ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-59
ನನ್ನಪ್ಪ ಅಕ್ಷರಗಳಾಚೆ, ಬದುಕು ಸವೆಸಿಕೊಂಡಿದ್ದವ, ಬಲು ಗಟ್ಟಿಗ. ಬಾಲ್ಯದಲ್ಲಿಯೇ ಆತನ ಹೆತ್ತವರು, ಬಡತನದಿಂದ ಹೊರಬರದೇ, ಮೆದುಗಿನಕೆರೆ ಗೌಡನ ಮನೆಯಲ್ಲಿ, ಬರೀ ಮುದ್ದೆಗಾಗಿ ಯೌವ್ವನಾವಸ್ತೆವರೆಗೂ ಸಂಬಳಕ್ಕಿಟ್ಟಿದ್ದರಂತೆ. ಇದನ್ನು ಅನೇಕ ಸಂದರ್ಭಗಳಲ್ಲಿ ಆತನೇ ಹೇಳಿದ್ದುಂಟು.
ನಾವುಗಳೇನಾದ್ರೂ ತಪ್ಪು ಮಾಡಿದಾಗ, ಕಂಡೋರ ಮನೆಯಲ್ಲಿ ಸಂಬಳಕ್ಕೆ ಇಡೋಣ ಅಂದ್ರೆ ಕೇಳಲಿಲ್ಲ ಇವ್ಳು, ಅಂತ ನನ್ನ ಅವ್ವನನ್ನೇ ಮೊದಲುಸ್ತಿದ್ರು. ಒರಟು ಜಾತಿಯಿದು, ಇನ್ನೊಬ್ರು ಮನೆಲೀ ಜೀತಕ್ಕೆ ಬಿದ್ರೆನೇ, ಬುದ್ಧಿ ಬರೋದು ಅನ್ತಿದ್ದ ಅಪ್ಪ, ಶಾಲೆಯ ಹೆಸರೆತ್ತುತ್ತಿರಲಿಲ್ಲ, ಆತನಿಗೆ ಅಷ್ಟಾಗಿ ಶಾಲೆಯ ಪರಿಚಯವೂ ಇರಲಿಲ್ಲ.
ನನಗೆ ನನ್ನವ್ವನೇ ಅಪ್ಪ, ಅಪ್ಪನೇ ಅವ್ವ, ಈಗಲೂ ಕಾಲ ಮಿಂಚಿಲ್ಲ, ಸಂಬಳಕ್ಕಿಡೋಣ, ನಾಕ್ಕಾಸು ದುಡ್ಡು ಸಿಗುತ್ತೆ ಅಂತ ಗೊಣಗುತ್ತಿದ್ದ ಅಪ್ಪನಿಗೆ, ಅವ್ವ ಒಪ್ಪದೇ ಇದ್ದಾಗ, ಮಕ್ಕಳೆದುರಿಗೆನೇ ಒದೆಗಳು ಬಿದ್ದಿವೆ, ಆತ ಒದ್ದು ಸಿಟ್ಟಾಗಿ ಹೋದ ಮೇಲೆ ಅಳುತ್ತಲೇ ಅವ್ವ, ಆ ಸಿಟ್ಟನೆಲ್ಲ ನಮ್ಮ ಮೇಲೆ ತೀರಸ್ಕೊಂಡು ಒದೆಯುತ್ತಿದ್ದ ಒದೆಗಳೇ, ಇಂದಿಗೆ ನಾನೇನಾದರೂ ಕಲಿತಿದೀನಿ ಅಂದ್ರೇ, ಅದು ಅವ್ವನ ಅಕ್ಷರಗಳುಣಿಸಿದ ಏಟುಗಳೇ, ನನ್ನ ಸಾಧನೆಯ ಮೆಟ್ಟಿಲುಗಳು.
