ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿ-ಪುಟ್ಟಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಫಲಿತಾಂಶಕ್ಕೆ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಪುಟ್ಟಸ್ವಾಮಿ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‍ಎಸ್‍ಎಲ್‍ಸಿ, ಪಿಯುಸಿ ಫಲಿತಾಂಶ ಬಹಳ ಕಡಿಮೆ ಇದ್ದು, ಈ ಬಾರಿಯ ಫಲಿತಾಂಶ ಉನ್ನತಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ಇಲಾಖೆ ನಮ್ಮೆಲ್ಲರಿಗೂ ವಹಿಸಿದೆ. ಇದಕ್ಕೆ ಮುಖ್ಯವಾಗಿ ವಿದ್ಯಾರ್ಥಿಗಳ ಸಹಕಾರ ಬೇಕು. ಇಲ್ಲದಿದ್ದರೇ ಏಕಮುಖ ಶ್ರಮ, ಬದ್ಧತೆ ಉಪಯೋಗ ಆಗುವುದಿಲ್ಲ ಎಂದರು.

ಫಲಿತಾಂಶ ಹೆಚ್ಚಳಕ್ಕೆ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಜತೆಗೆ ಗುಂಪು ಓದು, ಚರ್ಚೆ ಮೂಲಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸನ್ನದ್ಧರನ್ನಾಗಿಸಲಾಗುತ್ತಿದೆ. ಇಲಾಖೆ ನೀಡಿದ ಗುರಿ ಮುಟ್ಟುವ ಹೊಣೆಗಾರಿಕೆ ಗುರುಗಳೇ ಮೇಲಿದ್ದರೇ, ಭವಿಷ್ಯ ರೂಪಿಸಿಕೊಳ್ಳುವ ಗುರಿ ನಿಮ್ಮಲ್ಲಿರಬೇಕು ಎಂದು ಹೇಳಿದರು.

ಭವಿಷ್ಯ ರೂಪಿಸಿಕೊಳ್ಳಲು, ಸಾಧನೆ ಗುರಿ ಮುಟ್ಟಲು ಛಲದೊಂದಿಗೆ ನಿರಂತರ ಅಧ್ಯಯನ, ಓದು, ಬರವಣಿಗೆ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಮಾತ್ರ ಕಲಿಕೆ ಎಂಬ ಮನೋಭಾವ ಕೈಬಿಡಬೇಕು. ಕಲಿಕೆ ನಿರಂತರವಾಗಿರಬೇಕು. ಸದಾ ವಿದ್ಯಾರ್ಥಿ ಆಗಿರಬೇಕು. ಆಗ ಮಾತ್ರ ಜೀವನದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯ ಎಂದರು.

ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಬಿ.ನರಸಿಂಹಮೂರ್ತಿ ಮಾತನಾಡಿ, ಸರ್ಕಾರಿ ಶಾಲೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಬಹಳ ಪ್ರಾಮಾಣಿಕವಾಗಿ ಓದಿ ಇಲ್ಲಿಗೆ ಬಂದಿರುತ್ತಾರೆ. ಜತೆಗೆ ಇಲ್ಲಿ ಶಿಕ್ಷಕರು ಕೂಡ ಹೆಚ್ಚು ಅಂಕ ಗಳಿಸಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉದ್ಯೋಗಕ್ಕೆ ಸೇರ್ಪಡೆ ಆಗಿರುತ್ತಾರೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಸರ್ಕಾರಿ ಸೇರಿ ವಿವಿಧ ಸಂಸ್ಥೆಗಳು, ಕ್ಷೇತ್ರಗಳ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಆದರೂ ಸರ್ಕಾರಿ ಶಾಲೆ ಎಂದಾಕ್ಷಣ ಮೂಗು ಮುರಿಯುವ ಜನರೇ ಹೆಚ್ಚು. ಈ ಮನಸ್ಥಿತಿಯಿಂದ ಜನ ಹೊರಬರಬೇಕು ಎಂದು ಹೇಳಿದರು.

ಹಿರಿಯ ಉಪನ್ಯಾಸಕ ಪ್ರೊ.ಬಿ.ಕೃಷ್ಣಪ್ಪ ಮಾತನಾಡಿ, ಒಂದೇ ಕಟ್ಟಡದಲ್ಲಿ ಕಾಲೇಜ್ ಮತ್ತು ಪ್ರೌಢಶಾಲೆ ಇದೆ. ನಾವೆಲ್ಲರೂ ಸಹೋದರರ ರೀತಿ ಇದ್ದೇವೆ. ಇಲ್ಲಿ ಕೊಠಡಿಗಳ ಸಮಸ್ಯೆ ಇತ್ತು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ತಮ್ಮ ಅನುದಾನದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಶೀಘ್ರ ಕಾಮಗಾರಿ ಪೂರ್ಣಗೊಂಡು ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರ ಬಿ.ಆರ್.ಶಿವಕುಮಾರ್ ಮಾತನಾಡಿ, ಓದು ಸಹಜವಾಗಿರಬಾರದು. ಓದಿದ್ದನ್ನು ಸದಾ ಮನನ ಮಾಡಿಕೊಳ್ಳಬೇಕು. ಕಲಿಕೆ ಹೇಗಿರಬೇಕು, ನೆನಪಿನ ಶಕ್ತಿ ವೃದ್ಧಿಸಿಕೊಳ್ಳುವುದು ಹೇಗೆ ಎಂಬ ವಿಷಯ ತಿಳಿದಿರಬೇಕು. ಆಗ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಎಂ.ಜಿ.ರಂಗಸ್ವಾಮಿ, ಎನ್.ನರಸಿಂಹಮೂರ್ತಿ, ಪುಟ್ಟಮಕ್ಮ, ಸಂತೋಷ್, ದೊಡ್ಡಯ್ಯ, ಬಿ.ಎಂ.ಗುರುನಾಥ್, ಚನ್ನಬಸಪ್ಪ, ಡಾ.ಹೇಮಂತರಾಜ್, ಈ.ಮಹೇಶಬಾಬು ಇತರರಿದ್ದರು.
ಪೋಟೋ ವಿವರ: ಚಿತ್ರದುರ್ಗ ಬಾಲಕರ ಸರ್ಕಾರಿ ಪದವಿರ್ಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಪುಟ್ಟಸ್ವಾಮಿ ಉದ್ಘಾಟಿಸಿದರು.

Share This Article
error: Content is protected !!
";