ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಮಹಿಳೆ ಕೇವಲ ಅಡುಗೆ ಮನೆಗೆ ಮಾತ್ರ ಮೀಸಲು ಎನ್ನುವುದು ಸರಿಯಲ್ಲ. ಮಹಿಳೆ ಅಬಲೆಯಲ್ಲ. ಎಲ್ಲಾ ರಂಗದಲ್ಲಿಯೂ ಸಬಲಳು ಎಂದು ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಗುತ್ತಿನಾಡು ವಲಯದ ಸೀಬಾರ ಕಾರ್ಯಕ್ಷೇತ್ರದಲ್ಲಿ ಸರಸ್ವತಿ ನೂತನ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಆರ್ಥಿಕ ಬೆಳವಣಿಗೆಗಾಗಿ ಹೇಮಾವತಿ ಅಮ್ಮನವರು ೧೯೯೩ ರಲ್ಲಿ ಜ್ಞಾನವಿಕಾಸ ಕೇಂದ್ರ ಆರಂಭಿಸಿದರು. ಪ್ರತಿ ತಿಂಗಳು ಮಹಿಳೆಯರಿಗೆ ಉತ್ತಮವಾದ ಮಾಹಿತಿ ನೀಡುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ದಿನೇಶ್ ಪೂಜಾರಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗ್ರಾಮೀಣ ಭಾಗದ ಮಹಿಳೆಯರನ್ನು ಸ್ವಾವಲಂಭಿಯನ್ನಾಗಿ ಮಾಡುವುದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಬ್ಯಾಂಕಿನ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆರವರು ಮಹಿಳೆಯರಿಗೆ ಸಾಲಗಳು ಸಿಗುವಂತ ವ್ಯವಸ್ಥೆ ಕಲ್ಪಿಸಿದ್ದಾರೆ. ನೂತನ ಜ್ಞಾನ ವಿಕಾಸ ಕೇಂದ್ರದ ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಯೋಜನಾಧಿಕಾರಿ ರವಿಚಂದ್ರ ಮಾತನಾಡುತ್ತ ಜ್ಞಾನವಿಕಾಸ ಹಾಗೂ ವಾತ್ಸಲ್ಯ ಕಾರ್ಯಕ್ರಮದ ಬಗ್ಗೆ ಜ್ಞಾನವಿಕಾಸ ಕೇಂದ್ರದ ಮಹಿಳೆಯರಲ್ಲಿ ಅರಿವು ಮೂಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ತಿಪ್ಪಮ್ಮ, ಸಾಕಮ್ಮ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶಿವಲೀಲಾ ಎಸ್.ಬಾಗೋಡಿ, ಪ್ರಮೋದಿನಿ, ಅಂಬಿಕಾ, ರೇಣುಕಾ, ಜ್ಞಾನವಿಕಾಸ ಕೇಂದ್ರದ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು.