ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ದೇವರ ಮೇಲೆ ಬಲವಾದ ನಂಬಿಕೆ, ವಿಶ್ವಾಸದಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ. ವಿಶೇಷವಾಗಿ ಪ್ರತಿನಿತ್ಯ ನಾವು ಭಗವಂತನನ್ನು ನಂಬಿ ಜೀವನ ಮಾಡುತ್ತಾ ಬಂದಿದ್ದೇವೆ.
ಪ್ರತಿಯೊಬ್ಬರೂ ತಮ್ಮದೇಯಾದಪೂಜಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ದೇವರನ್ನು ಒಲಿಸಿಕೊಳ್ಳುವ ಯತ್ನ ಮಾಡುತ್ತಿದ್ಧಾರೆ. ಭಗವಂತನ ಕೃಪೆ ನಮ್ಮಮೇಲೆ ಬಿದ್ದಾಗಮಾತ್ರ ನಾವೆಲ್ಲರೂ ಉತ್ತಮ ಬದುಕುರೂಪಿಸಿಕೊಳ್ಳಲು ಸಾಧ್ಯವೆಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಭಾನುವಾರ ನಗರಂಗೆರೆ ಗ್ರಾಮದಲ್ಲಿ ನೂತನವಾಗಿ ಭಕ್ತರು ನಿರ್ಮಿಸಿದ ಶ್ರೀಪಾತಲಿಂಗೇಶ್ವರಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಪೂಜೆ ನೆರವೇರಿಸಿ ಮಾತನಾಡಿದರು. ದೇವಸ್ಥಾನ ನಿರ್ಮಾಣ ಕಾರ್ಯ ಸುಲಭವಲ್ಲ, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಎಲ್ಲರಲ್ಲೂ ಜಾಗೃತಿ ಉಂಟಾಗಿದೆ.
ನಮ್ಮ ಪೂರ್ವಜರು ಪ್ರತಿಹಳ್ಳಿಯಲ್ಲೂ ಅನೇಕ ಸಂಕಷ್ಟಗಳನ್ನು ಎದುರಿಸಿ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದರು. ದೇವಸ್ಥಾನಗಳ ನಿರ್ಮಾಣ, ದೇವಮೂರ್ತಿಗಳ ಪ್ರತಿಷ್ಠಾಪನೆ ಪುಣ್ಯಕಾರ್ಯವಾಗಿದ್ದು, ಅದನ್ನು ಇಂದೂ ಸಹ ಭಕ್ತರು ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯವಿಷಯವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಪಂಚಾಯಿತಿ ಸದಸ್ಯ ಎನ್.ಮಂಜುನಾಥ, ಪಾತಲಿಂಗೇಶ್ವರ ದೇವಸ್ಥಾನ ನಿರ್ಮಾಣ ಕಾರ್ಯಯಾವುದೇ ರೀತಿಯ ತೊಂದರೆಯಿಲ್ಲದೆ ಯಶಸ್ವಿಯಾಗಿ ನಡೆದಿದೆ. ದೇವಸ್ಥಾನ ನಿರ್ಮಾಣ ಮಾಡುವ ಸಂಕಲ್ಪವನ್ನು ಭಕ್ತರಿಗೆ ತಿಳಿಸಿದಾಗ ಎಲ್ಲರೂ ಕೈಜೋಡಿಸಿದ್ಧಾರೆ.
ಶಾಸಕರು ದೇವಸ್ಥಾನವೂ ಸೇರಿದಂತೆ ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸ್ವಯಂಸ್ಪೂರ್ತಿಯಿಂದ ನೆರವು ನೀಡುತ್ತಾ ಬಂದಿದ್ಧಾರೆ. ಶಾಸಕರಿಗೆ ಮುಂದಿನ ರಾಜಕೀಯ ಜೀವನದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿ ಎಂದು ಸ್ವಾಮಿಯನ್ನು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ಜಿ.ಟಿ.ಶಶಿಧರ, ಗ್ರಾಪಂ ಸದಸ್ಯರಾದ ಎಂ.ಕುಮಾರಸ್ವಾಮಿ, ರಂಗಸ್ವಾಮಿ, ಮಾಜಿ ಸದಸ್ಯೆ ಶೈಲಜಾ, ಗ್ರಾಮದ ಮುಖಂಡ ಸಿ.ಓಬಯ್ಯ, ಮೈನಾಬಾಬು, ರಂಗನಾಥ, ದ್ಯಾಮಣ್ಣ, ಪ್ರದೀಪ್, ನಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು. ಪುರೋಹಿತರಾದ ಪ್ರದೀಪ್‌ಶರ್ಮ, ಪ್ರವೀಣ್‌ಶರ್ಮ, ರಾಘವೇಂದ್ರಪೂಜಾ ಕಾರ್ಯನಡೆಸಿದರು.

