ಸರ್ಕಾರಗಳ ವಿರುದ್ಧ ಗುಡುಗಿದ ಸ್ವಾಮೀಜಿ, ಸಮುದಾಯದ ಹಿತಾಸಕ್ತಿಗೆ ಧಕ್ಕೆ ಬಂದರೆ ಸುಮ್ಮನಿರಲ್ಲ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಎಲ್ಲಾ ಸರ್ಕಾರಗಳು ಅನ್ಯಾಯ ಮಾಡುತ್ತಿವೆ. ಸಮುದಾಯದ ಹಿತಾಸಕ್ತಿಗೆ ಧಕ್ಕೆ ಬಂದರೆ ಸುಮ್ಮನಿರಲ್ಲ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಗುಡುಗಿದರು.

- Advertisement - 

ಮಾಡನಾಯಕನಹಳ್ಳಿಯಲ್ಲಿ ಶನಿವಾರ ವಾಲ್ಮೀಕಿ ಯುವಕರ ಸಂಘ ಉದ್ಘಾಟಿಸಿ ಮಾತನಾಡಿದ ಸ್ವಾಮಿಗಳು ಜಾತಿ ಜನಸಂಖ್ಯೆಗನುಗುಣವಾಗಿ ಎಲ್ಲರಿಗೂ ಮೀಸಲಾತಿ ಕೊಡಬೇಕೆಂದು ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿದ್ದಾರೆ. ದೇಶದ ಪ್ರಧಾನಿ ನರೇಂದ್ರಮೋದಿ ಮುಂದುವರೆದ ಜನಾಂಗ ಕೇಳದಿದ್ದರೂ ಶೇ.೧೦ ರಷ್ಟು ಮೀಸಲಾತಿ ಕೊಟ್ಟರು. ಅದೇ ನಾವುಗಳು ಹೋರಾಟ, ಪಾದಯಾತ್ರೆ ನಡೆಸಿದ ಫಲವಾಗಿ ರಾಜ್ಯ ಸರ್ಕಾರ ಶೇ.ಮೂರಷ್ಟಿದ್ದ ಮೀಸಲಾತಿಯನ್ನು ನಾಲ್ಕಕ್ಕೆ ಹೆಚ್ಚಿಸಿತು. ಇದರಿಂದ ಮಕ್ಕಳ ಶಿಕ್ಷಣ ಉದ್ಯೋಗಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

- Advertisement - 

ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕವಾಗಿ ಮುಂದೆ ಬರಲು ಎಲ್ಲಾ ಸಮುದಾಯಗಳು ಸಂಘಟನೆಯಾಗುತ್ತಿವೆ. ಲಿಂಗಾಯಿತ ಸಮಾಜ ಬಸವಣ್ಣನವರ ಹೆಸರಿನಲ್ಲಿ ಸಂಘಟನೆಯಾಗುತ್ತಿದ್ದರೆ. ಹಾಲುಮತ ಸಮಾಜ ಕನಕದಾಸರ ಹೆಸರಿನಲ್ಲಿ, ದಲಿತರು ಅಂಬೇಡ್ಕರ್ ಹೆಸರಿನಲ್ಲಿ ಸಂಘಟನೆಯಾಗುತ್ತಿರುವಂತೆ ನಾಯಕ ಸಮಾಜ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಸಂಘಟನೆಯಾಗುತ್ತಿದೆ.

ರಾಜ್ಯದಲ್ಲಿ ಐವತ್ತರಿಂದ ಅರವತ್ತು ಲಕ್ಷದಷ್ಟು ನಾಯಕ ಜನಾಂಗದವರಿದ್ದು, ಮೀಸಲಾತಿ ಹೆಚ್ಚಿಸಿಕೊಳ್ಳಲು ೩೧ ವರ್ಷಗಳ ಕಾಲ ಹೋರಾಟ ಮಾಡಬೇಕಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ಸರ್ಕಾರ ವಾಲ್ಮೀಕಿ ಜನಾಂಗಕ್ಕೆ ಕ್ರಿಮಿನಲ್ ಟ್ರೈಬ್ಸ್ ಎಂಬ ಹಣೆಪಟ್ಟಿ ಕಟ್ಟಿತು. ನಂತರ ಬೇಡರು ಕ್ರಿಮಿನಲ್ ಟ್ರೈಬ್ಸ್‌ಗಳಲ್ಲ ಎಂದು ಹಿಂದುಳಿದ ವರ್ಗಕ್ಕೆ ಸೇರಿಸಲಾಯಿತು. ಅನೇಕ ಹಿರಿಯರ ಹೋರಾಟದ ಪರಿಣಾಮವಾಗಿ ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಯಾಯಿತು ಎಂದರು.

