ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ 11 ಮಂದಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೇರಿ ಐದು ಮಂದಿ ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ. ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ,ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.
ಇದೇ ವೇಳೆ ವಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದರು.
ಕರ್ನಾಟಕದ ಇತಿಹಾಸದಲ್ಲಿ ಕರಾಳ ಹಾಗೂ ಘೋರ ದುರಂತ ಘಟನೆಗೆ ನೇರ ಹೊಣೆ ಕಾಂಗ್ರೆಸ್ ಸರ್ಕಾರ ಎಂದು ಅವರು ದೂರಿದರು.
A1 ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, A2 ಆರೋಪಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, A3 ಆರೋಪಿ ಗೃಹ ಸಚಿವ ಡಾ.ಜಿ.ಪರಮೇಶ್ವರ ರವರ ಮೇಲೆ ಪರೋಕ್ಷ ಕೊಲೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾಗಿದೆ ಎಂದು ಅವರು ತಾಕೀತು ಮಾಡಿದರು.
ಯಾವ ಮಾನದಂಡ ಕಾರ್ಯಸೂಚಿಯ ಮೇಲೆ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು ಎಂಬ ಬಗ್ಗೆ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಉತ್ತರ ಹೇಳಬೇಕಾಗಿದೆ.
ಬೆಂಗಳೂರು ಪೊಲೀಸ್ ಆಯುಕ್ತರೂ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿರುವ ಸರ್ಕಾರ ಗುಪ್ತಚರ ದಳ ಮುಖ್ಯಮಂತ್ರಿಗಳ ಅಡಿಯಲ್ಲಿ ಬರುವುದರಿಂದ ಇದರ ನೈತಿಕ ಹೊಣೆ ತಾವು ಹೊರಬೇಕಾಗುತ್ತದೆ ಎಂಬ ಕಾರಣಕ್ಕೆ ಗುಪ್ತಚರ ಇಲಾಖೆಯ ಆಯುಕ್ತರನ್ನು ಅಮಾನತು ಮಾಡದೆ ರಕ್ಷಿಸಿಕೊಳ್ಳಲಾಗಿದೆ. ಇಂತಹ ಘೋರ ದುರಂತಕ್ಕೆ ಕಾರಣವಾಗಿರುವ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆಯನ್ನು ಕಳೆದುಕೊಂಡಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರು ಟೀಕಾಪ್ರಹಾರ ಮಾಡಿದರು.
ರಾಜ್ಯದ ಜನ ಸಾಮಾಜಿಕ ಜಾಲತಾಣಗಳಲ್ಲಿ ಈ ನಿಮ್ಮ ಯೋಗ್ಯತೆ, ನಿಮ್ಮ ಸ್ವಾರ್ಥ, ನಿಮ್ಮ ತೀಟೆಗಳ ಕುರಿತು ವಾಚಮಗೋಚರವಾಗಿ ನಿಂಧಿಸುತ್ತಿದ್ದಾರೆ. ಇಷ್ಟಾದರೂ ನಾಚಿಕೆ ಮಾನ ಮರ್ಯಾದೆ ಇಲ್ಲದೆ ಅಧಿಕಾರಕ್ಕೆ ಅಂಟಿ ಕುಳಿತಿದ್ದೀರಿ. ಈ ದೇಶದಲ್ಲಿ ಕಾಂಗ್ರೆಸ್ ಇನ್ನೂ ಉಳಿದಿದ್ದರೆ ಅದಕ್ಕೊಂದು ಹೈಕಮಾಂಡ್ ಅನ್ನುವುದೇನಾದರೂ ಇದ್ದರೆ ಕಾಂಗ್ರೆಸ್ ಈ ಕೂಡಲೇ ಈ ಮೂವರ ವಿರುದ್ಧವೂ ಕ್ರಮ ತೆಗೆದುಕೊಂಡು ಅಧಿಕಾರದಿಂದ ಕೆಳಗಿಳಿಸಿ ತಾನು ಒಂದು ಜನರ ಪರವಾಗಿರುವ ರಾಜಕೀಯ ಪಕ್ಷ ಎನ್ನುವ ಅವಕಾಶವನ್ನು ಬಳಸಿಕೊಳ್ಳಲಿ ಎಂದು ಅವರುಗಳು ಒತ್ತಾಯಿಸಿದರು.
ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸ್ ಅಧಿಕಾರಿಗಳನ್ನು ಸೆಕ್ಯೂರಿಟಿ ಗಾರ್ಡ್ ಗಳು ಹಾಗೂ ವಾಚ್ ಮ್ಯಾನ್ ಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಹಣ್ಣು ತಿಂದವ ಜಾರಿಕೊಂಡ, ಸಿಪ್ಪೆ ತಿಂದವ ಸಿಕ್ಕಾಕಿಕೊಂಡ ಎಂಬoತೆ ತಮ್ಮದಲ್ಲದ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ಅಮಾನತ್ತಿನ ಶಿಕ್ಷೆಗೊಳಗಾಗಿದ್ದಾರೆ ಎಂದು ಕಿಡಿಕಾರಿದರು.
