ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಧೀಮಂತ ನಾಯಕ ಅರಸು – ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ಧೀಮಂತ ನಾಯಕ. ಅವರ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ವಿಧಾನಸೌಧದ ಬ್ಯಾಕ್ವೆಂಟ್ ಹಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಡಿ. ದೇವರಾಜ ಅರಸು ಅವರು ಕನ್ನಡನಾಡಿನ ಒಬ್ಬ ಪ್ರಮುಖ ರಾಜಕಾರಣಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ. ಅವರ ಅವಧಿಯಲ್ಲಿ  ಭೂಸುಧಾರಣೆ, ಹಿಂದುಳಿದ ವರ್ಗಗಳ ಕಲ್ಯಾಣ, ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದರು. ಅವರು ಜಾರಿಗೆ ತಂದ ಗೇಣಿದಾರಿಕೆ ಕಾಯಿದೆ (Land Reforms Act) ರೈತರು ಮತ್ತು ಹಿಂದುಳಿದ ವರ್ಗದವರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತಂದವು.

- Advertisement - 

ದೇವರಾಜ ಅರಸು ಅವರು ಉಳುವವನಿಗೆ ಭೂಮಿ ಎಂಬ ಕ್ರಾಂತಿಕಾರಿ ಆಲೋಚನೆಯನ್ನು ಜಾರಿಗೊಳಿಸಿದರು. ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ಹಾವನೂರು ಆಯೋಗದ ರಚನೆ  ಮಾಡುವ ಮೂಲಕ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ಎಲ್ಲಾ ವರ್ಗದವರಿಗೂ ಸಮಾನ ಅವಕಾಶಗಳನ್ನು ಒದಗಿಸಲು ಶ್ರಮಿಸಿದರು. ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯುತ್ತಾರೆ.

ದೇವರಾಜ ಅರಸು ಅವರು ನ್ಯಾಯದ ಪ್ರತಿಪಾದಕರಾಗಿದ್ದರು. ಅವರು ಶೋಷಿತ ವರ್ಗಗಳನ್ನು, ವಿಶೇಷವಾಗಿ ತುಳಿತಕ್ಕೊಳಗಾದವರು ಮತ್ತು ಹಿಂದುಳಿದ ಜಾತಿಗಳನ್ನು  ಸುಧಾರಣೆ ಮಾಡುವುದು ಅವರ ಗುರಿಯಾಗಿತ್ತು. ಅರ್ಥಿಕತೆಯಿಂದ ಹಿಂದುಳಿದಿರುವ ಸಮುದಾಯಗಳನ್ನು ಸಬಲೀಕರಣಗೊಳಿಸುವುದು ಅವರ ಆದ್ಯತೆಯಾಗಿತ್ತು. ಮಲ ಹೊರುವ ಪದ್ದತಿ, ಜೀತ ಪದ್ದತಿಯನ್ನು ರದ್ದು ಮಾಡಿದರು.

- Advertisement - 

ಪ್ರತಿ ವರ್ಷ ಡಿ. ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ವರ್ಷ ಕಲ್ಲೆ ಶಿವೋತ್ತಮರಾವ್ ಅವರು ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಹಿರಿಯ ಪತ್ರಕರ್ತರಾದ ಕಲ್ಲೆ ಶಿವೋತ್ತಮರಾವ್ ಅವರಿಗೆ ಬಹಳ ಹಿಂದೆಯೆ ಪ್ರಶಸ್ತಿ ದೊರಕಬೇಕಿತ್ತು. ಇಳಿ ವಯಸ್ಸಿನಲ್ಲಿ ಆಯ್ಕೆ ಮಾಡಿರುವುದು ಬಹಳ ಸಮಂಜಸವಾಗಿದೆ. ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.
ಡಿ. ದೇವರಾಜ ಅರಸು ಅವರು ರಾಜ್ಯದ ಮುಖ್ಯಂತ್ರಿಗಳಾಗಿ ಐದು ವರ್ಷ ಸಂಪೂರ್ಣ ಅವಧಿಯನ್ನು ಪೂರೈಸಿದರು. ನಾನು ಕೂಡ ಸಂಪೂರ್ಣವಾಗಿ ಪೂರೈಸಿದ್ದೇನೆ. ಈ ವಿಷಯದಲ್ಲಿ ನಮ್ಮಿಬ್ಬರಲ್ಲೂ ಸಾಮ್ಯತೆ ಇದೆ ಎಂದು ತಿಳಿಸಿದರು.

ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ರಾಜಕೀಯ ಸ್ವಾತಂತ್ರ್ಯ ಸಿಗುತ್ತದೆ ಎಂದು ಅರಸು ಅವರು ನಂಬಿಕೆ ಇಟ್ಟಿದ್ದರು. ಅಸಮಾನತೆ ಎಲ್ಲಿಯವರೆಗೆ ಇರುತ್ತದೆ ಅಲ್ಲಿಯವರೆಗೆ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ. ಎಲ್ಲ ಜನರಿಗೂ ಸಮಾನ ಅವಕಾಶ ಸಿಗಬೇಕೆಂದು ಅವರು ಪ್ರತಿಪಾದನೆ ಮಾಡಿದರು. ದಲಿತರು, ಬಡವರು, ಅಸ್ಪಸಂಖ್ಯಾತರಿಗೆ ಶಕ್ತಿ ತುಂಬುವ ಕೆಲಸ ಮಾಡಿದರು. ಉಳುವವನೆ ಭೂ ಒಡೆಯ ಎಂಬ ಕಾನೂನನ್ನು ಜಾರಿಗೆ ತರುವುದು ಸುಲಭವಲ್ಲ. ಕಾನೂನನ್ನು ಜಾರಿಗೆ ತಂದು ರೈತರಿಗೆ ಶಕ್ತಿ ತುಂಬಿದರು.

ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ತಲಾದಾಯ ಹೆಚ್ಚಾಗಿದೆ. 2013-14ರಲ್ಲಿ ರೂ.1,04,000 ತಲಾದಾಯವಿದ್ದು, 2025-26ರಲ್ಲಿ 2,05,000 ಆಗಿದೆ. ದೇಶದಲ್ಲಿ ಕರ್ನಾಟಕ ತಲಾದಾಯದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಾನು ಮುಖ್ಯಮಂತ್ರಿಯಾದಾಗ ಸಮಾಜದಲ್ಲಿ ಯಾರು ಅನ್ನಕ್ಕಾಗಿ ಇನ್ನೊಬ್ಬರ ಮನೆ ಹತ್ತಿರ ಕೈಒಡ್ಡಬಾರದು ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ಒದಗಿಸಲು, ಎಲ್ಲರಿಗೂ ಸಮಾನ ಅವಕಾಶ ನೀಡಲು ಪ್ರಯತ್ನ ಮಾಡಿದರು. ಕರ್ನಾಟಕ ರಾಜ್ಯ ಆಗಲು ಇವರು ಕಾರಣಕರ್ತರು. ಕರ್ನಾಟಕ ರಾಜ್ಯವಾಗಿ 50 ವರ್ಷ ಸಂಭ್ರಮದಲ್ಲಿ ಕನ್ನಡ ಭುವನೇಶ್ವರಿ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.

ಇಂದು ಡಿ. ದೇವರಾಜ ಅರಸು ಹಾಗೂ ಮಾಜಿ ಪ್ರಧಾನ ಮಂತ್ರಿ ರಾಜೀವ್‍ಗಾಂಧಿ ಅವರ ಅವರ ಜನ್ಮ ದಿನಾಚರಣೆ. ಇಬ್ಬರೂ ಹಾಕಿಕೊಟ್ಟ ಆಡಳಿತದ ಹಾದಿಯಲ್ಲಿ ಅವರ ಆಲೋಚನೆ, ಚಿಂತನೆಗಳು ತಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹೇಳಿದರು.

