ಮೃತಪಟ್ಟ ಸಾರಿಗೆ ನೌಕರರ ಕುಟುಂಬದವರಿಗೆ ತಲಾ 1 ಕೋಟಿ ವಿತರಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ಕರ್ತವ್ಯದ ವೇಳೆ ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಾಳುಗಳ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.
ಅಪಘಾತದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡಿದ್ದ ಸಿಬ್ಬಂದಿಗಳ ಕುಟುಂಬಸ್ಥರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್ ಇವರುಗಳು
ಪರಿಹಾರದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಚೆಕ್ ವಿತರಿಸಿ ಮಾತನಾಡಿ ಸಾರಿಗೆ ನಿಮಗದ ನೌಕರರು ಸಿಬ್ಬಂದಿಗಳು ಹಗಲಿರುಳು ಕೆಲಸ ಮಾಡುವುದರಿಂದ ಸಾರಿಗೆ ಸಂಸ್ಥೆ ಉತ್ತಮ ಸ್ಥಿತಿಯಲ್ಲಿದೆ. ಮೃತ ನೌಕರರ ಕುಟುಂಬಗಳನ್ನು ನೋಡಿಕೊಳ್ಳುವುದು ನಿಗಮದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ, ನಾಲ್ಕು ನಿಗಮಗಳಲ್ಲಿ 1,000 ಸಿಬ್ಬಂದಿಗಳ ಕುಟುಂಬಸ್ಥರಿಗೆ ಅನುಕಂಪದ ಆಧಾರದ ಮೇಲೆ ಪರಿಹಾರ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದ ನೌಕರರು ಅಪಘಾತದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಾಂತ್ವನ ಹೇಳಿ, ನಿಗಮದ ವಿವಿಧ ಪರಿಹಾರ ಯೋಜನೆ ಅಡಿ ಸಿಬ್ಬಂದಿ ಹಾಗೂ ಸಿಬ್ಬಂದಿಗಳ ಅವಲಂಬಿತರಿಗೆ ಪರಿಹಾರ ಮೊತ್ತದ ಚೆಕ್‌ವಿತರಿಸಿದರು.

ಇದೇ ಪ್ರಪ್ರಥಮ ಬಾರಿಗೆ ನಿಗಮದ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಪಘಾತಕ್ಕೆ ಒಳಪಟ್ಟು, ಬಲಗಾಲಿನ ಮಂಡಿಯ ಕೆಳಗೆ ಕಾಲನ್ನು ಕಳೆದುಕೊಂಡ ಹಾಸನ ವಿಭಾಗ ಅರಕಲಗೂಡು ಘಟಕದ ಚಾಲಕ-ಕಂ- ನಿರ್ವಾಹಕ ಸುನಿಲ್ ಕುಮಾರ್ ಬಿ ಡಿ ಅವರಿಗೆ 25 ಲಕ್ಷ ಪರಿಹಾರ ವಿತರಿಸಲಾಯಿತು. ಅಲ್ಲದೆ, ಅವರಿಗೆ 2024ರ ಮಾರ್ಚ್ 25ರಿಂದ ಡಿಸೆಂಬರ್ 09ರವರೆಗೆ 08 ತಿಂಗಳು 14 ದಿನಗಳ ಅವಧಿಗೆ ಐಒಡಿ ನೀಡಲಾಗಿದೆ.

ಇಂದು ವಿತರಿಸಲಾಗಿರುವ ಪರಿಹಾರದ ಮೊತ್ತವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಮತ್ತು ಇತರೆ ಶುಭಕಾರ್ಯಗಳಿಗೆ ಸದುಪಯೋಗ ಮಾಡಿಕೊಳ್ಳಬೇಕು. ಬಡ್ಡಿ ವ್ಯಾಮೋಹಕ್ಕೆ ಒಳಗಾಗಿ ಪರಿಹಾರ ಧನವನ್ನು ಯಾರಿಗೂ ನೀಡಬಾರದು. ಹಣವಿದ್ದರೆ ಎಲ್ಲರೂ ನೆಂಟರೆ, ಆದರೆ ಸೂಕ್ತವಾದ ರೀತಿಯಲ್ಲಿ ಹಣ ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ಸೂಚ್ಯವಾಗಿ ಹೇಳಿದರು.

ಕಾರ್ಮಿಕರ ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಕೆಎಸ್‌ಆರ್‌ಟಿಸಿ ಆರೋಗ್ಯಯೋಜನೆಯನ್ನೂ ಕೂಡ ಜಾರಿಗೆ ತಂದಿದ್ದು, ರಾಜ್ಯಾದ್ಯಂತ 300ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಟ್ಟಿದೆ. ಈವರೆಗೂ 56,000ಕ್ಕೂ ಅಧಿಕ ಸಿಬ್ಬಂದಿ/ಅವಲಂಬಿತರು ಚಿಕಿತ್ಸೆ ಪಡೆದಿದ್ದಾರೆ. ಈವರೆಗೂ 24 ಮಂದಿ ನೌಕರರ ಕುಟುಂಬದವರಿಗೆ ತಲಾ 1 ಕೋಟಿ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ.

ಇಂದು, ಕರ್ತವ್ಯದಲ್ಲಿರುವಾಗ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಇಬ್ಬರು ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ಚೆಕ್ ನೀಡಲಾಗಿದ್ದು, ಈವರೆಗೂ 26 ಸಿಬ್ಬಂದಿಗಳ ಅವಲಂಬಿತರಿಗೆ ಒಟ್ಟಾರೆ ರೂ.26 ಕೋಟಿ ಪರಿಹಾರ ನೀಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

 

Share This Article
error: Content is protected !!
";