ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಮೇಲೆ ಗೂಬೆ ಕೂರಿಸಿ ಹರಕೆಯ ಕುರಿ ಮಾಡಲು ಹೊರಟಿರುವ ಕೊಲೆಗಡುಕ ಕರ್ನಾಟಕ ಕಾಂಗ್ರೆಸ್ 11 ಅಮಾಯಕ ಜನರ ಸಾವಿಗೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ನಿಮ್ಮ ಮೊಮ್ಮಗನಿಗೆ ಕ್ರಿಕೆಟ್ ಆಟಗಾರರ ಜೊತೆ ಫೋಟೋಗ್ರಾಫ್ ಆಟೋಗ್ರಾಫ್ ತೆಗೆಸಿಕೂಡುವ ಭರದಲ್ಲಿ ಜನಸಾಮಾನ್ಯರ ಮನೆ ಮಕ್ಕಳನ್ನ ಕೊಂದು ಬಿಟ್ಟರಲ್ಲ ಸ್ವಾಮಿ, ನಿಮಗೆ ಆತ್ಮಸಾಕ್ಷಿ ಇದೆಯಾ? ಎಂದು ತೀಕ್ಷ್ಣವಾಗಿ ಅವರು ಪ್ರಶ್ನಿಸಿದ್ದಾರೆ.
ನಿಮ್ಮ ಮೊಮ್ಮಗನಿಗೆ ವೇದಿಕೆಯ ಮೇಲೆ ಕುರ್ಚಿ, ಜನಸಾಮಾನ್ಯರಿಗೆ ಬೀದಿಯಲ್ಲಿ ಕಾಲ್ತುಳಿತ. ಆಹಾ, ಇನ್ನು ಮುಂದೆಂದೂ ಸಮಾಜವಾದ, ಸಾಮಾಜಿಕ ನ್ಯಾಯ ಎಂದು ಭಾಷಣ ಬಿಗಿದು ಆ ಪದಗಳಿಗೆ, ಸಿದ್ಧಾಂತಗಳಿಗೆ ಅಪಮಾನ ಮಾಡಬೇಡಿ ಎಂದು ಅಶೋಕ್ ಸಿದ್ದರಾಮಯ್ಯಗೆ ತರಾಟೆ ತೆಗೆದುಕೊಂಡಿದ್ದಾರೆ.