ಚಂದ್ರವಳ್ಳಿ ನ್ಯೂಸ್, ಭದ್ರಾವತಿ :
ರಾಜ್ಯದ ೩೦ ನದಿಗಳ ಪೈಕಿ ೧೭ ನದಿಗಳು ಅತ್ಯಂತ ಕಲುಷಿತಗೊಂಡು ಅತೀ ಹೆಚ್ಚು ಮಾಲಿನ್ಯವಾಗಿರುವ ನದಿಗಳ ಪೈಕಿ ಭದ್ರಾ ನದಿಯೂ ಒಂದಾಗಿದೆ. ಆದ್ದರಿಂದ ಜಲಜಾಗೃತಿ ಮತ್ತು ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ತಜ್ಞ ಪ್ರೊ. ಬಿ ಎಂ. ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ವರ್ಷ ನಿರ್ಮಲ ತುಂಗಾ ಅಭಿಯಾನ ಆರಂಭಿಸಿ ಗಾಜನೂರಿನಿಂದ ಪಾದಯಾತ್ರೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಸರಕಾರದ ಕಣ್ಣು ತೆರೆಸಿದ್ದೇವೆ. ತುಂಗಾ ನದಿಯ ತೀರದ ಬಹಳಷ್ಟು ಭಾಗದಲ್ಲಿ ಮಾಲಿನ್ಯ ತಡೆಯುವ ಅಭಿವೃದ್ದಿ ಯೋಜನೆಯ ಯಶಸ್ಸು ಕಂಡಿದ್ದೇವೆ. ಈವರ್ಷ ನಿರ್ಮಲ ಭದ್ರಾ ಅಭಿಯಾನವನ್ನು ಕೈಗೆತ್ತಿಕೊಂಡಿದ್ದೇವೆ.
ಕುಡಿಯಲು ಯೋಗ್ಯವಲ್ಲದ ನದಿಗಳು:
ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ೨೦೧೯ ರಿಂದ ೨೦೨೧ ರವರೆಗೆ ದೇಶದಲ್ಲಿ ೬೧೭ ನದಿಗಳ ಅಧ್ಯಯನ ಮಾಡಿದೆ. ರಾಜ್ಯದಲ್ಲಿ ೩೦ ನದಿಗಳ ಅಧ್ಯಯನ ನಡೆಸಿ ಅದರಲ್ಲಿ ೧೭ ನದಿಗಳು ಕಲುಷಿತವಾಗಿರುವ ಪೈಕಿ ತುಂಗಾ, ಭದ್ರಾ ಹಾಗೂ ತುಂಗಭದ್ರಾ ಮೂರು ನದಿಗಳು ಅತೀ ಹೆಚ್ಚು ಮಾಲಿನ್ಯ ಹೊಂದಿದ ನದಿಗಳೆಂದು ಹೇಳಿದೆ.
ಅಂಕಿ ಅಂಶಗಳ ಪ್ರಕಾರ ನೀರಿನಲ್ಲಿ ಬಿಓಡಿ ೩ ಎಂಜಿ ಗಳಿದ್ದರೆ ಶುದ್ದ ಕುಡಿಯುವ ನೀರೆಂದು ಹೇಳಲಾಗುತ್ತದೆ. ಆದರೆ ಭದ್ರಾ ನದಿಯು ನಗರದ ಕಾರ್ಖಾನೆಗಳ ಮಾಲಿನ್ಯ ಸ್ಥಗಿತವಾಗಿದ್ದರೂ ನಗರ ಪ್ರದೇಶದ ಕೊಳಕಿನಿಂದಾಗಿ ಹೊಳೆಹೊನ್ನೂರು ವರೆಗೆ ಬಿಓಡಿ ೭ ಎಂಜಿ ಮಾಲಿನ್ಯವಾಗಿದೆ.
ತುಂಗಾ ನದಿಯು ಶಿವಮೊಗ್ಗದ ವರೆಗೆ ಬಿಓಡಿ ೬ ಎಂಜಿ, ತುಂಗಭದ್ರಾ ನದಿಯು ಕೂಡ್ಲಿಯಿಂದ ಮೈಲಾರದ ವರೆಗೆ ಬಿಓಡಿ ೬.೨ ಎಂಜಿ ಗಳಾಗಿದೆ. ಈ ಕಲುಷಿತ ನೀರು ಸೇವಿಸಿದರೆ ಚರ್ಮ ರೋಗ ಕರಳು ರೋಗ, ಜಾಂಡಿಸ್ ಮುಂತಾದ ರೋಗಳಿಗೆ ತುತ್ತಾಗುತ್ತೇವೆ. ಇದರಿಂದಾಗಿ ಜನರಲ್ಲಿ ಜಾಗೃತಿ ಅರಿವು ಮೂಡಿಸಲು ಎಲ್ಲರ ಸಹಕಾರ ಬೇಕಾಗಿದೆ ಎಂದರು.
ನದಿಗಳಿಗೆ ನಗರ ಪ್ರದೇಶದ ತ್ಯಾಜ್ಯ ಹರಿಯ ಬಿಡಲಾಗುತ್ತಿದೆ:
ರಾಷ್ಟ್ರೀಯ ಮಾಲಿನ್ಯ ಮಂಡಳಿಯಡಿ ಸೇವೆ ಸಲ್ಲಿಸಿದ ತಜ್ಞರು ಹಾಗೂ ನಿವೃತ್ತ ಪಾಂಶುಪಾಲ ಶ್ರೀಪತಿ ಈಗಾಗಲೆ ಅಧ್ಯನ ಮಾಡಿ ಮಂಡಳಿಗೆ ವರದಿ ನೀಡಿದ್ದೇವೆ. ಕೈಗಾರಿಕೆಗಳಿಗಿಂತ ನಗರದ ಕೊಳಕಿನಿಂದಾಗಿ ನದಿ ಹಾಳಾಗಿದೆ. ನಗರ ವ್ಯಾಪ್ತಿಯ ಸೀಗೇಬಾಗಿ ಮತ್ತು ಜಟ್‌ಪಟ್ ನಗರದಲ್ಲಿ ಶುದ್ದೀಕರಣ ಎಸ್‌ಟಿಪಿ ಘಟಕಗಳು ಸ್ಥಗಿತಗೊಂಡಿದೆ.
ಉಜ್ಜನಿಪುರದಲ್ಲಿ ಎಸ್ಪಿಆರ್ ಕೆಲಸ ನಡೆಯುತ್ತಿದೆಯಾದರೂ ಸಾಮರ್ಥ್ಯ ಕಡಿಮೆ. ಮುಖ್ಯ ಬಸ್ ನಿಲ್ದಾಣದ ಬಳಿಯ ವೆಟ್ ವೆಲ್ ಕಾರ್ಯಾರಂಭ ಮಾಡಿಲ್ಲ. ಇದರಿಂದಾಗಿ ನದಿಗಳಿಗೆ ತ್ಯಾಜ್ಯಗಳಿಂದ ಮಾಲಿನ್ಯ ಹೊಂದಿದೆ ಎಂದು ವಿವರಿಸಿದರು.