ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ನಗರದ ಡಿಆರ್ ಮೈದಾನದಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿಶೀಟರ್‌ಗಳ ಪರೇಡ್ ನಡೆಸಿದರು.
ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯ 150ಕ್ಕೂ ಹೆಚ್ಚು ರೌಡಿಶೀಟರ್ಗಳು ಪರೇಡ್ನಲ್ಲಿದ್ದರು.
ರೌಡಿಶೀಟರ್ಗಳು ಯಾವುದೇ ಕಾರಣಕ್ಕೂ ಜಿಲ್ಲೆಯ ಅಪರಾಧ ಕೃತ್ಯಗಳಲ್ಲಿ, ಅನಗತ್ಯ ವ್ಯವಹಾರಗಳಲ್ಲಿ ಭಾಗಿಯಾಗಬಾರದು ಎಂದು ಎಸ್ಪಿ ಎಚ್ಚರಿಕೆ ನೀಡಿದರು.
ಕೆಟ್ಟ ಅವತಾರಗಳಲ್ಲಿದ್ದ ರೌಡಿಶೀಟರ್ಗಳಿಗೆ ಕೂದಲು ಕಟ್ ಮಾಡಿಸಿಕೊಳ್ಳುವಂತೆ ಎಸ್ಪಿ ಖಡಕ್ ಸೂಚನೆ ನೀಡಿದರು.
ಕಾಂಗ್ರೆಸ್ ಪಕ್ಷದ 28ನೇ ವಾರ್ಡ್ ನಗರ ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ್ ಅಲಿಯಾಸ್ ಮೋಟ್ ಬಳ್ಳು ಸೀನಾ ಕೂಡ ಈ ಪರೇಡ್ನಲ್ಲಿ ಭಾಗವಹಿಸಿದ್ದರು. ನಿಮ್ಮ ಮೇಲೆ ಕೊಲೆ ಕೇಸ್ ಇದೆ. ಬುಳ್ ನಾಗ ವಿಚಾರವಾಗಿ ಹಲವು ಕೇಸ್ಗಳಿವೆ. ಮತ್ತೆ ರೌಡಿಗಳನ್ನು ಕೂಡಿಸಿಕೊಂಡು ಏನಾದರೂ ಮಾಡಿದ್ರೆ ಮತ್ತೆ ಕೇಸ್ ಹಾಕುತ್ತೇವೆ ಎಂದು ನೇರವಾಗಿ ಕಾರ್ಪೋರೇಟರ್ ಸೇರಿದಂತೆ ಇತರೆ ರೌಡಿಗಳಿಗೆ ಎಸ್ಪಿ ಎಚ್ಚರಿಕೆ ನೀಡಿ ಬೆವರಿಳಿಸಿದರು.
ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಿ, ಇಲ್ಲವಾದಲ್ಲಿ ಜೀವನಪೂರ್ತಿ ರೌಡಿಶೀಟರ್ ಕೇಸ್ ನಿಮ್ಮ ಮೇಲಿರುತ್ತದೆ. ಸಮಾಜಸೇವೆ ಮಾಡುವ ನೆಪದಲ್ಲಿ ಜನರನ್ನು ಹೆದರಿಸಿದರೆ ರೌಡಿಶೀಟರ್ ಕೇಸ್ ಹಾಕುತ್ತೇವೆ ಎಂದು ಉಮಾ ಪ್ರಶಾಂತ್ ಎಚ್ಚರಿಸಿದರು.
ರೌಡಿಶೀಟರ್‌ಗಳ ಮೇಲೆ ನಿಗಾ ಇರಿಸಲು ಈ ಪರೇಡ್ ಮಾಡಿದ್ದೇವೆ. ಒಟ್ಟು 150 ರೌಡಿಶೀಟರ್ಗಳು ಭಾಗಿಯಾಗಿದ್ದರು. ಅಪರಾಧದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದೇವೆ. ಕೆಲವರು ಈ ಕೆಲಸಗಳನ್ನು ಬಿಟ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಂತಹವರ ಕೇಸ್ಗಳನ್ನು ಮುಚ್ಚುತ್ತೇವೆ. ಯಾರು ಅಪರಾಧ ಪ್ರಕರಣಗಳಲ್ಲಿ ಸಕ್ರಿಯರಾಗಿದ್ದಾರೋ, ಅವರನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ. ಅನಧಿಕೃತ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ವಾರ್ನ್ ಮಾಡಿದ್ದೇವೆ. ಅಲ್ಲದೇ ಮತೀಯ ಗಲಭೆಗಳಲ್ಲಿ ಭಾಗಿಯಾದವರೂ ಕೂಡ ಪರೇಡ್ಗೆ ಹಾಜರಾಗಿದ್ದರು. ನೈತಿಕ ಪೊಲೀಸ್ಗಿರಿ ಮಾಡದಂತೆ ನಿಗಾ ವಹಿಸಿದ್ದೇವೆ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.