ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೊನೆಗೂ ಐಪಿಎಲ್ ಕಪ್ ಜಯಿಸಿ ತವರಿಗೆ ಮರಳಿರುವ ಆರ್ಸಿಬಿ ಕ್ರಿಕೆಟ್ ತಂಡಕ್ಕೆ ಬೆಂಗಳೂರಿನಲ್ಲಿ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರೆಯಿತು. ಗುಜರಾತ್ನ ಅಹ್ಮದಾಬಾದ್ನಿಂದ ಬೆಂಗಳೂರಿನ ಹೆಚ್ಎಎಲ್ಗೆ ಬಂದಿಳಿದ ಆರ್ಸಿಬಿ ಆಟಗಾರರನ್ನು ಸರ್ಕಾರದ ಪರವಾಗಿ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಿಸಿದರು.
ಆರ್ಸಿಬಿ ಆಟಗಾರರನ್ನು ವಿಶೇಷ ಬಸ್ಸುಗಳಲ್ಲಿ ವಿಧಾನಸೌಧಕ್ಕೆ ಕರೆದುಕೊಂಡು ಬರಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಟಗಾರರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ನಂತರ ವಿಧಾನಸೌಧದಿಂದ ಆಟಗಾರರನ್ನು ನೇರವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 6 ಗಂಟೆಗೆ ಪರೇಡ್ ನಡೆಯಿತು. ನಂತರ ಆಟಗಾರರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಅಹಮದಾಬಾದ್ನಿಂದ ಬೆಂಗಳೂರಿಗೆ ಬರುವ ಆರ್ಸಿಬಿ ಆಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸುವ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂಗೆ ಕರೆದೊಯ್ಯಲು ಈ ಹಿಂದೆ ಚಿಂತನೆ ನಡೆಸಲಾಗಿತ್ತು. ಆದರೆ, ಭದ್ರತೆಯ ದೃಷ್ಟಿಯಿಂದ ಅದಕ್ಕೆ ಅವಕಾಶ ನೀಡಲಿಲ್ಲ.
ಮೊದಲಿಗೆ, ಆರ್ಸಿಬಿ ತಂಡದ ಆಟಗಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ನಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು. ಇದೇ ವೇಳೆ, ತಂಡದ ಪರವಾಗಿ ಒಬ್ಬರು ಆಟಗಾರರು ಮಾತನಾಡಿದರು. ನಂತರ ಎಲ್ಲಾ ಆಟಗಾರರು ಬಸ್ನಲ್ಲಿ ಸ್ಟೇಡಿಯಂಗೆ ತೆರಳಿದರು.