ರಾಜೀವ್‍ಗಾಂಧಿಯವರು ಆಧುನಿಕ ಭಾರತ 21ನೇ ಶತಮಾನಕ್ಕೆ ಕೊಂಡಯ್ಯಲು ಎಲ್ಲಾ ಸಿದ್ದತೆ ಮಾಡಲು ಪ್ರಯತ್ನಿಸಿದರು. ಮಹಿಳೆಯರಿಗೆ ಮೀಸಲಾತಿ ನೀಡಲು ಕಾರಣಕರ್ತರಾಗಿದ್ದರು ಎಂದು ತಿಳಿಸಿದರು.
ಸಮಾಜದಲ್ಲಿ ಉಪಕಾರ ಮಾಡಿರುವವರನ್ನು ಸ್ಮರಿಸುವ, ಗೌರವಿಸುವ ಕೆಲಸ ಮಾಡಬೇಕು. ನಮ್ಮ ಆಲೋಚನೆ, ಚಿಂತನೆಯಲ್ಲಿ ಬದ್ಧತೆ ಇರಬೇಕೆಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ್ ಎಸ್ ತಂಗಡಗಿ ಮಾತನಾಡಿ ರಾಜ್ಯದಲ್ಲಿ ದೇವರಾಜ ಅರಸು ಅವರು ಉಳುವವನೆ ಭೂ ಒಡೆಯ ಎಂಬ ಕಾನೂನನ್ನು ಜಾರಿಗೆ ಮೂಲಕ ಕಟ್ಟಕಡೆಯ ವ್ಯಕ್ತಿಯನ್ನು ಭೂಮಾಲೀಕ ಆಗುವ ಹಾಗೆ ಮಾಡಿದರು. ಧ್ವನಿ ಇಲ್ಲದ ಜನರಿಗೆ ಶಕ್ತಿ ನೀಡಿದರು. ಇಂದು ರಾಜ್ಯದ ಎರಡನೇ ದೇವರಾಜ ಅರಸು ಎಂದು ನಮ್ಮ ಮುಖ್ಯಮಂತ್ರಿಗಳನ್ನು ರಾಜ್ಯದ ಜನತೆ ಕರೆಯುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಸು ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಎಂದು ರಾಜ್ಯಕ್ಕೆ ನಾಮಕಾರಣ ಮಾಡಿದ ವೇಳೆ ದೇವರಾಜ ಅರಸು ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಮ್ಮ ಮುಖ್ಯಮಂತ್ರಿಗಳ ಸದಾಶಯದಿಂದಾಗಿ ಇಡೀ ವರ್ಷ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಆಚರಣೆ ಮಾಡಿದೆವು ಎಂದು ತಿಳಿಸಿದರು.

