ಕೇಂದ್ರದ ಜೊತೆ ಸಂಘರ್ಷದ ಹಾದಿ ತುಳಿದಿರುವ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು :
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರ ಸರ್ಕಾರದ ಜೊತೆ ಸಂಘರ್ಷದ ಹಾದಿ ತುಳಿದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ದೂರಿದರು.

- Advertisement - 

ನಗರದ ಖಾಸಗಿ ಹೋಟೆಲ್‌ನಲ್ಲಿ ನೀತಿ ಆಯೋಗದ ಸಭೆಗೆ ಸಿಎಂ ಹಾಗೂ ಸಂಬಂಧಿಸಿದವರು ಗೈರಾಗಿದ್ದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು.

- Advertisement - 

ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಸಭೆಗೆ ಗೈರಾಗಿದ್ದ ವಿಷಯ ಕುರಿತು ತಿಳಿಸಬೇಕು. ಸಭೆಗೆ ಗೈರಾಗುವ ಮೂಲಕ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಕೂಡ ಭಾಗವಹಿಸಿದ್ದರು. ಆದರೆ ನಮ್ಮ ಸಿಎಂ ಸಭೆ ಯಾಕೆ ಬಹಿಷ್ಕಾರ ಮಾಡಿದರು ಎಂಬುವುದನ್ನು ತಿಳಿಸಬೇಕು ಎಂದು ಅವರು ಆಗ್ರಹ ಮಾಡಿದರು.

ನೀತಿ ಆಯೋಗದ ಸಭೆಗೆ ಗೈರಾಗಿದ್ದು, ರಾಜ್ಯಕ್ಕೆ ಒಳ್ಳೆಯದಲ್ಲ. ಕೇಂದ್ರ ಸರ್ಕಾರದ ವಿರುದ್ಧ ಜಂತರ್ ಮಂತರ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ಆದರೆ ಪ್ರಧಾನ ಮಂತ್ರಿಗಳು ಕರೆದ ಸಭೆಗೆ ಗೈರಾಗುತ್ತಾರೆ. ರಾಜಕಾರಣ ಮಾಡುವುದೇ ರಾಜ್ಯ ಸರ್ಕಾರದ ಆದ್ಯತೆಯಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದರು.

- Advertisement - 

ಕಾಂಗ್ರೆಸ್ ಸರ್ಕಾರ ರಾಮನಗರ ಜಿಲ್ಲೆಯನ್ನು, ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಿರೋದು ರಿಯಲ್ ಎಸ್ಟೇಟ್​ಗಾಗಿ ಎಂದು ಆರೋಪಿಸಿದರು.

ಸಚಿವರು, ಶಾಸಕರು ಎಲ್ಲಿ ಎಷ್ಟೆಷ್ಟು ಸೈಟ್ ಮಾಡಿದ್ದಾರೆ ಎಂಬುದು ಮೊದಲು ಗೊತ್ತಾಗಲಿ. ಆ ನಂತರ ಹೆಸರು ಬದಲಾವಣೆಯ ಅಸಲಿ ಕಥೆ ಸ್ಪಷ್ಟವಾಗುತ್ತೆ. ಸಿದ್ದರಾಮಯ್ಯ ಏನು ರಾಜ್ಯದ ಮುಖ್ಯಮಂತ್ರಿಯಾ ಅಥವಾ ಬೆಂಗಳೂರಿನ ಮುಖ್ಯಮಂತ್ರಿಯಾ? ಡಿ. ಕೆ. ಶಿವಕುಮಾರ್ ಹೇಗೆ ಒಬ್ಬರೇ ಇದರ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಇದೆ ಎಂದು ವಿಜಯೇಂದ್ರ ಗಂಭೀರ ಆರೋಪ ಮಾಡಿದರು.

