ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸದೃಢ ರಾಷ್ಟ್ರ ಹಾಗೂ ಸಭ್ಯ ಸಮಾಜ ನಿರ್ಮಿಸುವಲ್ಲಿ ಯುವ ಪೀಳಿಗೆಯ ಪಾತ್ರ ಬಹುಮುಖ್ಯವಾಗಿದ್ದು, ಯುವಕರು ನಿರುದ್ಯೋಗದ ಸುಳಿಗೆ ಸಿಲುಕದೆ ಸಾಧನೆಯ ಶಿಖರವೇರಲು ರಾಜ್ಯ ಸರ್ಕಾರದ ಯುವನಿಧಿ ಯೋಜನೆಯಡಿ ಒದಗಿಸುವ ಹಣವು ಯುವ ಸಮೂಹಕ್ಕೆ ಆರ್ಥಿಕ ಬಲ ತುಂಬಿದೆ.
ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರವು ಯುವನಿಧಿ ಗ್ಯಾರಂಟಿ ಯೋಜನೆ ಅನುಷ್ಟಾನಗೊಳಿಸಿದ್ದು, ಶಿಕ್ಷಣ ಪಡೆದು ಉದ್ಯೋಗ ದೊರೆಯದಿರುವಂತಹ ಪದವೀಧರಿಗೆ ರೂ.3,000 ಹಾಗೂ ಡಿಪ್ಲೋಮೊ ಪದವೀಧರಿಗೆ ಪ್ರತಿ ಮಾಹೆ ರೂ.1,500 ರೂ ನಿರುದ್ಯೋಗ ಭತ್ಯೆ ಒದಗಿಸುವ ಅಭೂತಪೂರ್ವ ಯೋಜನೆ ಇದಾಗಿದೆ.
ಕೆಪಿಎಸ್ಸಿ, ಯುಪಿಎಸ್ಸಿ, ಎಸ್ಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಸರ್ಕಾರಿ ಹುದ್ದೆಗಳ ಆಯ್ಕೆಗೆ ಕನಸು ಕಂಡ ಪದವಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಒತ್ತಾಸೆಯಾಗಿ ನಿಂತಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಮತ್ತು ಅರ್ಜಿ ಸಲ್ಲಿಸಲು ಹಣಕಾಸಿನ ಅವಶ್ಯಕತೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಿದ್ಧತೆಗಾಗಿ ಪುಸ್ತಕಗಳನ್ನು ಖರೀದಿಸಲು ಹಣಕಾಸಿನ ಅವಶ್ಯಕತೆ ಇದ್ದು, ರಾಜ್ಯ ಸರ್ಕಾರ ಯುವನಿಧಿ ಯೋಜನೆಯ ಮೂಲಕ ಒದಗಿಸುವ ಹಣ, ಅಂತಹವರಿಗೆ ಸದುಪಯೋಗವಾಗುತ್ತಿದ್ದು, ಸರ್ಕಾರಿ ಹುದ್ದೆಗಳ ಕನಸು ಕಾಣುವ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯು ಒತ್ತಾಸೆಯಾಗಿ ನಿಂತಿರುವುದಂತೂ ಸ್ಪಷ್ಟ.
ಪದವಿ ಪಡೆದ ತಕ್ಷಣವೇ ಖಾಸಗಿ ಉದ್ಯೋಗ ಅರಸಿ, ದೂರದ ಊರುಗಳಿಗೆ ತೆರಳಿ ಕೆಲಸ ಮಾಡುವ ಅನಿವಾರ್ಯತೆ ಹೊಂದಿದ್ದ ಬಡ ಕುಟುಂಬದ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಿರುವ ಯುವನಿಧಿ ಯೋಜನೆ, ಪೆÇೀಷಕರ ಆರ್ಥಿಕ ಹೊರೆಯೂ ಕಡಿಮೆ ಮಾಡಿದೆ.
ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರವು ಯುವನಿಧಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದ್ದು, ನಿರುದ್ಯೋಗಿ ಯುವಕರಿಗೆ ಎರಡು ವರ್ಷಗಳವರೆಗೆ ಅಥವಾ ಫಲಾನುಭವಿಗೆ ಉದ್ಯೋಗ ಸಿಗುವವರೆಗೆ (ಯಾವುದು ಮೊದಲೋ) ನಿರುದ್ಯೋಗ ಭತ್ಯೆ ಒದಗಿಸುವ ಗುರಿ ಹೊಂದಿದೆ. ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಗೆ ಕಳೆದ 2024ರ ಜನವರಿ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ ಸೇರಿದಂತೆ ಇನ್ನಿತರೆ ಸಚಿವರು ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದರು.
ಯುವನಿಧಿ ಗ್ಯಾರಂಟಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ರೂ.3,000 ಹಾಗೂ ಡಿಪ್ಲೋಮಾ ವ್ಯಾಸಂಗ ಪೂರ್ಣಗೊಳಿಸಿದ ನಿರುದ್ಯೋಗಿಗಳಿಗೆ ಮಾಸಿಕ ರೂ.1,500 ನಿರುದ್ಯೋಗ ಭತ್ಯೆ ಸಿಗಲಿದೆ. ಪದವಿ ಹಾಗೂ ಡಿಪ್ಲೋಮಾ ವ್ಯಾಸಂಗ ಪೂರ್ಣಗೊಳಿಸಿ 180 ದಿನಗಳು ಆದನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.
ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ಹೋದರೆ ಈ ಯೋಜನೆಗೆ ಅರ್ಹರಿರುವುದಿಲ್ಲ. ಯುವನಿಧಿಗೆ ನೋಂದಾಯಿಸಿಕೊಂಡಿರುವ ಫಲಾನುಭವಿಗಳು ತಾವು ವ್ಯಾಸಂಗ ಮಾಡುತ್ತಿಲ್ಲ, ಸ್ವಯಂ ಉದ್ಯೋಗಿಯಲ್ಲ, ನಿರುದ್ಯೋಗಿ ಎಂದು ಪ್ರತಿ ತಿಂಗಳು ಸ್ವಯಂ ಘೋಷಣೆ ಸಲ್ಲಿಸಬೇಕು.
ಸಾಧಿಸುವ ಛಲ ಹೊಂದಿದ ಯುವಕರಿಗೆ ಮೂಲಭೂತ ವಸ್ತುಗಳನ್ನು ಖರೀದಿಸಲು ಹಣದ ಅವಶ್ಯಕತೆ ಇರುತ್ತದೆ. ಅಂತಹ ಯುವಸಮೂಹವು ರಾಜ್ಯ ಸರ್ಕಾರದಿಂದ ಸಿಗುವ ಹಣವನ್ನು ಯುವಕರು ನಿಗದಿತ ಕೆಲಸಗಳಿಗೆ ವ್ಯಯಿಸಿಕೊಂಡು ಸುಸ್ಥಿರ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
10.49 ಕೋಟಿ ಪಾವತಿ:
ಚಿತ್ರದುರ್ಗ ಜಿಲ್ಲೆಯಲ್ಲಿ 5,312 ಪದವೀಧರರು ಹಾಗೂ 103 ಡಿಪ್ಲೋಮಾ ಪದವೀಧರರು ಸೇರಿದಂತೆ ಒಟ್ಟು 5,415 ನಿರುದ್ಯೋಗಿಗಳು ಯುವನಿಧಿಯ ಸೌಲಭ್ಯ ಪಡೆದಿದ್ದಾರೆ.
2024ರ ಜನವರಿ ಮಾಹೆಯಿಂದ ಈವರೆಗೆ ರೂ.10.05 ಕೋಟಿಗಳನ್ನು ಯುವನಿಧಿ ಯೋಜನೆಯ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಪಾವತಿ ಮಾಡಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ಫಲಾನುಭವಿಗಳ ಅನಿಸಿಕೆ :
ಕುಮಾರ್ ಜೆ.ಬಿ., ಬಚ್ಚಬೋರನಹಟ್ಟಿ, ಚಿತ್ರದುರ್ಗ ತಾಲ್ಲೂಕು:
ನಾನು 2023-24 ರಲ್ಲಿ ಪದವಿಯಲ್ಲಿ ತೇರ್ಗಡೆಯಾಗಿದ್ದು, ಯುವನಿಧಿ ಯೋಜನೆಯಿಂದ ಬಂದ ಹಣವನ್ನು ನನ್ನ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲವಾಗಿದೆ. ಯೋಜನೆಯಲ್ಲಿ ಬಂದ ಹಣವನ್ನು ನಾನು ಸ್ಪರ್ಧಾತ್ಮಕ ಪರೀಕ್ಷೆಗಳ ಶುಲ್ಕ ಕಟ್ಟಲು, ಪುಸ್ತಕ ಖರೀದಿಸಲು ಉಪಯೋಗವಾಗಿದೆ. ಇದರ ಜೊತೆಗೆ ಕೋಚಿಂಗ್ ಪಡೆಯಲು ಕೂಡ ನೆರವಾಗಿದೆ. ಮುಂದಿನ ನನ್ನ ಭವಿಷ್ಯ ಉಜ್ವಲವಾಗಿ ರೂಪಿಸಿಕೊಳ್ಳಲು ಯುವನಿಧಿ ನೆರವಾಗುತ್ತಿದೆ.
