ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ ವಿಚಾರವಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ ಅಧಿಕಾರಕ್ಕೆ ಯಾರು ಶಾಶ್ವತರಲ್ಲ.
ಚಕ್ರ ತಿರುಗುತ್ತಲೇ ಇರುತ್ತದೆ. ಸಮಯ ಸರಿಯಾಗಿಲ್ಲದಿದ್ದರೆ ಏನು ಮಾಡಲಾಗದು. ನೀರು ಇದ್ದಾಗ ಅಷ್ಟೇ ಜಿಗಿಯಬಹುದು ಎಂದು ಮಾರ್ಮಿಕವಾಗಿ ತಿಳಿಸುವ ಮೂಲಕ ಹೆಸರು ಬದಲಾವಣೆಗೆ ಸಚಿವರು ವಿರೋಧ ವ್ಯಕ್ತಪಡಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ ಟಾಂಗ್ ಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಅನೇಕ ಊರುಗಳ ಹೆಸರು ಬದಲಾವಣೆ ಮಾಡಲಾಗಿದೆ. ನಮ್ಮ ರಾಜ್ಯದಲ್ಲೂ ಹೊಸಪೇಟೆ, ವಿಜಯನಗರ ನಾಮಕರಣ ಮಾಡಲಾಗಿದೆ. ಅದೇ ರೀತಿ ಏನೋ ಉದ್ದೇಶ ಇಟ್ಟುಕೊಂಡು ಡಿಸಿಎಂ ಡಿಕೆ ಶಿವಕುಮಾರ್ ಈ ರೀತಿ ಮಾಡಿರಬಹುದು. ಆದರೆ ಅಧಿಕಾರಕ್ಕೆ ಯಾರೂ ಶಾಶ್ವತರಲ್ಲ, ಚಕ್ರ ತಿರುಗುತ್ತಲೇ ಇರುತ್ತದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರವಾಗಿ ಮಾತನಾಡಿದ್ದೇವೆ. ಸಮಯ ನಮ್ಮ ಪರವಾಗಿ ಇಲ್ಲದೆ ಇದ್ದಾಗ ಏನು ಮಾಡಲಾಗದು. ಜಿಗಿಯಬೇಕಾದರೆ ನೀರು ಇರಬೇಕು. ನೀರು ಇದ್ದಾಗ ಜಿಗಿಯಬಹುದು. ಅಲ್ಲಿಯವರೆಗೂ ಕಾಯುತ್ತೇವೆ ಎಂದು ಅವರು ತೀಕ್ಷ್ಣವಾಗಿ ಹೇಳಿದರು.
ಬೆಳಗಾವಿ ರಾಜಕಾರಣದ ವಿಷಯಕ್ಕೆ ಸಂಬಂಧಿಸಿದ ಸತೀಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ಬಣಗಳ ಮಧ್ಯೆ ಮುಸುಕಿನ ಗುದ್ದಾಟ ನಡೆದಿತ್ತು. ಹಲವು ಬಾರಿ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿದ್ದರು. ಇದೀಗ ರಾಮನಗರ ಹೆಸರು ಬದಲಾವಣೆ ಸಂದರ್ಭ ಸತೀಶ್ ಮಾರ್ಮಿಕವಾಗಿ ಮಾತನಾಡಿರುವುದು ಕುತೂಹಲ ಸೃಷ್ಟಿಸಿದೆ.
ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಬಗ್ಗೆ ಕೆಲವಾರು ತಿಂಗಳುಗಳ ಹಿಂದೆಯೇ ಡಿಕೆ ಶಿವಕುಮಾರ್ ಪ್ರಸ್ತಾಪಿಸಿದ್ದರು. ಜೆಡಿಎಸ್ ಮುಖಂಡ, ಕೇಂದ್ರ ಸಚಿವ ಕುಮಾರಸ್ವಾಮಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಒಂದು ವೇಳೆ ಹೆಸರು ಬದಲಿಸಿದ್ದೇ ಆದಲ್ಲಿ ಮತ್ತೆ ತಾವು ಅಧಿಕಾರಕ್ಕೆ ಬಂದಾಗ ನೋಡಿಕೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದನ್ನು ಸ್ಮರಿಸಬಹುದಾಗಿದೆ.
ಆಡಳಿತ ರೂಢರ ಪರ ಪ್ರತಿಕ್ಷಗಳ ವಿರೋಧದ ಮಧ್ಯೆ, ಹೆಸರು ಬದಲಾವಣೆ ಪ್ರಸ್ತಾವನೆಗೆ ಗುರುವಾರ ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಬಗ್ಗೆ ಕುಮಾರಸ್ವಾಮಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಡಿಕೆ ಶಿವಕುಮಾರ್ ತಮ್ಮ ಜಮೀನಿನ ಮೌಲ್ಯ ಹೆಚ್ಚಿಸಿಕೊಳ್ಳಲು ಈ ಕ್ರಮ ಕೈಗೊಂಡಿರಬಹುದು ಎಂದು ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದರು.