ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ನಾಯಕ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮನೆಗೆ ದಿಢೀರ್ ಭೇಟಿ ನೀಡಿ ಕೆಲ ಸಮಯ ಇಬ್ಬರೂ ಚರ್ಚಿಸಿರುವು ಕುತೂಹಲ ಮೂಡಿಸಿದೆ.
ಒಂದೆಡೆ ಮುಖ್ಯಮಂತ್ರಿಗಳ ಬದಲಾವಣೆ, ಸಂಪುಟ ಪುನಾರಚನೆ ಕುರಿತು ಚರ್ಚೆಗಳು ಆರಂಭವಾಗಿರುವ ಮಧ್ಯೆ ಬಿ.ಕೆ. ಹರಿಪ್ರಸಾದ್ ಮನೆ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸಿದ್ದರಾಮಯ್ಯನವರ ವಿರುದ್ಧ ಈ ಹಿಂದೆ ಪರೋಕ್ಷವಾಗಿ ತಿರುಗಿಬಿದ್ದಿದ್ದ ಬಿಕೆ ಹರಿಪ್ರಸಾದ್ ಅವರ ಮನೆಗೆ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅಹಮದ್ ಖಾನ್ ಜೊತೆಗೂಡಿ ಭೇಟಿ ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಬಿ.ಕೆ. ಹರಿಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದರು. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಸುರ್ಜೆವಾಲ ಅವರುಗಳು ನಿನ್ನೆಯಷ್ಟೇ ರಾಜ್ಯಕ್ಕೆ ಆಗಮಿಸಿ ಸಮಾಲೋಚನೆ ನಡೆಸಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರು ಬಿ.ಕೆ. ಹರಿಪ್ರಸಾದ್ ಇವರನ್ನ ಭೇಟಿ ಮಾಡಿರುವುದುದು ಮಹತ್ವ ಪಡೆದುಕೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಬಳಿಕ ಮಾತನಾಡಿ, ಹರಿಪ್ರಸಾದ್ ಬ್ರೇಕ್ ಫಾಸ್ಟ್ಗೆ ಮನೆಗೆ ಬನ್ನಿ ಎಂದು ಕರೆದಿದ್ದರು. ಬರುತ್ತೇನೆ ಎಂದಿದ್ದೆ, ಅದಕ್ಕೆ ಬಂದಿದ್ದೇನೆ. ಒಂದಿಷ್ಟು ರಾಜಕೀಯ, ಮಂಗಳೂರಿನ ಗಲಭೆ ಕುರಿತು ಚರ್ಚೆ ಮಾಡಿದ್ದೇವೆ. ರಾಜಕೀಯ ಚರ್ಚೆ ಅಂತಲ್ಲ. ಜನರಲ್ ಆಗಿ ಚರ್ಚೆ ಮಾಡಿದ್ದೇವೆ. ಮಂಗಳೂರು ವಿಚಾರ ಚರ್ಚೆ ಯಾಗಿದೆ. ಅಲ್ಲಿ ಸೌಹಾರ್ದತೆ ಮೂಡಬೇಕು. ಹಿಂದೂ, ಮುಸ್ಲಿಂ ನಡುವೆ ಯಾವುದೇ ದ್ವೇಷ ಇರಬಾರದು. ಸೌಹಾರ್ದತೆ ಬರಬೇಕು ಅಂತ ಚರ್ಚಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಮಂಗಳೂರಿಗೆ ಹೋಗಿ ಬರಲು ಹರಿಪ್ರಸಾದ್ ಗೆ ಹೇಳಿದ್ದೇನೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಅವಲೋಕಿಸಿ ಬನ್ನಿ ಎಂದಿದ್ದೇನೆ ಎಂದರು.
ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಇದೇ ವೇಳೆ ಮಾತನಾಡಿ, ರಾಜಕೀಯ ಕುರಿತು ಏನೂ ಚರ್ಚೆ ಮಾಡಿಲ್ಲ. ಮಂಗಳೂರು ಘಟನೆ ಬಗ್ಗೆ ಮಾತ್ರ ಚರ್ಚೆಯಾಗಿದೆ. ಸಚಿವ ಸ್ಥಾನ, ಸಭಾಪತಿ ಸ್ಥಾನದ ಬಗ್ಗೆ ಏನೂ ಚರ್ಚೆ ಆಗಿಲ್ಲ. ನೀವು ತಿಳಿದಂತೆ ಏನು ಮಾತನಾಡಿಲ್ಲ. ಬರೀ ಮಂಗಳೂರು ಘಟನೆ ಬಗ್ಗೆ ಮಾತ್ರ ಚರ್ಚೆಯಾಗಿದೆ ಎಂದು ಅವರು ತಿಳಿಸಿದರು.
ದಿಢೀರ್ ಭೇಟಿ ಸುತ್ತ ಅನುಮಾನದ ಹುತ್ತ:
ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಬಿ.ಕೆ ಹರಿಪ್ರಸಾದ್, ಪದೇ ಪದೆ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದು ಇಬ್ಬರು ಹಾವು ಮುಂಗಸಿ ರೀತಿಯಲ್ಲಿದ್ದರು. ಇದನ್ನೆಲ್ಲ ಮರೆತು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರ್ ಎಂದು ಏಕಾಏಕಿ ಭೇಟಿಯ ಹಿಂದಿರುವ ಉದ್ದೇಶವೇನು ಎಂಬುದು ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲ ಇಬ್ಬರು ನಿನ್ನೆಯಷ್ಟೇ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಬಿ.ಕೆ.ಹರಿಪ್ರಾಸದ್ ಅವರನ್ನ ಭೇಟಿ ಮಾಡಿರುವ ವಿಷಯ ತೀವ್ರ ಕುತೂಹಲ ಮೂಡಿಸಿದೆ.
ಬಿ.ಕೆ. ಹರಿಪ್ರಸಾದ್ ಸಚಿವ ಸ್ಥಾನದ ಬಲವಾದ ಆಕಾಂಕ್ಷಿಯಾಗಿದ್ದಾರೆ. ಸಂಪುಟ ಪುನರಚನೆ ಕೂಗು ಕೇಳಿಬರುತ್ತಿದೆ. ಸಿಎಂ ಮತ್ತು ಬಿ.ಕೆ. ಹರಿಪ್ರಸಾದ್ ಭೇಟಿ ಮಹತ್ವ ಪಡೆದುಕೊಂಡಿದೆ. ಇದರ ಜೊತೆಗೆ ಸಭಾಪತಿ ಮಾಡುವ ಬಗ್ಗೆನೂ ಸುದ್ದಿ ಹರಿದಾಡುತ್ತಿದ್ದು, ಇಬ್ಬರ ಭೇಟಿ ವಿಷಯ ಹಲವು ರೆಕ್ಕೆಪುಕ್ಕಗಳು ಬಿಚ್ಚಿಕೊಂಡು ಮಹತ್ವ ಪಡೆದುಕೊಂಡಿವೆ.