ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜಕೀಯದಲ್ಲಿ ಒಮ್ಮೆ ಒಂದು ಹುದ್ದೆಗೇರಿದರೆ ಅವರನ್ನ ಕೆಳಗಿಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ರಾಜಕಾರಣದಲ್ಲಿ ನಂಬಿಕೆ, ಒಡಂಬಡಿಕೆಗೆ ಬೆಲೆ ಇಲ್ಲದಂತಾಗಿದೆ. ತಂಗಿಯನ್ನ ಗ್ರಾಪಂ ಅಧ್ಯಕ್ಷರನ್ನಾಗಿ ಮಾಡಲು ಅಣ್ಣ (ಸಹೋದರ) ಸಾಕಷ್ಟು ಕಷ್ಟಪಟ್ಟಿದ್ದರು.
ಇದಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್ ಜೊತೆ ಒಡಂಬಡಿಕೆ ಮಾಡಿಕೊಂಡು ತೆರೆ ಮರೆಯಲ್ಲಿ ನಿಂತು ಅಣ್ಣ ತಂಗಿಯನ್ನ ಗ್ರಾಪಂ ಅಧ್ಯಕ್ಷೆಯನ್ನಾಗಿ ಮಾಡಿದ್ದ. ಒಡಂಬಡಿಕೆಯಂತೆ ತನ್ನ ಅವಧಿ ಮುಗಿದಾಗ ಅಣ್ಣನ ಸೂಚನೆಯಂತೆ ತಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡದಿರುವುದರ ವಿರುದ್ಧ ಸಿಡಿದ ಸಹೋದರ ಒಡಂಬಡಿಕೆ ಮುರಿದ ತಂಗಿ ವಿರುದ್ಧ ಅವಿಶ್ವಾಸ ತಂದು ಗೆದ್ದ ಹಠವಾದಿ ಅಣ್ಣ.
ಹಿರಿಯೂರು ತಾಲೂಕಿನ ಐಮಂಗಲ ಹೋಬಳಿಯ ಬುರುಜನರೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಈ ಘಟನೆ ಜರುಗಿದೆ.
ಮಾಜಿ ಜಿಪಂ ಉಪಾಧ್ಯಕ್ಷ ಕೆ.ದ್ಯಾಮಣ್ಣ ಅಲಿಯಾಸ್ ದ್ಯಾಮೇಗೌಡ ಇವರು ಕೋವೇರಹಟ್ಟಿಯ ತನ್ನ ಸಹೋದರಿ ರಾಧಮ್ಮ ಇವರನ್ನ ಅಧ್ಯಕ್ಷ ಸ್ಥಾನದಿಂದ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋವೇರಹಟ್ಟಿ ಕೆ.ದ್ಯಾಮಣ್ಣ ಇವರು ತನ್ನ ಸಹೋದರಿ ಎಂದು ನೋಡದೆ, ತನ್ನ ಜಾತಿಕಳೆಂದೂ ಆದ್ಯತೆ ಕೊಡದೆ ಕೊಟ್ಟ ಮಾತಿನಂತೆ ಸಹೋದರಿ ರಾಧಮ್ಮ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಾಗ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರನ್ನು ಒಗ್ಗೂಡಿಸಿ ತಂಗಿ ರಾಧಮ್ಮ ಇವರನ್ನ ಅಧಿಕಾರದಿಂದ ಕೆಳಗಿಳಿಸಿ ವೀರಶೈವ ಲಿಂಗಾಯಿತ ಜಾತಿಗೆ ಸೇರಿದ ಚಿಕ್ಕ ಸಿದ್ದವ್ವನಹಳ್ಳಿಯ ಕವಿತಾ ವಿರೂಪಾಕ್ಷಪ್ಪ ಇವರನ್ನ ಅಧ್ಯಕ್ಷರನ್ನಾಗಿ ಮತ್ತು ಪಾಲವ್ವನಹಳ್ಳಿಯ ನಾಗರಾಜ್ ಇವರನ್ನ ಉಪಾಧ್ಯಕ್ಷರನ್ನಾಗಿ ಚುನಾವಣೆ ಮೂಲಕ ಆಯ್ಕೆ ಮಾಡಿಸಿದ್ದಾರೆ.