- Advertisement - 

೨೦೦೬ ರಲ್ಲಿ ಕುಲದೀಪ್ ಸಿಂಗ್ ಆಯೋಗದಂತೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿತು. ಸಮಾಜದ ಬಗ್ಗೆ ಯಾರಲ್ಲಿ ಕಳಕಳಿಯಿರುತ್ತದೋ ಅವರುಗಳು ನಿಜವಾದ ಯುವಕರು. ನಾಯಕ ಸಮಾಜಕ್ಕೆ ಎಲ್ಲಿಯೇ ಅನ್ಯಾಯವಾಗಲಿ ಅಲ್ಲಿಗೆ ಹೋಗಿ ನ್ಯಾಯ ದೊರಕಿಸಬೇಕು. ಎಲ್ಲಾ ಜಾತಿಯಲ್ಲಿನ ಬಡವರು, ಶೈಕ್ಷಣಿಕವಾಗಿ ಹಿಂದುಳಿದವರ ಪರವಾಗಿ ನಿಲ್ಲಬೇಕೆಂದು ವಾಲ್ಮೀಕಿ ಯುವಕರ ಸಂಘಕ್ಕೆ ಸ್ವಾಮೀಜಿ ಕರೆ ನೀಡಿದರು.

ಯುವಕರು ಕುಡಿತದ ಚಟಕ್ಕೆ ಬಲಿಯಾಗಬಾರದು. ವಾಲ್ಮೀಕಿ ಜಯಂತಿಯಂದು ಮಾಂಸಾಹಾರ ಸೇವಿಸಿದರೆ ಮಹರ್ಷಿ ವಾಲ್ಮೀಕಿಗೆ ಅವಮಾನ ಮಾಡಿದಂತಾಗುತ್ತದೆ. ಪ್ರತಿ ತಿಂಗಳ ಹುಣ್ಣಿಮೆಯಂದು ವಾಲ್ಮೀಕಿ ಭವನದಲ್ಲಿ ಮಹರ್ಷಿ ವಾಲ್ಮೀರವರ ಫೋಟೋ ಇಟ್ಟು ಪೂಜೆ ಮಾಡಿ. ಚುನಾವಣೆ ಬಂದಾಗ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುವುದು ತಪ್ಪಲ್ಲ. ಸಂಘಟನೆ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾಗಿರಿ ಯಾರಲ್ಲಿಯೂ ಭಿನ್ನಾಭಿಪ್ರಾಯವಿರಬಾರದು ಎಂದು ಹೇಳಿದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಸಂಘದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಿ. ವಯಸ್ಸು ಮುಖ್ಯವಲ್ಲ. ಇಚ್ಚಾಶಕ್ತಿಯಿರಬೇಕು. ಹಳ್ಳಿಗಳಲ್ಲಿ ಸಾಮರಸ್ಯ ಮೂಡಿಸುವ ಕೆಲಸವಾಗಬೇಕು. ಸಂಘ ಎಂದರೆ ಪಕ್ಷಾತೀತವಾಗಿರಬೇಕು. ರಾಜಕೀಯ ದ್ವೇಷ ನುಸುಳಿದರೆ ಸಂಟನೆಯಲ್ಲಿ ಒಡಕು ಮೂಡುತ್ತದೆ. ಪ್ರಸನ್ನಾನಂದಪುರಿ ಸ್ವಾಮೀಜಿ ಮುಂದಾಳತ್ವದಲ್ಲಿ ಹಗಲು-ರಾತ್ರಿ ಬೆಂಗಳೂರಿನ ಉದ್ಯಾನವನದಲ್ಲಿ ಧರಣಿ ನಡೆಸಿದ್ದರಿಂದ ಮೀಸಲಾತಿ ಶೇ.೩ ರಷ್ಟು ಹೆಚ್ಚಳವಾಯಿತು. ಪರಿಶಿಷ್ಟ ಜಾತಿಗೆ ಹದಿನೈದರಷ್ಟಿದ್ದ ಮೀಸಲಾತಿಯನ್ನು ಹದಿನೇಳಕ್ಕೆ ಏರಿಸಲಾಯಿತು. ರಾಜನಹಳ್ಳಿಯಲ್ಲಿ ಮಠ ನಿರ್ಮಾಣವಾಗಲು ಮಾಜಿ ಮಂತ್ರಿ ತಿಪ್ಪೇಸ್ವಾಮಿರವರ ಕೊಡುಗೆ ಬಹಳಷ್ಟಿದೆ. ವೈಯಕ್ತಿಕ ಪ್ರತಿಷ್ಟೆ, ಅಹಂ ಬಿಟ್ಟು ಸಂಘವನ್ನು ಕಟ್ಟಿದರೆ ಏನಾದರೂ ಸಾಧಿಸಬಹುದು ಎಂದು ವಾಲ್ಮೀಕಿ ಯುವಕರ ಸಂಘಕ್ಕೆ ಕಿವಿಮಾತು ಹೇಳಿದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ಸಮಾಜ ಬೆಳೆಸಲು ಸಂಘ ಬೇಕು. ನಾಯಕ ಸಮಾಜದ ಹೆಣ್ಣು ಮಕ್ಕಳ ಮೇಲೆ ಎಲ್ಲಿಯೇ ದೌರ್ಜನ್ಯ, ಅನ್ಯಾಯವಾದಾಗ ಅಲ್ಲಿಗೆ ಹೋಗಿ ನಾವುಗಳು ನೊಂದವರಿಗೆ ನ್ಯಾಯ ಕೊಡಿಸುತ್ತಿದ್ದೆವು. ಚಿತ್ರದುರ್ಗ ನಗರಸಭೆ ಅಧ್ಯಕ್ಷನಾಗಿದ್ದಾಗ ಮದಕರಿನಾಯಕನ ಪ್ರತಿಮೆ ನಿರ್ಮಾಣವಾಯಿತು. ಸಮಾಜವನ್ನು ಮುಂದೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ವಾಲ್ಮೀಕಿ ಯುವಕರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ವಾಲ್ಮೀಕಿ ಕೋ-ಆಪರೇಟಿವ್ ಸೊಸೈಟಿಯ ಎ.ತಿಪ್ಪೇಸ್ವಾಮಿ ಮಾತನಾಡಿ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳಕ್ಕೆ ಸ್ವಾಮೀಜಿರವರು ಕೈಗೊಂಡ ಪಾದಯಾತ್ರೆ ಅಹೋರಾತ್ರಿ ಧರಣಿ ಕಾರಣ. ೨೮೨ ದಿನಗಳ ಕಾಲ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಕುಳಿತರು. ಹೋರಾಟದಿಂದ ಮಾತ್ರ ಏನನ್ನಾದರೂ ಸಾಧಿಸಬಹುದು. ಅಭಿವೃದ್ದಿಯ ಹರಿಕಾರ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಚಿವರಾಗಲಿ ಎಂದು ಹಾರೈಸಿದರು.