ನಮ್ಮನ್ನೆಲ್ಲಾ ಕಟ್ಕೊಂಡು, ಹಳ್ಳಿ ಬಿಟ್ಟು ಪೇಟೆಗೆ ಬಂದಾಗ, ನಾನು ಮೂರು ತಿಂಗಳ ಕೂಸು ಅಂತ, ನನ್ನವ್ವ ಅನೇಕ ಬಾರಿ ಹೇಳಿದ್ದುಂಟು. ಗುಲಾಮಗಿರಿಯ ಪದ್ಧತಿ ಧಿಕ್ಕರಿಸಿ, ಗಂಡನ ಮನೆಯ ಒಂದಂಗುಲ ಜಾಗವನ್ನು ಕೇಳದೆ, ರಸ್ತೆ ಮಾಚಿಕೆರೆ ತೊರೆದು ದುರ್ಗಕ್ಕೆ ಬಂದು, ಬದುಕು ಸಾಗಿಸಿದ್ದು ನನ್ನವನೇ.ನಾಲ್ಕು ಜನ ಗಂಡು ಮಕ್ಕಳಲ್ಲಿ, ದೊಡ್ಡವ ಹೆತ್ತವರ ಎದೆ ಎತ್ತರದಲ್ಲಿದ್ದವ, ಎಲ್ಲರಿಗಿಂತ ಕಿರಿಯವ ಇನ್ನೂ ಹುಟ್ಟಿರಲಿಲ್ಲ, ನನಗಿಂತ ಚಿಕ್ಕವನನ್ನ ಶಾಲೆಗೆ ಕಳಿಸಿದ್ರೂ ಅವನು ಹೋಗಲಿಲ್ಲ, ಕೃಷಿ ಮಾರುಕಟ್ಟೆಯ, ಅಂಗಡಿಯೊಂದರಲ್ಲಿ, ಕಸ ಗುಡಿಸೋಕೆ ಅವನನ್ನ ತಳಗಾಳಿಗೆ ಇಟ್ಟಿದ್ರು. ಓದಿಸುವ ನಿರೀಕ್ಷೆ ಇಟ್ಟಿದ್ದ ನನ್ನವ್ವ, ನನ್ನನ್ನ ಶಾಲೆಗೆ ಕಳಿಸಬೇಕು ಅಂತ.
ನನ್ನಪ್ಪ ಯಾರದಾದ್ರೂ ಮನೆಯಲ್ಲಿ ಸಂಬಳಕ್ಕಿಟ್ಟು ದುಡ್ಡಿಸ್ಕೊಬೇಕು ಅಂತ. ಕೊನೆಗೂ ಮೇಲುಗೈ ಸಾಧಿಸಿದ್ದು ಅವ್ವನೇ, ತಾನು ಹತ್ತಿ ಜಿನ್ನಿಗೆ ಹೋಗಿ, ನನ್ನನ್ನು ಶಾಲೆಗೆ ಕಳಿಸಿದ್ದು ಆ ನನ್ನವ್ವನೇ.ಸಂಬಳಕ್ಕಿಡಬೇಕು ಅನ್ನುತ್ತಿದ್ದ ಅಪ್ಪನಿಗಿಂತ, ಶಾಲೆಗೇ ಕಳಸ್ಬೇಕು ಅಂತಿದ್ದ ನನ್ನವ್ವನೇ ನನ್ನ ಸರ್ವಸ್ವ.
ಕಡು ಬಡತನದ ಕುಟುಂಬ,ಅನುಭವಿಸಿದ್ದನ್ನ ಬರ್ಕೊಳ್ಳೋಕೆ ಖುಷಿ ಅನ್ಸುತ್ತೆ. ಇಂದಿನ ರಾಯಣ್ಣನ ವೃತ್ತದ ಬಳಿಯ, ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯ ಭಾಗವೇ, ಆಗ ದುರ್ಗದ ಸಂತೆ ಮೈದಾನ ಸ್ಥಳ, ಅಲ್ಲಿನ ಹಿಂಬದಿಯ ಒಂದು ಜೋಪಡಿಯಲ್ಲಿ ನಮ್ಮೆಲ್ಲರ ವಾಸ.