ಹಿರಿಯ ಪತ್ರಕರ್ತರಾದ ಕಲ್ಲೆ ಶಿವೋತ್ತಮರಾವ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಹರ್ಷದ ಸಂಗತಿಯಾಗಿದೆ. ಪತ್ರಕರ್ತರಾಗಿ ಹಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಬರವಣಿಗೆಯಿಂದ ಸಮಾಜ ಹಾಗೂ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದರು. ವಿಶೇಷ ಎಂದರೆ, ಅಂದು ಅರಸು ಅವರಿಗೆ ರಾಜಕೀಯ ಸಲಹೆ  ನೀಡುತ್ತಿದ್ದ ಕಲ್ಲೆ ಶಿವೋತ್ತಮರಾವ್ ಅವರು ಪ್ರಶಸ್ತಿಗೆ  ಭಾಜನರಾಗಿರುವುದು ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ಶಿವಾಜಿನಗರ ವಿಧಾನಸಭಾ ಕ್ಷೇತ್ರ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ ದಿವಂಗತ ದೇವರಾಜು ಅರಸು ಬಡವರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಧ್ವನಿಯಾಗಿಯಾಗಿದ್ದರು. ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಸಂವಿಧಾನದ ಆಶಯ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ಸಿಗಬೇಕು. ಈ ದಿಸೆಯಲ್ಲಿ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಡಿ. ದೇವರಾಜ ಅರಸು ಪ್ರಶಸ್ತಿಗೆ ಪಾತ್ರರಾದ ಕಲ್ಲೆ ಶಿವೋತ್ತಮರಾವ್ ಅವರ ಮಗ ತಂದೆಯ ಭಾಷಣವನ್ನು ಓದಿದರು. ನನಗೆ ಪ್ರಶಸ್ತಿ ಸಿಕ್ಕಿರುವುದು ಸಂತೋಷದ ವಿಷಯ. ನನ್ನ ವೃತ್ತಿ ಜೀವನದ 50 ವರ್ಷದಲ್ಲಿ ಸಂತೋಷ ದು:ಖ ಸಮಾನವಾಗಿ ಸಿಕ್ಕಿದೆ. ಹಿಂದುಳಿದ, ದಲಿತ, ಬಡವರ ಪರ ಪತ್ರಿಕೆ ನಡೆಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಕೊಡಿಸುವುದು ಮಾಧ್ಯಮದ ಆಶಯವಾಗಿತ್ತು. ಸಮಾಜ ಹಾಗೂ ಸರ್ಕಾರದ ಪರವಾಗಿ ಮಾಧ್ಯಮಗಳು ಸೇತುವೆಯಾಗಬೇಕು ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಪತ್ರಕರ್ತರಾದ ಕಲ್ಲೆ ಶಿವೋತ್ತಮರಾವ್ ಅವರನ್ನು ಡಿ. ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ  ಕುಮಾರಿ ಗಾನವಿ ಪಿ ಅವರಿಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ನಿ) ದಿಂದ 2025-26ನೇ ಸಾಲಿನಲ್ಲಿ ಬ್ಯಾಚುಲರ್ಸ್ ಅಫ್ ಇಂಜಿನಿಯರಿಂಗ್ ಕೋರ್ಸ್‍ನ ಪೂರ್ಣ ಅವಧಿಯ ವಿದ್ಯಾಭ್ಯಾಸಕ್ಕಾಗಿ ರೂ. ಮೂರು ಲಕ್ಷ ಸಾಲದ ಮೊತ್ತವನ್ನು ಅರಿವು ಶೈಕ್ಷಣಿಕ ಯೋಜನೆಯಡಿ ಮಂಜೂರು ಮಾಡಿದ ಆದೇಶ ಪ್ರಮಾಣ ಪತ್ರವನ್ನು  ಮುಖ್ಯಮಂತ್ರಿಗಳು ವಿತರಿಸಿದರು.

ಕುಮಾರಿ ಸಂಜನಾ ಎಂ.ಎಸ್ ಅವರಿಗೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ನಿ) ದಿಂದ 2025-26ನೇ ಸಾಲಿನಲ್ಲಿ ವಿದೇಶಿ  ವಿಶ್ವವಿದ್ಯಾಲಯಗಳಲ್ಲಿ  ಉನ್ನತ ವ್ಯಾಸಾಂಗಕ್ಕಾಗಿ ರೂ. ಐವತ್ತು ಲಕ್ಷ ಸಾಲದ ಮೊತ್ತವನ್ನು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಾಂಗಕ್ಕಾಗಿ ಸಾಲ ಯೋಜನೆಯಡಿ ಮಂಜೂರು ಮಾಡಿದ ಆದೇಶ ಪ್ರಮಾಣ ಪತ್ರವನ್ನು  ವಿತರಿಸಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಉಪಾಧ್ಯಕ್ಷ ಸೂರಜ್ ಹೆಗಡೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಹುನಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಕಾಶಪ್ಪನವರ್ ವಿಜಯಾನಂದ ಶಿವಶಂಕರಪ್ಪ, ಮಾಜಿ ಶಾಸಕ ಕೊಂಡಜ್ಜಿ ಮೋಹನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ಕೆ.ಎ. ದಯಾನಂದ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

 

 

 

Share This Article
error: Content is protected !!
";