾಯವಾಗಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಜ್ಯೋತಿಭಾಪುಲೆ, ಫಾತಿಮಶೇಖ್ ಇವರುಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರು. ನೂರಾರು ಮುಸ್ಲಿಂ ಮಕ್ಕಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಾರೆ. ಪೂರ್ವಜರು, ಸರ್ಕಾರ, ಸಂವಿಧಾನ ಶಿಕ್ಷಣಕ್ಕೆ ಒತ್ತು ಕೊಟ್ಟಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮುಸ್ಲಿಂರು ಮಹಿಳೆಯರಿದ್ದಾರೆ. ಸುಮಾರು ನೂರಿನ್ನೂರು ವರ್ಷಗಳ ಹಿಂದೆ ಮುಸ್ಲಿಂ ಹೆಣ್ಣು ಮಕ್ಕಳು ಮನೆಯಿಂದ ಹೊರ ಬಂದು ಶಿಕ್ಷಣ ಪಡೆಯುವಂತ ವಾತಾವರಣವಿರಲಿಲ್ಲ. ಈಗ ಕಾಲ ಬದಲಾಗಿದೆ. ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣವಂತರಾಗುತ್ತಿದ್ದಾರೆಂದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಅಲಿ ಮಾತನಾಡಿ ನಾವುಗಳು ಓದುವ ಸಮಯದಲ್ಲಿ ಸೌಲತ್ತುಗಳಿರಲಿಲ್ಲ. ಅಲ್ಪಸಂಖ್ಯಾತ ಇಲಾಖೆಯಿಂದ ಶಿಕ್ಷಣಕ್ಕಾಗಿ ಮೂವತ್ತರಿಂದ ಐವತ್ತು ಲಕ್ಷ ರೂ.ಗಳವರೆಗೆ ಸಾಲ ಸಿಗುತ್ತದೆ. ಎಲ್ಲವನ್ನು ಬಳಸಿಕೊಂಡು ವಿದ್ಯಾವಂತರಾಗಿ ಇಂಜಿನಿಯರ್, ವೈದ್ಯರು, ಐ.ಎ.ಎಸ್. ಐ.ಪಿ.ಎಸ್. ಅಧಿಕಾರಿಗಳಾಗಲು ಈಗ ಅವಕಾಶವಿದೆ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದರು.
ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಯಕ್ಬಾಲ್ ಮಾತನಾಡಿ ಶಾಲೆ ಬಿಟ್ಟ ಮಕ್ಕಳನ್ನು ಹುಡುಕಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಖಾಸಗಿ ಶಾಲೆಗಳಲ್ಲಿನ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ದಾಖಲಿಸಿ. ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದು ಸರ್ಕಾರಿ ಶಾಲೆಯಲ್ಲಿಯೇ ಎನ್ನುವುದನ್ನು ಮರೆಯಬೇಡಿ. ಮಕ್ಕಳನ್ನು ಆದಷ್ಟು ಮೊಬೈಲ್‌ನಿಂದ ದೂರವಿರಿಸಿ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಯಾರಾದರೂ ಬಡ ಮಕ್ಕಳಿದ್ದರೆ ನಮ್ಮ ಸಂಘದಿಂದ ಶುಲ್ಕ ಪಾವತಿಸಲು ಸಿದ್ದರಿದ್ದೇವೆ. ಓದಿನಿಂದ ಮಾತ್ರ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬಹುದು ಎಂದು ಹೇಳಿದರು.
ಎ.ಜಾಕೀರ್‌ಹುಸೇನ್, ಹೆಚ್.ಆರ್.ಮಹಮದ್, ಮುದಸಿರ್‌ನವಾಜ್, ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸೈಯದ್ ಇಸ್ಮಾಯಿಲ್ ಇವರುಗಳು ಮಾತನಾಡಿದರು. ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್ ಅಧ್ಯಕ್ಷತೆ ವಹಿಸಿದ್ದರು.
ಕಾಯಾಧ್ಯಕ್ಷ ನವೀದ್ ಅಬ್ದುಲ್ಲಾ, ಎಸ್.ಎಂ.ವಾಹಿದ್, ಮುಸ್ಲಿಂ ಹಾಸ್ಟೆಲ್ ಅಧ್ಯಕ್ಷ ನಯಾಜ್‌ಬಾಷ ಇವರುಗಳು ವೇದಿಕೆಯಲ್ಲಿದ್ದರು. ಧಾರ್ಮಿಕ ಚಿಂತಕ ಮೌಲಾನ ಎಜಾಜುಲ್ಲಾ ಸಾನಿಧ್ಯ ವಹಿಸಿದ್ದರು.
ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಮುಸ್ಲಿಂ ಸಮುದಾಯ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು.