ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಬ್ಬವೊ ಹಬ್ಬ- ನಾಡಿಗೆಲ್ಲ ನಾಗರ ಪಂಚಮಿ ಹಬ್ಬ
ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ಹಬ್ಬಗಳು ಜನಜೀವನದಲ್ಲಿ ಹಾಸುಹೊಕ್ಕಿವೆ. ಒಂದೊಂದು ಹಬ್ಬಕ್ಕೂ ಅದರದೆ ಮಹತ್ವ ಹೊಂದಿವೆ. ಯಾವ ಹಬ್ಬಕ್ಕೆ ಮಹತ್ವವಿಲ್ಲ ಹೇಳಿ. ಸದುದ್ದೇಶ- ವಿಲ್ಲದ ಸಣ್ಣ ಕೆಲಸವೂ ವ್ಯರ್ಥ ಎಂದಿದೆ ನಮ್ಮ ಸಂಸ್ಕೃತಿ. ಅದೇ ರೀತಿ ನಾಗರ ಪಂಚಮಿ ಹಬ್ಬಕ್ಕೂ ಮಹತ್ವವಿದೆ. ಪ್ರತಿ ಹಬ್ಬಗಳಲ್ಲಿ ಭಗವಂತನನ್ನು ಆರಾಧಿಸುತ್ತಾರೆ. ಕಂಡರೂ ಕಾಣದಂತೆ ವಿಜ್ಞಾನವೂ ಅಡಗಿದೆ.
ನಾಗರಪಂಚಮಿ ವಿಶೇಷ-
ಭಾರತೀಯ ನಾರಿಯರಿಗೆ ಸಡಗರದ ಹಬ್ಬ. ಮನೆಗಳ ಹೆಣ್ಣು ಮಕ್ಕಳು- ಬಾಲಿಕರಾದಿಯಾಗಿ ಮುಂಜಾನೆದ್ದು ಅವರದೆ ಆದ ಸಕಲ ಸಿದ್ದತೆಯಿಂದ ಹತ್ತಿರದ ಹುತ್ತಕ್ಕೆ ಭಕ್ತಿ-ಶ್ರದ್ಧೆಯಿಂದ ಸಕಲ ಪೂಜೆಗೈದು ಹಾಲುತುಪ್ಪ ಎರೆಯುವರು. ಹುತ್ತದೊಳಗೆ ನಾಗದೇವತೆ ನಮ್ಮ ಹಾಲನ್ನು ಕುಡಿದು ವರನೀಡು ಎಂದು ಬೇಡಿಕೊಳ್ಳುತ್ತಾರೆ. ಗಂಡಸರು ಹತ್ತಿರದಲ್ಲೆ ಬೆಂಗಾವಲಾಗಿ ನಿಂತು ಮನದಲ್ಲೆ ನಾಗದೇವತೆಗೆ ಪ್ರಾರ್ಥಿಸುತ್ತಾರೆ. ಹಿಂದಿರುಗುವಾಗ ಅಳ್ಳುಗಳನ್ನು ದಾರಿ- ಯುದ್ದಕ್ಕೂ ಚೆಲ್ಲುತ್ತ ಬರುತ್ತಾರೆ. ಆ ಅಳ್ಳುಗಳನ್ನು ಇರುವೆ, ಗೊದ್ದ ಮುಂತಾದ ಚಿಕ್ಕದಾದ ಪ್ರಾಣಿಗಳಿಗೆ ತಿನ್ನಿಸಿದ ಭಾವದಂತೆ. ತವರು ಮನೆಯಿಂದ ಒಡಹುಟ್ಟಿದ ಸೋದರ ಬಂದು ಕರೆದೊಯ್ಯಲು ಕಾಯುವ ಹೆಣ್ಣುಮಕ್ಕಳ ಕಾತರ, ಸೋದರರು ಕರೆದೊಯ್ಯುವ ಸಡಗರ ಜನಪದರು ವಿಧ ವಿಧವಾದ ಕಥೆ-ಹಾಡು ಬರೆದು ಹಾಡಿದ್ದಾರೆ.
ನಾಗರ ಪಂಚಮಿಗೆ ಸಿದ್ಧತೆಯ ಸಡಗರ-
ಗಂಡುಮಕ್ಕಳು ಭತ್ತ ಅಥವಾ ಜೋಳ ಕೊಂಡೊಯ್ದು ಭಟ್ಟಿಯಿಂದ ಅರಳು ಹುರಿಸಿಕೊಂಡು ಬರುವುದು. ಆ ದಿನಗಳ ನೋಟವೇ ಸಡಗರ. ಮನೆಯಲ್ಲಿ ಹೆಣ್ಣುಮಕ್ಕಳು ತರಾವರಿ ಉಂಡೆಗಳ ತಯ್ಯಾರಿ ಅದೊಂದು ಬೇರೆಯೆ ಜಗತ್ತು ಅನಾವರಣವಾಗುವುದು. ಉಂಡೆಗಳ ಸ್ವಾದ, ಅಕಾರ, ಚಿಗಳಿ – ತಂಬಿಟ್ಟು ನಾಗದೇವತೆಯ ಪ್ರೀತಿಗಾಗಿ, ಹತ್ತಿಯ ಗೆಜ್ಜೆ ವಸ್ತ್ರ ಅದು ಮನೆಯ ಹಿರಿ ಅಜ್ಜಿಯರ ಪಾಲಿನ ಕೆಲಸ. ಒಂದು ಹಗಲು-ನಡು ರಾತ್ರಿ- ಯವರೆಗೂ ಮುಗಿಯದ ಹಬ್ಬದ ಸಿದ್ದತೆ ಓಣಿ ತುಂಬಾ ಎಲ್ಲೆ ಹೋದರೂ ಬೆಲ್ಲದ ಪಾಕದ ಸುಗಂಧದ ಸುವಾಸನೆ. ಉಂಡೆಗಳು ನೆಂಟರು-ಬೀಗರಿಗೂ ಪಾಲಿದೆ. ಅವರವರ ಶಕ್ತಿಯನುಸಾರ ಸ್ವಾದವಂತೂ ಒಂದೆ ಸಿಹಿ-ಸಿಹಿ.
ನಾಗರಪಂಚಮಿ ಪರ-ವಿರೋಧ-
ಹುತ್ತಕ್ಕೆ ಹಾಲೆರೆಯುವುದು ವ್ಯರ್ಥ ಹಾವೇನು ನನಗೆ ಹಾಲು ಕುಡಿಸಿರಿ ಎಂದಿತೇನು? ಒಂದೆಡೆಯೆದಾರೆ, ನಂಬಿಕೆ- ನಾಗದೇವತೆಗೆ ಹಾಲೆರೆವುದು ಭಕ್ತಿಯ ಪ್ರತೀಕ ಅದು ಕಲ್ಲಾದರೇನು-ಕಾಣದಂತೆ ಹುತ್ತಳೊಗಿದ್ದರೇನು ನಾವು ಎರೆಯುವ ಹಾಲು ನಾಗದೇವತೆಗೆ ಅರ್ಪಿತವಾದಂತೆ ಎನ್ನುವಂತೆ ಹಿರಿಯರು ಅನಾದಿ ಕಾಲದಿಂದ ನಡೆಸಿಕೊಂಡು ಬಂದ ಪದ್ದತಿ. ಎನ್ನುವುದು ಒಂದೆಡೆಯಾದರೆ,
ಕಲ್ಲುನಾಗ ಕಂಡರೆ ಹಾಲುಂಬೆರು, ನಿಜನಾಗ ಕಂಡರೆ ಕೊಲ್ಲೆಂಬೆರು ಹೌದು ನಾಗರ ಹಾವು ಅದೆಂದೂ ಹಾಲು ಕುಡಿಯುವುದಿಲ್ಲ, ಅದು ಸತ್ಯವೆ. ಹಾವುಗಳು ಮಾಂಸಹಾರಿ ಅದರ ಆಹಾರ ಇಲಿ- ಹುಳು-ಹುಪ್ಪಟೆ-ಮೊಟ್ಟೆ ಆದರೆ ಹಾಲನ್ನು ಎರೆಯುತ್ತಾರೆ ಏಕೆ? ಎಂದು ಪ್ರಶ್ನಿಸಿದರೆ “ನಮ್ಮ ಸುತ್ತಮುತ್ತ ವಾಸವಾಗಿರುವ ಹಾವುಗಳು ಹಾಲು ಕುಡಿದು ಅವುಗಳೊಗಿನ ವಿಷ ಕಡಿಮೆ- ಯಾಗಲಿ ಎನ್ನುವ ಭಾವನೆ.
