ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಮಲೆನಾಡು ಸೇರಿದಂತೆ ಮತ್ತಿತರ ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಲಕ್ಷಕ್ಕೂ ಹೆಚ್ಚಿನ ನೀರು ಹರಿದು ಬರುತ್ತಿದ್ದು ಡ್ಯಾಂನಿಂದ ಈಗ 1 ಲಕ್ಷಕ್ಕೂ ಹೆಚ್ಚಿನ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ.
ಪರಿಣಾಮ ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು, ಬಳ್ಳಾರಿ – ಗಂಗಾವತಿ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಕಂಪ್ಲಿ ಸೇತುವೆಗೆ ಅಡ್ಡಲಾಗಿ ಪೊಲೀಸರು ಬ್ಯಾರಿಕೇಡ್ ನಿರ್ಮಾಣ ಮಾಡಿ ರಸ್ತೆ ಬಂದ್ ಮಾಡಿದ್ದಾರೆ. ಇದರಿಂದಾಗಿ ಸುತ್ತಿ ಬಳಸಿ ಗಂಗಾವತಿಗೆ ತೆರಳಬೇಕಾಗಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆ ಪ್ರಮಾಣ ಹೆಚ್ಚಾಗಿದ್ದು ತುಂಗಭದ್ರಾ ಜಲಾಶಯಕ್ಕೆ ಸದ್ಯ 1,07,500 ಕ್ಯೂಸೆಕ್ ನೀರಿನ ಒಳ ಹರಿವು ಇದೆ. ಟಿಬಿ ಡ್ಯಾಂ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 26 ಗೇಟ್‌ಗಳ ತೆರೆಯಲಾಗಿದ್ದು 1,06,548 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದೆ.
ಏಕಾಏಕಿ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸುತ್ತಿರುವುದರಿಂದಾಗಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಪರಿಣಾಮ ಬಳ್ಳಾರಿ – ಗಂಗಾವತಿ ಸಂಪರ್ಕ ಕಡಿತವಾಗಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದು ಬ್ಯಾರಿಕೇಡ್ ಅಳವಡಿಸಿ, ಪೊಲೀಸರ ನಿಯೋಜನೆ ಮಾಡಿದೆ. ಅಲ್ಲದೇ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ನದಿ ಪಾತ್ರದ ಗ್ರಾಮಗಳ ಜನರು ನದಿ ತೀರಕ್ಕೆ ಹೋಗದಂತೆ ತುಂಗಭದ್ರಾ ಜಲಾಶಯ ಬೋರ್ಡ್ ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಿದೆ.

