ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗಾಲಿ
———-
ಬೆಳಗಿನ ಮೈಕುಗಳಿಂದ
ಎಚ್ಚೆತ್ತ ಬದುಕು
ಏನೆಲ್ಲ ಸರಂಜಾಮುಗಳ
ಹೊತ್ತು ಎಳೆದು
ಹತ್ತುವ ಇಳಿಯುವ ಪಯಣಿಗ
ಹಾಲಿಗರಸುವ ಕರು
ಮೊಲೆಯುಣಿಸೋ ತವಕದ ತಾಯಿ
ಮುತ್ತೈದೆಯಾದ ವಿಧವೆ
ಹಸಿವಿಗುಟ್ಟುವ ಹಾದರ
ಕೆಂಪು ಗಲ್ಲಿಗಳ ನಗು
ಪೇಪರ್ ನ ಸಾಲುಗಳಲಿ
ರಕ್ತದ್ದೇ ಮೇರು ಸುದ್ದಿ
ಒಸಾಮನ ಸೈತಾನ ಸಂತಾನ
ಕೇಸರಿಯಲಿ ಮೊಳೆತ
ರಾಮಾಯಣದ ರಾವಣ
ಹರಿತ ಆಯುಧಗಳು
ಹೊಗೆಯುಗುಳೋ ಕೋವಿಗಳು
ಮಾರಿಗುಡಿ ಮುಂದೆ
ಕುರಿ ಕೋಳಿ ರೋಧನ
ಖಾಕಿ ಎನ್ ಕೌಂಟರ್
ಹಾವಿನ ಹೆಡೆಯಾದ
ಅರಣ್ಯ ಸಂವಿಧಾನ
ಗುಡಿಸಿ ಸಾರಿಸಲೊರಟ
ಯಮ ಕರೋನ ಕಣ
ಘೀಳಿಟ್ಟ ಸುಡುಗಾಡು
ಸೂತಕದಲ್ಲಿಯೂ ಸುದ್ದಿ
ಕೋಟಿ ಕೋಟಿ ಸರ್ಕಾರಿ ಹಣ
ಕಾಯೋ ಬೇಲಿ ಮೇಯೋ ಪ್ರಕರಣ
ಮೈ ನೆರೆಯದ ಮಾತುಗಳು
ಆತ್ಮಾಹುತಿ ಅತ್ಯಾಚಾರ
ಬುದ್ಧಿಗೇಡಿ ಕೊಲೆಗಳು
ಪ್ರಜಾಪ್ರಭುತ್ವಕ್ಕೆ ಮಾರಕ
ಜಾತಿಗಳ ಕುಹಕ
ಸೌಧದೊಳಗೆ ಆತಂಕ
ಲಾಭ ನಷ್ಟಗಳ
ತಾಕಲಾಟದ ಮಧ್ಯೆ
ಪಡುವಣಕ್ಕಿಳಿದ ಸೂರ್ಯ
ಮತ್ತದೇ ಎಚ್ಚರದ ಮೈಕುಗಳು
ಹುಟ್ಟುವ ಸೂರ್ಯನೊಂದಿಗೆ
ಬೀದಿಯ ಬದುಕುಗಳು
ಕವಿತೆ-ಕುಮಾರ್ ಬಡಪ್ಪ, ಚಿತ್ರದುರ್ಗ.