ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯನ್ನು ಆರ್ಥಿಕವಾಗಿ ದುರ್ಬಲಗೊಳಿಸಿದ ಅಪಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ನಿಗಮದ ನಾಲ್ಕೂ ಸಂಸ್ಥೆಗಳಿಂದ ಬರೋಬ್ಬರಿ 6,468 ಕೋಟಿ ರೂಗಳಿಗೂ ಹೆಚ್ಚು ಬಾಕಿ ಹೊರೆಯಿದ್ದು,
ನಾಲ್ಕು ನಿಗಮಗಳೂ ನಷ್ಟದ ಹಾದಿ ಹಿಡಿದಿರುವ ದುರ್ದೈವವೇ ಸರಿ. ವೇತನ ಪರಿಷ್ಕರಣೆಯಾಗಿ 38 ತಿಂಗಳು ಕಳೆದರೂ ಬಾಕಿ ಪಾವತಿಸಿಲ್ಲದಿರುವುದು ‘ಶಕ್ತಿʼ ಯೋಜನೆಯಿಂದ ಸಾರಿಗೆ ಇಲಾಖೆ ನಿಶಕ್ತಿಗೊಂಡು ದಿವಾಳಿಯ ಅಂಚಿಗೆ ಸಾಗಿರುವುದನ್ನು ಸಾಕ್ಷೀಕರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಾರಿಗೆ ನಿಗಮಗಳಿಗೆ ಶಕ್ತಿ ತುಂಬಿ, ನೌಕರರ ಬಾಕಿ ಹಣ ಪಾವತಿ ಮಾಡದಿದ್ದರೆ, ಸದ್ಯದಲ್ಲೇ ಸಾರಿಗೆ ನೌಕರರ ಮುಷ್ಕರದ ಬಿಸಿ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಲಿದೆ. ನಾಡಿನ ಜನರಿಂದಲೇ ಹಾದಿ ಬೀದಿಯಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಕಾಲ ದೂರವಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.
ತುಘಲಕ್ ನೀತಿಗಳಿಂದ ಕಾಂಗ್ರೆಸ್ ಸರ್ಕಾರ ಸಾರಿಗೆ ಇಲಾಖೆಯನ್ನು ದಿವಾಳಿಯಾನ್ನಾಗಿಸಿದೆ. ‘ಶಕ್ತಿʼಯಿಂದ ಲಾಭವಾಗಿದೆಯೆಂದು ಪುಂಗಿ ಬಿಡುವ ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅವರೇ, ನಾಲ್ಕು ಸಾರಿಗೆ ಸಂಸ್ಥೆಗಳಿಂದ ರೂ. 6,468 ಕೋಟಿ ಬಾಕಿ ಉಳಿಸಿದ್ದು ಯಾಕೆ? ಇಲಾಖೆ ಸಿಬ್ಬಂದಿಗಳಿಗೆ ಭವಿಷ್ಯ ನಿಧಿ, ತುಟ್ಟಿಭತ್ಯೆ, ವೇತನ ಹೆಚ್ಚಳದ ಬಾಕಿ ಪಾವತಿಸದಷ್ಟು ಹೀನಾಯ ಸ್ಥಿತಿಗೆ ರಾಜ್ಯ ಸಾರಿಗೆ ಸಂಸ್ಥೆಯನ್ನು ತಳ್ಳಿದ ಅಪಕೀರ್ತಿಗೆ ದರಿದ್ರ ಕಾಂಗ್ರೆಸ್ ಸರ್ಕಾರ ಪಾತ್ರವಾಗಿದೆ ಎಂದು ಅವರು ಹರಿಹಾಯ್ದಿದಿದ್ದಾರೆ.