ಮಾಜಿ ಮಂತ್ರಿ ತಿಪ್ಪೇಸ್ವಾಮಿರವರ ಪುತ್ರ ಕೆ.ಟಿ.ಕುಮಾರಸ್ವಾಮಿ ಮಾತನಾಡುತ್ತ ಬುಡಕಟ್ಟು ಸಮಾಜಕ್ಕೆ ಸೇರಿದ ವಾಲ್ಮೀಕಿ ಬೇಡ ಜನಾಂಗಕ್ಕೆ ತನ್ನದೆ ಆದ ಸಮಸ್ಯೆ ಸವಾಲುಗಳಿವೆ. ರಾಜ್ಯದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿರುವ ವಾಲ್ಮೀಕಿ ಸಮಾಜ ಬಲವಾಗಬೇಕಾದರೆ ಶಿಕ್ಷಣ ಮುಖ್ಯ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಾಲ್ಮೀಕಿ ಯುವಕರ ಸಂಘದ ಅಧ್ಯಕ್ಷ ಕೆ.ಬಿ.ದೇವೇಂದ್ರಪ್ಪ ಮಾತನಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ನಾಯಕ ಸಮಾಜವನ್ನು ಜಾಗೃತಿಗೊಳಿಸುವುದು ನಮ್ಮ ಸಂಘದ ಉದ್ದೇಶ. ಸಂಘದಲ್ಲಿ ಯಾವುದೇ ರೀತಿಯ ವೈಮನಸ್ಸು ಬಾರದ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.

ನಾಯಕ ಸಮಾಜದ ಮುಖಂಡರುಗಳಾದ ಬಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲೋಹಿತಾಶ್ವ, ಎನ್.ಆರ್.ಬೈಯಣ್ಣ, ಕಲ್ಕುಂಟೆ ರಾಜೇಶ್, ಮಾಡನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಪಿ.ರಾಜೇಶ್, ಉಪಾಧ್ಯಕ್ಷೆ ಸರಸ್ವತಿ ರಾಜಶೇಖರ್, ಸದಸ್ಯರುಗಳಾದ ಎಸ್.ಟಿ.ಲಿಂಗರಾಜ್, ರಾಜೇಶ್ವರಿ ನಾಗರಾಜ್, ಲಿಂಗರಾಜ್

ಗೌರಮ್ಮ ಮೈಲಾರಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಲಲಿತಾಕುಮಾರಿ ಹಾಗೂ ವಾಲ್ಮೀಕಿ ಯುವಕರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

 

 

Share This Article
error: Content is protected !!
";