ಪೊಲೀಸ್ ಆಯುಕ್ತರು ಹಾಗೂ ಇತರ ಉನ್ನತ ಅಧಿಕಾರಿಗಳ ಅಮಾನತ್ತಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುದ್ದಿ ಕಲಿಯಬೇಕಾಗಿದೆ. ಈ ಸರ್ಕಾರದ ಪ್ರಭಾವ ಹಾಗೂ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸಿದರೆ ಎಂತಹ ಶಿಕ್ಷೆ ಕಾದಿರುತ್ತದೆ ಎಂಬುದಕ್ಕೆ ಬೆಂಗಳೂರಿನ ದುರ್ಘಟನೆಗೆ ತಮ್ಮದಲ್ಲದ ತಪ್ಪಿಗೆ ಬಲಿಯಾಗಿರುವ ಪೊಲೀಸರು ಉದಾಹಣೆಯಾಗಿದ್ದಾರೆ. ಇನ್ನು ಮುಂದಾದರೂ ಪೊಲೀಸರು ಕಾನೂನಿನ ಅಡಿಯಲ್ಲಿ ಕೆಲಸ ಮಾಡಲಿ ಈ ಸರ್ಕಾರದ ದುಷ್ಟ ಯೋಚನೆಗಳ ಒತ್ತಡ ಹಾಗೂ ಪ್ರಭಾವಕ್ಕೆ ಮಣಿದರೆ ಅದರ ಪ್ರತಿಫಲ ಕಠೋರವಾಗಿರುತ್ತದೆ ಎಂಬ ಸತ್ಯ ಪೊಲೀಸರಿಗೆ ತಿಳಿದಿರಲಿ ಎಂದು ನಾಯಕರು ಎಚ್ಚರಿಸಿದರು.
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಲಾಗಿದೆ. ಇದೇ ಆಯುಕ್ತರು ಇದ್ದಾಗಲೇ ಹೊಸ ವರ್ಷ ಸಂಭ್ರಮಾಚರಣೆಯೂ ನಡೆದಿತ್ತಲ್ಲವೇ? ಆಗ ಯಶಸ್ವಿಯಾಗಿ ಭದ್ರತೆ ಹೊಣೆಗಾರಿಕೆ ವಹಿಸಿದ್ದರಲ್ಲವೇ? ಹಾಗಾದರೆ ಈಗ ಏನಾಯಿತು? ಎಂದು ಖಾರವಾಗಿ ಪ್ರಶ್ನಿಸಿದರು.
ಅನಧಿಕೃತ ಕಾರ್ಯಕ್ರಮ ಎಂದು ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಹೇಳಲಾಗಿದೆ. ಹಾಗಾದರೆ ಅನಧಿಕೃತ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದೇಕೆ?.
ಸಿಎಂ ಮನೆಗೆ ಫ್ರಾಂಚೈಸಿಯವರನ್ನು ಕರೆದುಕೊಂಡು ಹೋದವರು ಯಾರು, ಯಾಕೆ?, ಕಮಿಷನರ್ ಅನುಮತಿ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಹೇಳಿದವರು ಯಾರು?, ‘ಯಾರು ಏನೇ ಮಾಡಿದರು ನಾನು ಇದ್ದೀನಿ’ ಎಂದವರು ಯಾರು? ಇದೆಲ್ಲದಕ್ಕೂ ಸಿಎಂ ಉತ್ತರ ನೀಡಬೇಕು ಎಂದು ಆಗ್ರಹ ಮಾಡಿದರು.
ವಿಧಾನಸೌಧದಲ್ಲಿ ಏನು ಗಲಾಟೆ ಆಗಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಲಾಟೆ ಆಗಿದ್ದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಾದರೆ, ಆ ಸ್ಟೇಡಿಯಂ ಕರ್ನಾಟಕದಲ್ಲಿ ಇಲ್ಲವೇ?.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದು ಪೊಲೀಸರ ಅನುಮತಿ ಇಲ್ಲದ ಕಾರ್ಯಕ್ರಮವೇ ಹೌದಾದರೆ ಡಿಸಿಎಂ ಡಿಕೆ ಶಿವಕುಮಾರ್ ಭಾಗವಹಿಸಿದ್ದೇಕೆ? ಎಂಬ ಪ್ರಶ್ನೆಗಳನ್ನು ರಾಜ್ಯ ಸರ್ಕಾರಕ್ಕೆ ಕೇಳಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ ಕುಮಾರಸ್ವಾಮಿ, ವಿಧಾನಸಭಾ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪ್ರಮುಖರು ಶಾಸಕರು ಉಪಸ್ಥಿತರಿದ್ದರು.