ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜೇನು ಕೃಷಿ, ಗೋವು ಆಧಾರಿತ ಮತ್ತು ಮರ ಆಧಾರಿತ ನೈಸರ್ಗಿಕ ಕೃಷಿಯ ಅಳವಡಿಕೆಯಿಂದ ಉತ್ತಮ ಆರೋಗ್ಯ, ಪರಿಸರ ಮತ್ತು ಸುಸ್ಥಿರ ಆದಾಯ ಪಡೆಯಲು ದಾರಿ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ರಜನೀಕಾಂತ ಹೇಳಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಜಿಲ್ಲೆಯ ಆಸಕ್ತ ಕೃಷಿಕರಿಗೆ ಮರ ಆಧಾರಿತ ನೈಸರ್ಗಿಕ ಕೃಷಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚಿನ ಬೆಳೆ ಇಳುವರಿ ಪಡೆಯುವ ಉದ್ದೇಶದಿಂದ ಅಸಮರ್ಪಕ ಹಾಗೂ ಅವೈಜ್ಞಾನಿಕವಾಗಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ರೈತರ ಬೆಳೆ ಉತ್ಪಾದಾನೆ ವೆಚ್ಚ ಹೆಚ್ಚಾಗುತ್ತಿದ್ದು ಪರಿಸರದ ಮಾಲಿನ್ಯ ಮತ್ತು ಜೀವವೈವಿದ್ಯತೆಯನ್ನು ಕಾಪಾಡುವಲ್ಲಿ ವಿಫಲಾರಾಗಿದ್ದೇವೆ ಎಂದು ತಿಳಿಸಿದ ಅವರು, ರೈತಬಾಂಧವರು ತರಬೇತಿಯ ಸದುಪಯೋಗ ಪಡೆದು ಕೊಳ್ಳುವಂತೆ ಮನವಿ ಮಾಡಿದರು.
. ಪ್ರಗತಿ ಪರ ಕೃಷಿಕ ಸಿದ್ದವೀರಪ್ಪ ಮಾತನಾಡಿ, ಪ್ರಕೃತಿಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು, ಪರಿಸರ ಸ್ನೇಹಿ ಕೃಷಿ ಮಾಡಬೇಕೆಂದರು.
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ್ ಅರಸ್ ಮಾತನಾಡಿ, ಪರಿಸರ ಸಂರಕ್ಷಣೆಗೆ ಜೀವವೈವಿದ್ಯತೆ ಕಾಪಾಡುವುದು ಮತ್ತು ಜಲಜಾಗೃತಿ ಮೂಡಿಸುವುದು ಅನಿವಾರ್ಯವಾಗಿದ್ದು, ಇಂಥಹ ತರಬೇತಿಗಳು ಇಂದಿನ ಅವಶ್ಯಕತೆಯಾಗಿದೆಂದರು.
ತಾಂತ್ರಿಕ ಅಧಿವೇಶನದಲ್ಲಿ ಬೆಂಗಳೂರು ಗ್ಲೋಬಲ್ ಗ್ರೀನ್ ಗ್ರೋಥ್ ಸಂಸ್ಥೆ, ಕರ್ನಾಟಕ ವೈಜಾÐನಿಕ ಸಲಹಾ ಸಮಿತಿಯ ಮಂಡಳಿ ಸದಸ್ಯರು ಹಾಗೂ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ತೆಗಳಿಗೆ ವೈಜ್ಞಾನಿಕ ಸಲಹೆಗಾರರು ಮತ್ತು ಮಂಡಳಿ ಸಮಿತಿ ಸದಸ್ಯ ಡಾ. ಚಂದ್ರಶೇಖರ್ ಎಂ ಬಿರಾದಾರ್ ಮಾತನಾಡಿ, ನಾವು ಮಾಡುವ ಕೃಷಿ ಭೂಮಿಯಲ್ಲಿ ಶೇ 33 ರಷ್ಟು ಮರಗಳಿರಬೇಕು ಆದರೆ ಶೇ 3ಕ್ಕಿಂತ ಕಡಿಮೆ ಇದ್ದು ವಾತವರಣದಲ್ಲಿ ಏರುಪೇರಾಗಿದ್ದು ಸರಿಯಾದ ಪ್ರಮಾಣ ಮತ್ತು ಸಮಯದಲ್ಲಿ ಮಳೆ ಬರುತ್ತಿಲ್ಲವೆಂದರು.
ಮರ ಆಧಾರಿತ ನೈಸರ್ಗಿಕ ಕೃಷಿಯಿಂದ ಉತ್ತಮ ಮಳೆ, ಮಣ್ಣಿನ ಆರೋಗ್ಯದಲ್ಲಿ ಸುಧಾರಣೆ, ಕಡಿಮೆ ಮಣ್ಣಿನ ಸವಕಳಿ, ಮಿತ್ರ ಹಾಗೂ ಶತ್ರು ಕೀಟಗಳ ಸಮತೋಲನೆ, ತಂಪಾದ ವಾತವರಣ, ಕಡಿಮೆ ನೀರಿನ ಆವಿಯಾಗುವಿಕೆ, ಹೆಚ್ಚಿನ ನೀರಿನ ಇಂಗುವಿಕೆ, ವಾತವರಣದ ಇಂಗಾಲದ ಪ್ರಮಾಣದಲ್ಲಿ ಗಣನೀಯ ಇಳುಮುಖವಾಗುವುದಲ್ಲದೆ ಉತ್ತಮ ಪರಿಸರ ಮತ್ತು ಆರೋಗ್ಯ ಪಡೆಯಲು ಸಹಕಾರಿಯಾಗಿದೆಂದರು.
ಇದಲ್ಲದೆ, ನೈಸರ್ಗಿಕ ಕೃಷಿಯಲ್ಲಿ ಮುಖ್ಯವಾಗಿ ಕಡಿಮೆ ಉಳಿಮೆ, ಭೂಮಿಯ ಮುಚ್ಚಿಗೆ, ಬಹು ಮಹಡಿ ಬೆಳೆ ಪದ್ದತಿ ಅಳವಡಿಕೆ, ಜೀವಾಮೃತ ಮತ್ತು ಬೀಜಾಮೃತ ಬಳಕೆಯಿಂದ ಸುಸ್ಥಿರ ಇಳುವರಿ ಪಡೆಯಲು ಅನುಕೂಲಕರವಾಗಿದೆಂದರು. ರೈತರು ಹೊಲದಲ್ಲೇ ಮನೆಮಾಡಿಕೊಂಡು ಕೃಷಿಯಲ್ಲಿ ತೊಡಗುವುದರಿಂದ ಕೃಷಿಯ ಮೇಲ್ವಾಚರಣೆ ಮಾಡುವುದು ಸುಲಭವಾಗುತ್ತದೆ ಎಂದರು.
ತಾಂತ್ರಿಕ ಅಧಿವೇಶನದ ನಂತರ ಅಪರಾಹ್ನ, ರೈತರೊಂದಿಗೆ ಮರ ಆಧಾರಿತ ನೈಸರ್ಗಿಕ ಕೃಷಿಯ ಕುರಿತು ಸಂವಾದ ಕರ್ಯಕ್ರಮದಲ್ಲಿ ಒಂದು ಎಕರೆಯಲ್ಲಿ ಕನಿಷ್ಟ 40 ರಿಂದ 100 ವರ್ಷವಿಡಿ ಹಣ್ಣು ನೀಡುವ ವಿವಿಧ ಜಾತಿಯ ಮರಗಳನ್ನು ಸಮಯೋಜನೆ ಮಾಡಬಹುದು. ಮುಂಗಾರು ಪೂರ್ವದಲ್ಲಿ 5 ಕೆಜಿ ವಿವಿಧ ಏಕದಳ ಧಾನ್ಯ, 5 ಕೆಜಿ ವಿವಿಧ ದ್ವಿದಳ ಧಾನ್ಯ ಮತ್ತು 5 ಕೆಜಿ ವಿವಿಧ ಎಣ್ಣೇಕಾಳು ಧಾನ್ಯಗಳ ಬೀಜಗಳನ್ನು ಬಿತ್ತನೆ ಮಾಡಿ ನಂತರ ಬೀಳುವ ಮಳೆಯಿಂದ ಮೊಳಕೆಯೊಡೆದು 40-45 ದಿನದ ಬೆಳೆಯನ್ನು ನಂತರ ಭೂಮಿಗೆ ಸೇರಿಸುವುದರಿಂದ 70-80 ಮೆಟ್ರಿಕ್ ಟನ್ ಹಸಿರೆಲೆ ಗೊಬ್ಬರ ಸೇರಿಸಿದಂತಾಗುತ್ತದೆ ಮತ್ತು ಜೀವವೈವಿದ್ಯತೆ ಹೆಚ್ಚಿಸಲು ಸಹಕಾರಿಯಗಿದೆ.
ರೈತರು ನೈಸರ್ಗಿಕ ಕೃಷಿಯಲ್ಲಿ ವಿವಿಧ ಜಾತಿಯ ಮರ ಅಥವಾ ಹಣ್ಣಿನ ಗಿಡಗಳನ್ನು ಸಂಯೋಜನೆ ಮಾಡುವಾಗ ತಮ್ಮ ಸುತ್ತಮುತ್ತಿಲಿನ 50 ಕಿಮೀ ವ್ಯಾಸದಲ್ಲಿ ಬೆಳೆಯುವ ಸ್ಥಳೀಯ ತಳಿಗಳನ್ನು ಉಪಯೋಗಿಸಬಹುದಾಗಿದೆ. ಏಕ ಬೆಳೆ ಪದ್ದತಿಯಿಂದ ಬಹುಬೆಳೆಪದ್ದತಿಯನ್ನು ಅಳವಡಿಸುವುದರಿಂದ ಸುಸ್ಥಿರ ಆದಾಯ ಮತ್ತು ಮಣ್ಣಿನ ಆರೋಗ್ಯ ಸುಧಾರಿಸಲು ಅನುಕೂಲಕರವಾಗುತ್ತದೆ.
ರೈತರು ತಮಗೆ ಬೇಕಾದ ಹಣ್ಣು, ಆಹಾರ, ಮೇವು, ಗೊಬ್ಬರ, ಉರುವಲು ಮತ್ತು ಜೈವಿಕ ಇದ್ದಿಲು ಪೂರೈಸುವ ಮರಗಿಡಗಳನ್ನು ತಮ್ಮ ಕೃಷಿಯಲ್ಲಿ ಸಂಯೋಜನೆ ಮಾಡಬೇಕೆಂದರು. ಜಾಜಿಯಿಲ್ಲದ ಕಾಯಕವೆಂದರೆ ಕೃಷಿಯಾಗಿದ್ದು, ಒಗ್ಗಟ್ಟಾಗಿ ನೈಸರ್ಗಿಕ ಕೃಷಿ ಅಳವಡಿಕೆಯಿಂದ ರೈತರು ಸ್ವಾವಲಂಬನೆಯ ಜೀವನ ಸಾಗಿಸಬಹುದೆಂದರು.
ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತಿ ಮತ್ತು ಪರಿಸರ ಸಂರಕ್ಷಣಾ ಉಪಾಧ್ಯಕ್ಷ ಓಂಕಾರಪ್ಪ ಸೇರಿದಂತೆ ರೈತರು ಇದ್ದರು.