ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಡಿಕೆ ಶಿವಕುಮಾರ್ ನೀವು ಬೆಂಗಳೂರು ಉಸ್ತುವಾರಿ ಸಚಿವರಾಗಲು ನಾಲಾಯಕ್. ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಬೆಂಗಳೂರಿನ ನಾಗರಿಕರು ನಿತ್ಯ ನರಕ ಅನುಭವಿಸುತ್ತಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಬೆಂಗಳೂರಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ. ಇದನ್ನು ಪ್ರಶ್ನೆ ಮಾಡಿದರೆ ಅವರು, ಮನೆ ಸರಿಯಾಗಿ ಕಟ್ಟಿಲ್ಲ ಎಂದು ಉಡಾಫೆಮಾತು ಆಡುತ್ತಿರಾ.
ಸಿಲಿಕಾನ್ ಸಿಟಿಯಲ್ಲಿ ಚರಂಡಿಗಳಲ್ಲಿ ತುಂಬಿರುವ ಊಳು ತೆಗೆಸಿಲ್ಲ, ಮೋರಿಗಳನ್ನು ಕ್ಲೀನ್ ಮಾಡಿಸಿಲ್ಲ. ಒಂದರೆಡು ತಾಸು ಮಳೆ ಬಂದರೆ ರಸ್ತೆಗಳು ಸಂಪೂರ್ಣ ಕೆರೆಯಾಗುತ್ತದೆ.
ಅದಕ್ಷ ಕಾಂಗ್ರೆಸ್ ಸರ್ಕಾರದಿಂದ ಬೆಂಗಳೂರಿನ ಮಾನ ವಿಶ್ವ ಮಟ್ಟದಲ್ಲಿ ಹರಾಜಾಗುತ್ತಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಬೆಂಗಳೂರಿನಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿ ಪಡಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಕಸದ ಮಾಫಿಯಾಕ್ಕೆ ಮಣಿದು ಕಮಿಷನ್ ಆಸೆಗೆ ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿ ಮಾಡಿದ್ದೀರಿ. ಇದು ಸರ್ಕಾರದ ಅಸಮರ್ಪಕ ಆಡಳಿತಕ್ಕೆ ಹಿಡಿದ ಕನ್ನಡಿ.
“ಗ್ರೇಟರ್ ಬೆಂಗಳೂರು”, “ಬ್ರ್ಯಾಂಡ್ ಬೆಂಗಳೂರು” ಬರೀ ಹೆಸರಿಗಷ್ಟೇ. ಈ ಲೂಟಿ ಯೋಜನೆಯ ನಿಜವಾದ ಫಲಾನುಭವಿಗಳು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ಸಿಗರೇ ಆಗಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಸರ್ಕಾರ ನಿಮ್ಮದು, ಅಧಿಕಾರ ನಿಮ್ಮದು. ಬೆಂಗಳೂರು ಉಸ್ತುವಾರಿ ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಬೆಂಗಳೂರು ಅಭಿವೃದ್ಧಿಗೆ ನಿಮ್ಮ ಕೊಡುಗೆ ಶೂನ್ಯ ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.