ನಾಗದೇವತೆ ಸಂಪ್ರೀತಿಯಾಗಲೆನ್ನುವ ಭಕ್ತಿಯ ಅನಾವರಣ. ಇದಕ್ಕಾಗಿಯೆ ರಚಿಸಿದ್ದಾರೆ ನಾಗರ ಪಂಚಮಿಯಂದು ಹುತ್ತಕ್ಕೆ ಹಾಲೆರೆಯ ಬೇಕೆನ್ನುವ ಪದ್ದತಿ. ಹಾವುಗಳ ದೇಹ ಪ್ರಕೃತಿಯೆ ಕಾರ್ಕೋಟಕ ವಿಷದಿಂದ ರಚಿಸಿದೆ ಆದರೆ ಹಾವು ಅದೆಂದೂ ಅವಾಗಿ ಅವೇ ಎಂದೂ ಮನುಷ್ಯನಿಗೆ ಕಚ್ಚಿ ಸಾಯಿಸಿದ ಉದಾಹರಣೆಗಳು ಸಾಬೀತಾಗಿಲ್ಲ.
ಆದರೆ ನಾವು ಅವುಗಳಿಗೆ ತೊಂದರೆ ಕೊಟ್ಟೆವೋ, ಹಿಂಸಿಸಿದೆವೋ ಅವುಗಳು ಕಚ್ಚಿ ಸಾಯುವುದಂತೂ ಸತ್ಯ. ಹಾವುಗಳು ವಾಸಿಸುವ ಜಾಗವನ್ನು ನಾವು ಆಕ್ರಮಿಸಿಕೊಂಡಿದ್ದೇವೆ. ಬೇರೆಲ್ಲಿ ಹೋಗಬೇಕು ಹಾವುಗಳು ಸಾದ್ಯವಾದರೆ ಅವುಗಳನ್ನು ಉಪಾಯವಾಗಿ ಹಿಡಿದು ದೂರ ಸಾಗಿಸಬೇಕು, ಸಾಯಿಸುವಂದಂತೂ ಸಲ್ಲದು ನಮಗೂ ಬದುಕಲು ಹಕ್ಕಿದೆ ಹಾವುಗಳಿಗೂ ಹಕ್ಕಿದೆ. ಹಾವುಗಳಿಗೇನೋ ಪ್ರಕೃತಿ ವಿಷತುಂಬಿ ಜನ್ಮನೀಡಿದೆ ಆದರೆ ಮಾನವರು ನಾವು ಅಮೃತ ತುಂಬಿ ಭೂಮಿಗೆ ಭಗವಂತ ಕಳಿಸಿದ್ದರೂ ವಿಷ ಕಾರುವುದೇಕೆ? ಊಸುರುವಳ್ಳಿಗಳಂತೆ ಬಣ್ಣ ಬದಲಿಸಬೇಕೇಕೆ? ನಮಗೂ ಹಾವಿಗೂ ಊಸುರುವಳ್ಳಿಗಳಿಗೂ ವ್ಯತ್ಯಾಸವೇನು ಕಾಣದು.
ಪ್ರಕೃತಿ ಆಹಾರದ ಸರಪಳಿ ರಚಿಸಿದ್ದೆ ಅದೊಂದು ವಿಸ್ಮಯ ಮುಂಗುಸಿಗೆ- ಹಾವು- ಹಾವಿಗೆ-ಇಲಿ. ಇಲಿಗಳಿಗೆ ಮನೆಗಳೆ ಆವಾಸ ಮನೆಯೊಳಗೆ ಇಲಿಗಳ ಹಾವಳಿಯಿಂದ ಮುಕ್ತವಾಗಬೇಕೆ? ಹಾವುಗಳು ಬೇಕು-ಹಾವುಗಳಿಂದ ರಕ್ಷಣೆ ಬೇಕೆ? ಅವುಗಳ ಜೀವಕ್ಕೆ ಹಾನಿ ಮಾಡಬಾರದು.
