Ad imageAd image

3 ಜಿಲ್ಲೆಗಳ 9 ದಾಳಿಂಬೆ ಕ್ಲಸ್ಟರ್ ಗೆ ಒಡೆಯ ಯಾರು? ರೈತರನ್ನು ದಾರಿ ತಪ್ಪಿಸುವ ಯೋಜನೆಯಾ ಇದು?

News Desk

3 ಜಿಲ್ಲೆಗಳ 9 ದಾಳಿಂಬೆ ಕ್ಲಸ್ಟರ್ ಗೆ ಒಡೆಯ ಯಾರು? ರೈತರನ್ನು ದಾರಿ ತಪ್ಪಿಸುವ ಯೋಜನೆಯಾ ಇದು?
ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸತತ ಬರಗಾಲಕ್ಕೆ ಮೈಯೊಡ್ಡಿ, ವಾರ್ಷಿಕ ಕೇವಲ 487 ಮಿ.ಮೀ ಮಳೆ ಬಿದ್ದು ಅಂತರ್ಜಲ ಮಟ್ಟ ಪಾತಾಳ ಕಂಡು ಕುಡಿಯುವ ನೀರಿಗೂ ಹಾಹಾಕಾರ ಕಾಣುವ ಬಯಲು ಸೀಮೆ ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಈಗ ರಾಜಯೋಗ. ಕಾರಣ ದಾಳಿಂಬೆ ಕ್ಲಸ್ಟರ್ ಮಂಜೂರಾಗಿದ್ದು ಅನುಷ್ಠಾನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಮೂರು ಜಿಲ್ಲೆಗಳ ರೈತರು ದಾಳಿಂಬೆ ಕ್ಲಸ್ಟರ್ ನಿಂದ ಏನೇನು ದೊರೆಯಲಿದೆ ಎಂದು ಆಸೆಗಣ್ಣಿನಿಂದ ಚಾತಕಪಕ್ಷಗಳಂತೆ ಕಾಯುತ್ತಿದ್ದಾರೆ.

ಆದರೆ ಇದುವರೆಗೂ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಒಂದೇ ಒಂದು ಆದೇಶವನ್ನು ದಾಳಿಂಬೆ ಕ್ಲಸ್ಟರ್ ಕುರಿತು ಹೊರಡಿಸಿಲ್ಲದಿರುವುದು ಸೋಜಿಗವಾಗಿದೆ.
ಚಿತ್ರದುರ್ಗ, ತುಮಕೂರು, ವಿಜಯನಗರ ಈ ಮೂರು ಜಿಲ್ಲೆಗಳ 9 ತಾಲೂಕು ಕೇಂದ್ರಗಳನ್ನು ಕೇಂದ್ರ ಸರ್ಕಾರ ದಾಳಿಂಬೆ ಕ್ಲಸ್ಟರ್ ಗೆ ಆಯ್ಕೆ ಮಾಡಿ ಶೇ.40 ರಷ್ಟು ಸಹಾಯ ಧನದೊಂದಿಗೆ ದಾಳಿಂಬೆ ಕ್ಲಸ್ಟರ್ ಅನುಷ್ಠಾನಕ್ಕೆ ಮುಂದಾಗಿದೆ ಎಂದು ಯೋಜನಾ ಅನುಷ್ಠಾನ ಸಂಸ್ಥೆ ಅಸೋಸಿಯೇಟೆಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್(ಎಐಸಿ) ಈಗಾಗಲೇ ಜಿಲ್ಲೆಗಳಲ್ಲಿ ಸಂಚರಿಸಿ ಮಾಧ್ಯಮ ಹೇಳಿಕೆ ನೀಡಿದೆ.

ಅಸೋಸಿಯೇಟೆಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್ ಎನ್ನುವ ಖಾಸಗಿ ಕಂಪನಿಯ ಕಚೇರಿ ಎಲ್ಲಿದೆ, ಯಾವ ಅಧಿಕಾರಿಗಳನ್ನ ಭೇಟಿ ಮಾಡಬೇಕು, ದಾಳಿಂಬೆ ಬೆಳೆಯುವಂತ ರೈತರಿಗೆ ಯಾವ ಯಾವ ಐಟಂಗಳಿಗೆ ಎಷ್ಟು ಸಹಾಯ ಧನ ನೀಡಲಾಗುತ್ತದೆ, ಹನಿ ನೀರಾವರಿಗೆ ಎಷ್ಟು, ಗಿಡಗಳಿಗೆ ಎಷ್ಟು, ರೋಗಗ್ರಸ್ಥ ಹಳೆ ದಾಳಿಂಬೆ ಗಿಡಗಳನ್ನು ಪುನಶ್ಚೇತನ ಮಾಡಿದರೆ ಎಷ್ಟು ಸಹಾಯ ಧನ ದೊರೆಯಲಿದೆ ಎನ್ನುವ ಮಾಹಿತಿ ಸೇರಿದಂತೆ ದಾಳಿಂಬೆ ಕ್ಲಸ್ಟರ್ ನ ಸಮಗ್ರವಾದ ಮಾಹಿತಿಯನ್ನು ಇದುವರೆಗೂ ಯಾರು ನೀಡಿಲ್ಲ.