ಸಂತೋಷ್ ಕೆ.ವಿ., ಈಶ್ವರಗೆರೆ, ಹಿರಿಯೂರು ತಾಲ್ಲೂಕು:
ನಾನು ಪದವಿ ತೇರ್ಗಡೆಯಾಗಿದ್ದು, ನನಗೆ ಯುವನಿಧಿ ಯೋಜನೆಯಿಂದ ಬಂದ ಹಣದಿಂದ ಎಫ್.ಡಿ.ಎ.ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ತೆಗೆದುಕೊಂಡಿದ್ದೇನೆ. ಹಾಗೆಯೇ ಮನೆಯಲ್ಲಿ ಬಳಸಲು ಒಂದು ಕಂಪ್ಯೂಟರ್ ಖರೀದಿಗೂ ಯೋಜನೆಯ ಹಣ ಉಪಯೋಗಿಸಿಕೊಂಡಿದ್ದು, ಓದಲು ಹಾಗೂ ಉದ್ಯೋಗ ಹುಡುಕಿಕೊಳ್ಳಲು ಕಂಪ್ಯೂಟರ್ ಬಳಸಿಕೊಳ್ಳುತ್ತಿದ್ದೇನೆ. ಈ ಯೋಜನೆಯಿಂದ ನನಗೆ ತುಂಬಾ ಸಹಾಯವಾಗಿದ್ದು, ಈ ಯೋಜನೆ ಹೀಗೆಯೇ ಮುಂದುವರೆಯಲಿ.
ಕಾವ್ಯಾಂಜಲಿ, ಚಳ್ಳಕೆರೆ ಪಟ್ಟಣ, ಚಳ್ಳಕೆರೆ ತಾಲ್ಲೂಕು :
ರಾಜ್ಯ ಸರ್ಕಾರದ ಐದನೇ ಗ್ಯಾರಂಟಿಯಾದ “ಯುವನಿಧಿ” ಯೋಜನೆಯು ಅನೇಕ ನಿರುದ್ಯೋಗಿ ಯುವಕ–ಯುವತಿಯರ ಪಾಲಿಗೆ ಮುಂದಿನ ದಿನಗಳಲ್ಲಿ ಜೀವನ ಕಟ್ಟಿಕೊಳ್ಳಲು ಇದೊಂದು ದಾರಿ ದೀಪದ ಯೋಜನೆಯಾಗಿದೆ. ಪ್ರತಿ ತಿಂಗಳು ರೂ.3000 ಪಡೆಯುತ್ತಿದ್ದೇನೆ. ಪದವಿ ತೇರ್ಗಡೆಯಾದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಹಾಕಲು ಶುಲ್ಕ ಪಾವತಿಸಲು ಪದೇ–ಪದೇ ತಂದೆ–ತಾಯಿ ಹತ್ತಿರ ಕೇಳುತ್ತಿದ್ದೆ. ಈಗ ಯುವನಿಧಿ ಯೋಜನೆಯಡಿ ಪ್ರತಿ ತಿಂಗಳು ಬರುವ ಸಹಾಯಧನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಹಾಕಲು, ಜೆರಾಕ್ಸ್ ಖರ್ಚು–ವೆಚ್ಚಗಳಿಗೆ ಹಾಗೂ ಇತ್ಯಾದಿಗಳಿಗೆ ಅನುಕೂಲವಾಗುತ್ತಿದೆ.