ರಾಜ್ಯದಲ್ಲಿ ಮೆಡಿಕಲ್ ಮಾಫಿಯಾಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಜನೌಷಧ ಕೇಂದ್ರ ಬಂದ್ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಕೋಪ. ಅವರ ಫೋಟೋ ಕಂಡರೆ ಆಗಲ್ಲ. ಫೋಟೋ ಕಾಣಬಾರದು ಅಂತ ಬಂದ್ ಮಾಡಿದ್ದಾರೆ. ಬಡವರ ಅನುಕೂಲಕ್ಕಾಗಿ ಜನೌಷಧ ಕೇಂದ್ರ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಸ್ವತಃ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಿ. ಆಸ್ಪತ್ರೆಯಲ್ಲಿರುವ ಔಷಧಿ ಸ್ಟಾಕ್ ಬಗ್ಗೆ ಪರಿಶೀಲನೆ ಮಾಡಲಿ. ಬಂದ್ ಮಾಡುವ ಮೂಲಕ ಪ್ರಧಾನಿ ಮೋದಿಗೆ ಅವಮಾನ ಮಾಡಿದ್ದಾರೆ. ಬಡವರಿಗೆ ಅನ್ಯಾಯ ಮಾಡಲಾಗಿದೆ ಎಂದು ಅವರು ಹರಿಹಾಯ್ದರು.

ದುಡ್ಡು ಸಿಗುತ್ತೆ ಅಂದ್ರೆ ರಾಜ್ಯ ಸರ್ಕಾರ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ. ಗ್ಯಾರಂಟಿ ಕೊಡುತ್ತಿರುವುದರಿಂದ ಇಂತಹದೆಲ್ಲ ಕೆಲಸಕ್ಕೆ ಕೈ ಹಾಕುತ್ತಾರೆ. ಒಂದು ಕೈಯಲ್ಲಿ ಕಿತ್ತುಕೊಂಡು ಮತ್ತೊಂದು ಕೈಗೆ ಕೊಡುತ್ತೇವೆ ಅಂತ. ರಾಜ್ಯದ ಜನರ ಬಳಿ ಕಿತ್ತುಕೊಳ್ಳಲು ಏನೇನು ಬೇಕು ಅದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಾಸಕರು ಹಾರೆ, ಗುದ್ದಲಿಯನ್ನ ತಮ್ಮ ಮನೆಯಲ್ಲಿ ಇಟ್ಟು ಬಿಟ್ಟಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ತಿಂಗಳಿಗೆ ಒಂದು ಗುದ್ದಲಿ ಪೂಜೆ ಆಗುತ್ತಿತ್ತು. ಈಗ ಎರಡು ವರ್ಷದಿಂದ ಅದೆಲ್ಲ ಆಗಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೆದ್ದಿರುವ ವಿರೋಧ ಪಕ್ಷದ ಹೊಸ ಶಾಸಕರು ಸುಮ್ಮನಾಗಬೇಕಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಣ ಕೊಡುತ್ತಿಲ್ಲ. ಆಡಳಿತ ಪಕ್ಷದ ಶಾಸಕರಿಗೂ ಹಣ ಕೊಡುತ್ತಿಲ್ಲ ಎಂದು ಲೇವಡಿ ಮಾಡಿದರು.
ಈಗ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿ 140 ರಿಂದ 150 ಸ್ಥಾನ ಗೆಲ್ಲಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಕ್ಕೆ ತಮನ್ನಾ ಬಾಟಿಯಾ ಹೆಸರು ಸೂಚಿಸಿದ ತಜ್ಞ ಯಾರು? ಎಂದು ಮೊದಲು ಹೇಳಲಿ. ಬರೀ ತಜ್ಞರು, ತಜ್ಞರು ಎಂದು ಹೆಸರು ಹೇಳಬೇಡಿ. ಜಮೀರ್ ಅಹಮದ್ ಸೂಚಿಸಿದ್ದಾರೆಯೇ? ಅಥವಾ ಇನ್ಯಾರು ಹೇಳಿದ್ದಾರೆ. ತಮನ್ನಾ ಬಾಟಿಯಾರನ್ನ ರಾಯಭಾರಿ ಮಾಡಿಕೊಳ್ಳುವ ಅವಶ್ಯಕತೆ ಏನಿತ್ತು?. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಕನ್ನಡಿಗರು ಇರಲಿಲ್ವಾ? ಎಂದು ಖಾರವಾಗಿ ವಿಜಯೇಂದ್ರ ಪ್ರಶ್ನಿಸಿದರು‌.

 

Share This Article
error: Content is protected !!
";