ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಬೆಂಗಳೂರಿನ ವೈದ್ಯರೊಬ್ಬರ ಮನೆಗೆ ಬೆಂಕಿ ಹಚ್ಚಿದ್ದ ನಾಲ್ವರು ಕಿಡಿಗೇಡಿಗಳನ್ನು ಚಂದ್ರಾಲೇಔಟ್ ಠಾಣೆಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಬೆಂಕಿ ಇಟ್ಟ ಆರೋಪಿಗಳಾದ ಪ್ರಜ್ವಲ್, ರಾಕೇಶ್, ಸಚಿನ್ ಹಾಗೂ ಜೀವನ್ ಎಂಬುವವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಪ್ರಮುಖ ಆರೋಪಿ ರವಿ ಎಂಬಾತನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಬಂಧಿತ ಆರೋಪಿಗಳೆಲ್ಲರೂ ರವಿಯ ಸೂಚನೆಯಂತೆ ಬೆಂಕಿ ಹಚ್ಚಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಗೆ 50 ಸಾವಿರ ರೂ ಹಣ ನೀಡಿದ್ದ ರವಿ, ಗಂಗಾಧರ್ ಅವರ ಮನೆ ತೋರಿಸಿ ಬೆಂಕಿ ಹಚ್ಚಲು ಹೇಳಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಮುಖ ಆರೋಪಿ ರವಿಯ ಬಂಧನದ ಬಳಿಕವಷ್ಟೇ ವೈದ್ಯ ಗಂಗಾಧರ್ ಅವರ ಮನೆಗೆ ಬೆಂಕಿ ಹಚ್ಚಲು ಹೇಳಿದ್ದ ಎಂಬುದು ತಿಳಿಯ ಬೇಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಘಟನೆ
ಕಳೆದ ಮೇ 10ರಂದು ಬೆಳಗಿನ ಜಾವ 12.20ರ ಸುಮಾರಿಗೆ ಬಾಪೂಜಿ ಲೇಔಟ್‌ನ 4ನೇ ಕ್ರಾಸ್‌ನಲ್ಲಿದ್ದ ಡಾ. ಬಿ. ಎಸ್. ಗಂಗಾಧರ್ ಎಂಬುವವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದ ಆರೋಪಿಗಳು ಗುರುತು ಪತ್ತೆಯಾಗದಂತೆ ಹೆಲ್ಮೆಟ್ ಧರಿಸಿ ಬಂದಿದ್ದರು.
ದುಷ್ಕರ್ಮಿಗಳ ಕೃತ್ಯದಿಂದಾಗಿ ಮನೆಯ ಸೆಕ್ಯೂರಿಟಿ ಗಾರ್ಡ್ ತ್ಯಾಗರಾಜ್ ಎಂಬುವವರು ಗಾಯಗೊಂಡಿದ್ದರು. ಇದಲ್ಲದೇ, ಸರಿಸುಮಾರು 45 ಲಕ್ಷ ರೂ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.