ಇದನ್ನೆ ಅರಿತು ಹಿರಿಯರು ನಾಗರಪಂಚಮಿ ಹಬ್ಬದ ಆಚರಣೆಗೆ ತಂದರು. ರಮಣಮಹರ್ಷಿಗಳು ಅವರ ಕೊನೆಯ ದಿನಗಳಲ್ಲಿ ಹುಳುಗಳು ಅವರ ದೇಹವನ್ನೆ ತಿನ್ನುತ್ತಿದ್ದರೂ ಅವನ್ನು ನಾಶಮಾಡದೆ. ನನ್ನ ದೇಹ ಈ ಹುಳುಗಳಿಗೆ ಆಹಾರವಾಗುವ ಅವಕಾಶ ಭಗವಂತ ನೀಡಿದನಲ್ಲ ಎಂದು ನಿಶ್ಯಬ್ಧರಾದರೆನ್ನುವುದು ಮಾನವೀಯತೆಯ ಪರಕಾಷ್ಟೆ.
ಒಂದು ದೇಶದಲ್ಲಿ ಇಲಿಗಳು ಜನ ಜೀವನವೆಲ್ಲ ದ್ವಂಸಮಾಡಿದ್ದು ಕಂಡಾಗಿದೆ ಅವುಗಳ ನಾಶಕ್ಕೆ ಬಲೆ, ಪಂಜರ, ಇಲಿ ಪಾಶಾಣ ಮುಂತಾದವುಗಳಿಗೆ ಅಪಾರ ಬೇಡಿಕೆ ಅದರಿಂದ ಒಂದು ದೇಶದ ಆಡಳಿತವೇ ಬುಡಮೇಲಾದ ಸಂಗತಿ ಕಣ್ಮುಂದಿದೆ ಕಾರಣ ಅಲ್ಲಿ ಹಾವುಗಳಿಗೆ ಬದುಕಲು ಬಿಡದೆ ನಾಶ ಮಾಡಿದ ಪರಿಣಾಮ.
ಪ್ರಕೃತಿ ರಚಿಸಿದ ಆಹಾರದ ಸಂರಚನೆ ಜ್ಞಾನ ಅರಿವಿಲ್ಲದಂತಾಗಿದ್ದು. ನಾವು ಸುಖವಾಗಿ ಜೀವಿಸಬೇಕೆ? ಹಾವುಗಳು ನಮ್ಮ ನಡುವೆ ಇರಬೇಕು. ಅವುಗಳು ನಮ್ಮ ನಾಗ ದೇವತೆಯಾಗಿ ಆರಾಧಿಸಲು ಪಂಚಮಿ ಹಬ್ಬದ ದಿನ ಭಕ್ತಿ ಸಡಗರದಿಂದ ಕಾಣದ ನಾಗರ ಹಾವಿಗೆ ಹಾಲೆರೆಯ ಬೇಕು ಉಳಿದಿದ್ದೆಲ್ಲ ಅವರವರ ಭಾವ ಅವರವರ ಅನುಕೂಲ.

ಸರ್ವೇ ಜನೋ ಸುಖಿನೋ ಭವಂತು ಸರ್ವೇ ಸಂತು ನಿರಾಮಯಃ
ನಾವು ಸುಖವಾಗಿ ಬದುಕೋಣ ಬೇರೆ ಜೀವಿಗಳನ್ನು ಸುಖವಾಗಿ ಬದುಕಲು ಬಿಡೋಣ. ನಾಗರಪಂಚಮಿ ಮತ್ತು ರಕ್ಷಾಬಂಧನ ಹಬ್ಬಗಳ ಶುಭಾಶಯಗಳು ಲೇಖನ-ವೀರಣ್ಣ ಬ್ಯಾಗೋಟಿ. ಬೀದರ.