ಅದು ಹೋಗಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ದಾಳಿಂಬೆ ಕ್ಲಸ್ಟರ್ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ತಮ್ಮ ಹೆಸರೇಳಲು ಇಚ್ಚಿಸದ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಚಂದ್ರವಳ್ಳಿ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಅಸೋಸಿಯೇಟೆಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್ ಕಂಪನಿಯವರು ಕೇವಲ ಪ್ರಚಾರ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಯೋಜನೆ ರೂಪಿಸುವಾಗ ಕನಿಷ್ಠ ಒಂದು ಸರ್ಕಾರಿ ಆದೇಶ ಬೇಡವೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದುವರೆಗೂ ಯಾವುದೇ ಆದೇಶವನ್ನು ದಾಳಿಂಬೆ ಕ್ಲಸ್ಟರ್ ಕುರಿತು ಹೊರಡಿಸಿಲ್ಲ. ದಾಳಿಂಬೆ ಕ್ಲಸ್ಟರ್ ಕುರಿತು ಪ್ರತಿನಿತ್ಯ ನೂರಾರು ದೂರವಾಣಿ ಕರೆಗಳನ್ನು ರೈತರು ಮಾಡುತ್ತಿದ್ದಾರೆ. ನಾವು ಏನು ಹೇಳಬೇಕೆಂದು ತಿಳಿಯುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ದಾಳಿಂಬೆ ಕ್ಲಸ್ಟರ್ ಹೊರತಾಗಿಯೂ ರಾಜ್ಯದಲ್ಲಿಯೇ ಕೃಷಿ ಮತ್ತು ತೋಟಗಾರಿಕೆಯಲ್ಲಿ ವೈಶಿಷ್ಟತೆ ಹೊಂದಿರುವ ಈ ಮೂರು ಜಿಲ್ಲೆಗಳ ರೈತರು ಸದಾ ವೈಜ್ಞಾನಿಕ ದೃಷ್ಠಿಕೋನ, ಸ್ಪರ್ಧಾತ್ಮಕ ಮನೋಭಾವದಿಂದ ದಾಳಿಂಬೆ ಹಣ್ಣುಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ.

ಇಲ್ಲಿನ ಮಣ್ಣು, ನೀರು, ಹವಾಗುಣ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅತ್ಯಂತ ಯೋಗ್ಯ ಮತ್ತು ಫಲವತ್ತತೆಯಿಂದ ಕೂಡಿರುವುದರಿಂದ ಉತ್ತಮ ಗುಣಮಟ್ಟದ ವಿಶ್ವ ದರ್ಜೆಯ ರಸಭರಿತ, ಹೊಳಪಾದ ಕಡುಗೆಂಪು ಬಣ್ಣದ ಆಕರ್ಷಕ ಮೃದು ಬೀಜಗಳಿಂದ ಕೂಡಿದ ರಸಭರಿತ ದಾಳಿಂಬೆ ಹಣ್ಣುಗಳನ್ನು ಈ ಭಾಗದ ರೈತರು ಹೆಚ್ಚು ಉತ್ಪಾದನೆ ಮಾಡಿ ರಪ್ತು ಕೂಡ ಮಾಡುತ್ತಿದ್ದಾರೆ.

