ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು :
ಜೀಪ್ ಸಮೇತ ಭದ್ರಾ ನದಿಗೆ ಚಾಲಕನೊಬ್ಬ ಬಿದ್ದ ಪ್ರಕರಣ ಎನ್. ಆರ್. ಪುರ ತಾಲೂಕಿನ ರಸ್ತೆಯಲ್ಲಿ ಬರುವ ಸಂದರ್ಭದಲ್ಲಿ ನಡೆದಿತ್ತು.
ನದಿ ಬಿದ್ದ ಯುವಕನಿಗಾಗಿ ತಾಲೂಕು ಆಡಳಿತ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಪಿಕಪ್ ಜೀಪ್‌ನಲ್ಲಿ ಕಾಫಿ ತೋಟಕ್ಕೆ ಶಮಂತ್ ಹಲವು ದಿನಗಳಿಂದ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದರು. ಗುರುವಾರ ಸಂಜೆ ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಗ್ರಾಮಕ್ಕೆ ಹೋಗುವಾಗ ಭದ್ರಾ ನದಿಗೆ ಜೀಪ್ ಸಮೇತ ಬಿದ್ದಿದ್ದರು.
ಕಳಸ ಭಾಗದಿಂದ ವಾಹನ ತೇಲಿ ಬಂದ ಹಿನ್ನೆಲೆ ಬಾಳೆಹೊನ್ನೂರು ಸುತ್ತಮುತ್ತ ಪೊಲೀಸರು ಬಾಳೆಹೊನ್ನೂರು, ಮಾಗುಂಡಿ ಸುತ್ತಮುತ್ತ ನದಿಯಲ್ಲಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ರಭಸವಾಗಿ ನದಿ ಹರಿಯುತ್ತಿದ್ದು ಪೊಲೀಸರ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ಇದರ ನಡುವೆ ಪೊಲೀಸರು ಯಾವುದಕ್ಕೂ ಜಗ್ಗದೆ ಹುಡುಕಾಟ ಮುಂದುವರೆಸಿದ್ದಾರೆ.
ಶಮಂತ್ ತಾಯಿ ಭದ್ರಾ ನದಿ ಬಳಿ ಬಂದು ಮಗನ ನೆನೆದು ಕಣ್ಣೀರಿಟ್ಟಿದ್ದರು. ಮಗನ ಮೃತದೇಹ ಸಿಗುವ ಮುನ್ನವೇ ರಾತ್ರಿ ವೇಳೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಮೃತದೇಹ ಮನೆ ಹಿಂದಿನ ಕೆರೆಯಲ್ಲಿ ಪತ್ತೆಯಾಗಿತ್ತು, ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡು ಭಾಗದ ಜನರು ತತ್ತರಿಸಿ ಹೋಗಿದ್ದು, ಮನೆಯಿಂದ ಹೊರ ಬರುವುದಕ್ಕೂ ಮಳೆ ಅವಕಾಶ ಮಾಡಿಕೊಡುತ್ತಿಲ್ಲ. ಹೀಗಾಗಿ, ದಿನನಿತ್ಯದ ಚಟುವಟಿಕೆಗಳನ್ನು ಮಾಡಿಕೊಳ್ಳಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಮಲೆನಾಡಲ್ಲಿ ಮುಂದುವರೆದ ಗಾಳಿ – ಮಳೆ ಅಬ್ಬರಕ್ಕೆ ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಶೃಂಗೇರಿ ಶಾರದಾ ಮಠದ ತಟದಲ್ಲಿ ಹರಿಯುತ್ತಿರುವ ತುಂಗಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಶೃಂಗೇರಿ ಗಾಂಧಿ ಮೈದಾನದ ಪಾರ್ಕಿಂಗ್ ಲಾಟ್ಗೆ ನೀರು ರಭಸವಾಗಿ ಹರಿದು ಬರಲು ಪ್ರಾರಂಭಿಸಿದೆ.
ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ತುಂಗಾ ಹಾಗೂ ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯಲು ಪ್ರಾರಂಭಿಸಿದೆ. ನದಿ ಪಕ್ಕದಲ್ಲಿ ಸಾರ್ವಜನಿಕರು ಸಂಚಾರ ಮಾಡುವುದಕ್ಕೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತುಂಬಾ ರಭಸವಾಗಿ, ಅತ್ಯಂತ ದೊಡ್ಡ ಪ್ರಮಾಣದಲ್ಲಿ ನೀರು ನದಿಯಲ್ಲಿ ಹರಿದು ಹೋಗುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸ್ಥಳೀಯ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