ಬುರುಜನರೊಪ್ಪ ಗ್ರಾಪಂ-
ಬುರುಜನರೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 19 ಸದಸ್ಯರಿದ್ದು ಈ ಪೈಕಿ 9 ಬಿಜೆಪಿ, 3 ಜೆಡಿಎಸ್, 7 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಕೇವಲ ಮೂರು ಸದಸ್ಯರಿರುವ ಜೆಡಿಎಸ್ ಬೆಂಬಲಿತ, ಹಿರಿಯೂರು ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಾಧಮ್ಮ ಇವರನ್ನ ಬಿಜೆಪಿ ಮುಖಂಡ ಕೆ.ದ್ಯಾಮೇಗೌಡ ಇವರು ಒಡಂಬಡಿಕೆ ಮೂಲಕ ಗ್ರಾಪಂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಸುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಒಡಂಬಡಿಕೆಯಂತೆ ಅಧ್ಯಕ್ಷೆ ರಾಜೀನಾಮೆ ನೀಡಿದಿದ್ದಾಗ ಮತ್ತು ಅಧಿಕಾರದಲ್ಲಿ ಮುಂದುವರೆಯುವ ಆಸೆಗಾಗಿ ಕಾಂಗ್ರೆಸ್ ಪಕ್ಷದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಸಹೋದರಿಯ ವಿರುದ್ಧವೇ ಅವಿಶ್ವಾಸ ತಂದು ಬೇರೊಂದು ಜಾತಿ(ವೀರಶೈವ ಲಿಂಗಾಯಿತ)ಯ ಮಹಿಳೆ ಕವಿತಾ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಸಿದ ಕೀರ್ತಿ ದ್ಯಾಮೇಗೌಡರಿಗೆ ಸಲ್ಲುತ್ತದೆ.
ಚಿಕ್ಕಸಿದ್ದವ್ವನಹಳ್ಳಿ-
ಬುರುಜನರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹಿರಿಯೂರು-ಚಿತ್ರದುರ್ಗ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಚಿಕ್ಕ ಸಿದ್ದವ್ವನಹಳ್ಳಿ ಗ್ರಾಮದ ಯಾವೊಬ್ಬ ಸದಸ್ಯರೂ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿದ್ದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರಲಿಲ್ಲ. ರಾಜಕೀಯವಾಗಿ ಚಿಕ್ಕ ಸಿದ್ದವ್ವನಹಳ್ಳಿ ಗ್ರಾಮವನ್ನು ಸಂಪೂರ್ಣ ನಿರ್ಲಕ್ಷ್ಯಕ್ಕೆ ದೂಡಲಾಗಿತ್ತು. ಆದರೆ ಈ ಆರೋಪದಿಂದ ಗ್ರಾಮ ಈಗ ಮುಕ್ತವಾಗಿದೆ. ವೀರಶೈವ ಲಿಂಗಾಯಿತ ಜಾತಿಗೆ ಸೇರಿದ ಕವಿತಾ ಇವರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಗ್ರಾಮದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಕೀರ್ತಿಗೂ ಕವಿತಾ ಪಾತ್ರರಾಗಿದ್ದಾರೆ.
ಜೆಡಿಎಸ್ ಮುಖಂಡರು-ಜೆಡಿಎಸ್ ಮುಖಂಡರಾದ ಎಂ.ತಿಪ್ಪೇಸ್ವಾಮಿ, ಸುರೇಶ್, ರಾಮಚಂದ್ರಪ್ಪ, ರಂಗನಾಥ್, ಮಹಂತೇಶ್ ಇವರುಗಳು ಪತ್ರಿಕೆಯೊಂದಿಗೆ ಮಾತನಾಡಿ, ಬುರುಜನರೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಕೇವಲ ಜೆಡಿಎಸ್ ಬೆಂಬಲಿತ 3 ಸದಸ್ಯರಿದ್ದರೂ ಕೂಡ ದ್ಯಾಮೇಗೌಡರ ಕಾರಣಕ್ಕಾಗಿ ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ, ಕೋವೇರಹಟ್ಟಿ ಗ್ರಾಪಂ ಸದಸ್ಯೆಯಾದ ರಾಧಮ್ಮ ಇವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಸಲಾಗಿತ್ತು.
ಆದರೆ ಕೊಟ್ಟ ಮಾತಿನಂತೆ ಅವರು ರಾಜೀನಾಮೆ ನೀಡದಿದ್ದಾಗ ಅವರ ಸಹೋದರ ಕೆ.ದ್ಯಾಮೇಗೌಡರು ಮುಂದೆ ನಿಂತು ಅವಿಶ್ವಾಸ ಮಂಡಿಸಿ ಅಧಿಕಾರದಿಂದ ತಂಗಿಯನ್ನು ಕೆಳಗಿಸಿರುವುದಲ್ಲದೆ ಇತಿಹಾಸದಲ್ಲೇ ಎಂದೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಪಡೆದ ಚಿಕ್ಕ ಸಿದ್ದವ್ವನಹಳ್ಳಿಯ ಸದಸ್ಯೆ ಕವಿತಾ ಇವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಸಿದ ಕೀರ್ತಿ ದ್ಯಾಮೇಗೌಡರಿಗೆ ಸಲ್ಲುತ್ತದೆ ಎಂದು ತಿಳಿಸಿದರು.