ಹೆಚ್ಚು ನೀರು ಕೇಳದ ಹಣ್ಣಿನ ಗಿಡ, ಮರಗಳನ್ನು ರೈತರು ಆಧುನಿಕ ತಂತ್ರಜ್ಞಾನದೊಂದಿಗೆ ಸಮಗ್ರ ಕೃಷಿ ಪದ್ದತಿಯಲ್ಲಿ ಯಂತ್ರೋಪಕರಣಗಳನ್ನು ಬಳಸಿ, ಹನಿ ನೀರಾವರಿ ಪದ್ಧತಿಯಲ್ಲಿ ದಾಳಿಂಬೆ ಮತ್ತಿತರ ಹಣ್ಣಿನ ತೋಟ ಮಾಡಿ ಈಗಾಗಲೇ ಯಶಸ್ವಿ ಕಂಡಿದ್ದಾರೆ.
ಕೃಷಿ ಮತ್ತು ತೋಟಗಾರಿಕೆ ಬೇಸಾಯದಲ್ಲಿ ಹತ್ತಾರು ಸಮಸ್ಯೆಗಳನ್ನು ಉಂಡು ಹೊದ್ದು ಮಲಗುತ್ತಿರುವ ರೈತರ ಜಂಘಾಬಲ ಉದುಗಿಲ್ಲ, ಸತತ ಬರಗಾಲಕ್ಕೆ ತುತ್ತಾಗಿ ಜರ್ಜರಿತರಾಗದೆ ಕೃಷಿಗೆ ಮನ್ನಣೆ ನೀಡಿ ಆದಮ್ಯ ಉತ್ಸಾಹದಿಂದ ಲಾಭ ನಷ್ಟಗಳ ಲೆಕ್ಕಾಚಾರ ಮಾಡದೆ ಸದಾ ವೈಜ್ಞಾನಿಕ ದೃಷ್ಠಿಕೋನದಿಂದ ದಾಳಿಂಬೆ ಕೃಷಿಯಲ್ಲಿ ಲಾಭ ಕಂಡು ಆರ್ಥಿಕವಾಗಿ ಸದೃಢರಾಗುವ ಈ ಭಾಗದ ರೈತರಿಗೆ ಲೆಕ್ಕವಿಲ್ಲ.
ದಾಳಿಂಬೆ ಕ್ಲಸ್ಟರ್ ಜಾರಿ ಮಾಡಲು ಉದ್ದೇಶಿಸಿರುವುದರಿಂದ ಒಂದಿಷ್ಟು ಮೆರಗು ದೊರೆಯಲಿದೆ. ದಾಳಿಂಬೆ ಕ್ಲಸ್ಟರ್ ಸಹಾಯ ಧನ, ರೈತರ ಪರಿಶ್ರಮದಿಂದಾಗಿ ಧೂಳಿನಿದ್ದೆದ್ದು ಬರುವ ಕಾಲ ಸಮೀಪಿತ್ತಿದೆ.

ಎಲ್ಲಿ ದಾಳಿಂಬೆ ಬೆಳೆಯಬಹುದು-
11 ಡಿಗ್ರಿ ಸೆಂಟಿಗ್ರೇಡ್ ಗಿಂತ ಮೇಲ್ಪಟ್ಟ ಯಾವುದೇ ಪ್ರದೇಶದಲ್ಲಿ ಹಾಗೂ ಸಮಶೀತೋಷ್ಣವಲಯದಲ್ಲಿ ದಾಳಿಂಬೆ ಹಣ್ಣು ಬೆಳೆಯಬಹುದಾಗಿದೆ.
ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲೆಗಳ ನೀರು ಮತ್ತು ಗಾಳಿಯ ಹವಾಗುಣ ದಾಳಿಂಬೆ ಬೆಳೆಯಲು ಹೇಳಿ ಮಾಡಿಸಿದಂತಿದೆ. ಸದಾ 25 ರಿಂದ ಮೇಲ್ಪಟ್ಟ ಉಷ್ಣಾಂಶ ಹೊಂದಿರುವ ಈ ಪ್ರದೇಶ ತೋಟಗಾರಿಕಾ ಹಣ್ಣಿನ ಉತ್ಪಾದನೆಯಲ್ಲಿ ರಾಜ್ಯದಲ್ಲೆ ಹೆಸರು ಮಾಡಿ ರೈತರು ತೋಟಗಾರಿಕೆಯಲ್ಲಿ ಮೌನ ಕ್ರಾಂತಿ ಮಾಡಲು ದಾಳಿಂಬೆ ಕ್ಲಸ್ಟರ್ ಅನುಕೂಲವಾಗಲಿದೆ.

ಯಾವ ಜಿಲ್ಲೆಗಳು-
ರಾಜ್ಯದ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳು, ತುಮಕೂರು ಜಿಲ್ಲೆಯ ಶಿರಾ, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲೂಕುಗಳು ದಾಳಿಂಬೆ ಕ್ಲಸ್ಟರ್ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಿವೆ.

“ದಾಳಿಂಬೆ ಬೆಳೆಯ ಸಮಗ್ರ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ 53 ಕ್ಲಸ್ಟರ್‌ಗಳನ್ನು ಗುರುತಿಸಿದ್ದು, ರಾಜ್ಯದ ಚಿತ್ರದುರ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಿಂದ 9 ತಾಲೂಕುಗಳನ್ನು ಗುರುತಿಸಿ ದಾಳಿಂಬೆ ಕ್ಲಸ್ಟರ್ ಯೋಜನೆ ವ್ಯಾಪ್ತಿಗೆ ಆಯ್ಕೆ ಮಾಡಲಾಗಿದೆ”. ಡಾ.ಟಿ.ಬಿ.ಜಯಚಂದ್ರ, ಶಿರಾ ಶಾಸಕರು ಹಾಗೂ ದೆಹಲಿ ವಿಶೇಷ ಪ್ರತಿನಿಧಿ.

“ದಾಳಿಂಬೆ ಬೆಳೆಯಲು ಮುಂದಿನ ಐದು ವರ್ಷಗಳಲ್ಲಿ ರೈತರಿಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶ. ಕಪ್ಪುಚುಕ್ಕೆ ಹಾಗೂ ಸೀಳು ರೋಗ ಸೇರಿದಂತೆ ದಾಳಿಂಬೆ ತೋಟಕ್ಕೆ ತಗುಲುವ ಎಲ್ಲಾ ರೀತಿಯ ರೋಗಗಳನ್ನು ನಿಯಂತ್ರಿಸಲು ತಜ್ಞರ ಅನುಭವವನ್ನು ರೈತರಿಗೆ ಒದಗಿಸಿಕೊಡಲಾಗುವುದು. ಹವಾಮಾನಕ್ಕೆ ಅನುಗುಣವಾಗಿ ದಾಳಿಂಬೆ ಬೆಳೆಗಾರರಿಗೆ ಅಧಿಕ ಆದಾಯ ಬರುವಂತೆ ಮಾಡುವುದು, ಮಾರುಕಟ್ಟೆ ಒದಗಿಸುವುದು ಈ ಯೋಜನೆಯ ಮುಖ್ಯಗುರಿ. ಈ ಯೋಜನೆಗೆ ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ಕ್ಯಾಪ್ಪೆಕ್ (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ) ಹಾಗೂ ಎಐಸಿ ತ್ರಿಪಕ್ಷೀಯ ಸಹಯೋಗದಲ್ಲಿ ಚಾಲನೆ ನೀಡಲಾಗಿದೆ”.


ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ‘ಸುರಕ್ಷಾ’ ಆಪ್ ಮೂಲಕ ಈಗಾಗಲೇ ದಾಳಿಂಬೆ ಬೆಳೆಯುತ್ತಿರುವ ಹಾಗೂ ಹೊಸದಾಗಿ ಬೆಳೆಯುವ ರೈತರ ನೋಂದಣಿ ಮಾಡಿಕೊಳ್ಳುವುದು. ರೈತರಿಗೆ ದಾಳಿಂಬೆ ನಾಟಿಯಿಂದ ಮಾರುಕಟ್ಟೆವರೆಗೆ ತಲುಪಿಸಲು ಎಲ್ಲ ಸೌಕರ್ಯ ಒದಗಿಸುವ ಕೆಲಸ ಸಂಸ್ಥೆ ಮಾಡಲಿದೆ. ಮಣ್ಣು ಹಾಗೂ ನೀರಿನ ಪರೀಕ್ಷೆ, ರೋಗ ರಹಿತ ದಾಳಿಂಬೆ ಸಸಿ ನೀಡುವಿಕೆ, ರಸಗೊಬ್ಬರ, ಔಷಧಿ, ಹನಿ ನೀರಾವರಿ, ಟ್ರಾಕ್ಟರ್, ಟಿಲ್ಲರ್, ಸ್ಪ್ರೇಯರ್ ಸೇರಿದಂತೆ ಅಗತ್ಯ ಎಲ್ಲ ಆಧುನಿಕ ಯಂತ್ರೋಪಕರಣಗಳ ವಿತರಣೆ, ರೈತರಿಗೆ ಶೇ.40ರಷ್ಟು ಸಬ್ಸಿಡಿ ದರದಲ್ಲಿ ಸಮಗ್ರ ಸೌಲಭ್ಯದ ಬೆಂಬಲ ಒದಗಿಸಲಾಗುತ್ತದೆ. ದಾಳಿಂಬೆ ಹಣ್ಣಿಗೆ ಸೂಕ್ತ ಬೆಲೆ ನೀಡಿ ಗ್ರಾಹಕರಿಗೆ ಮಾರುಕಟ್ಟೆ ತಲುಪಿಸುವ ಉದ್ದೇಶವನ್ನು ಎಐಸಿ ಹೊಂದಿದೆ”. ಮನೋಜ್ ಕುಶಾಲಪ್ಪ, ಸಮಾಲೋಚಕ, ಎಐಸಿ.

- Advertisement -  - Advertisement - 
Share This Article
error: Content is protected !!
";