ನಂತರದಲ್ಲಿ, ನೆಹರುನಗರವಲ್ಲದ ದಿನಗಳಲ್ಲಿ, ಬರಗೇರಿ ಕೆರೆ ಕೆಳ ಭಾಗ ದೊಡ್ಡ ಮಾವಿನ ತೋಪು, ಅಗಸನಕಲ್ಲು ಮುಸ್ಲಿಮರ ಹೊಲಗಳು, ಆ ದಿನಗಳಲ್ಲಿ ಅಂದಿನ ನಗರಸಭೆ ಸದಸ್ಯರಾಗಿದ್ದ ಮಜಿದ್ ಸಾಬ್ ರವರಿಂದ 75 ರುಪಾಯಿಗೆ ಕೊಂಡ,18×30 ರ ಅಳತೆಯ ನಿವೇಶನವೇ ನಮ್ಮ ಅರಮನೆ.
ನೆರಿಕೆಯ ಗೋಡೆ, ಬಾದೆ ಹುಲ್ಲಿನ ಬೆಚ್ಚಗಿನ ಮನೆ, ಹರಿದ ಪೈಜಾಮಗಳಲ್ಲಿ ಹಳೆ ಬಟ್ಟೆ ತುರುಕಿದ ದಿಂಬುಗಳು, ಹಾಸಿ ನಮ್ಮನೆಲ್ಲ ಮಲಗಿಸಿ, ಉದ್ದನೆಯ ಕುರಿ ಕಂಬಳಿಯನ್ನು ಹೊದಿಸಿ, ಜೋಗುಳ ಗುನುಗುತ್ತಿದ್ದ ಅವ್ವನ ದನಿಯನ್ನ, ಆಲಿಸುತ್ತಲೇ ನಿದ್ರೆಗೆ ಜಾರುತ್ತಿದ್ದ ದಿನಗಳು, ಒಂದು ಚಾಪೆ, ಒಂದು ಕಂಬಳಿಯಲ್ಲಿ, ಅಣ್ಣ ತಮ್ಮ ಅಕ್ಕ ತಂಗಿಯರ ನಿದ್ದೆಯ ಉಸಿರಾಟ, ಒಬ್ಬರಿಗೊಬ್ಬರು ಬೆನ್ನು ಕೊಟ್ಟು ಮಲಗುತ್ತಿದ್ದ ಆ ಸುಖ ನಿದ್ದೆ,ನನ್ನ ಪಾಲಿನ ದೈವನಿದ್ದೆ,ನನ್ನ ಜೀವಿತಾವಧಿಯಲ್ಲಿ ಎಂದಿಗೂ,ಎಲ್ಲಿಯೂ, ಸಿಗದಂತಹ ಮಹಾನಿದ್ದೆ. ಅವ್ವನ ದೊಡ್ಡ ತಮ್ಮ ಸೂರಮಾವ,ಗಾರೆ ಕೆಲಸ ಮಾಡುತ್ತಿದ್ದವ. ದಾವಣಗೆರೆ ರಸ್ತೆಯಲ್ಲಿನ ಯೂನಿಯನ್ ಚಿತ್ರಮಂದಿರದ ಕಟ್ಟಡ ಕಟ್ಟುವಾಗ, ಮೇಲಿಂದ ಬಿದ್ದು ತನ್ನೆರಡು ಕಣ್ಗಳನ್ನ ಕಳ್ಕೊಂಡ.
ಸೂರಮಾವನಿಗೆ ನನ್ನಪ್ಪನ ತಮ್ಮನ ಮಗಳನ್ನೇ ಕೊಟ್ಟು ಮದುವೆ ಮಾಡಿದ್ರು. ಸಣ್ಣಪ್ಪನ ಮಗಳು ನನಗೂ ಅಕ್ಕನೇ.ಈ ಘಟನೆಯಾದ ನಂತರ,ತವರಿಗೆ ಹೋದವಳು ಮತ್ತೆ ತಿರುಗಿ ಬರಲೇ ಇಲ್ಲ.ಅವ್ವನ ಅವ್ವ,ಓಬಜ್ಜಿಯೇ ಮತ್ತೆ ಮಗುವಂತೆ ಮಾವನನ್ನ ಆರೈಕೆ ಮಾಡಿದ್ದು.ನಾನು ಆ ದಿನಗಳಲ್ಲಿ ತುಂಬಾ ಸಣ್ಣವ. ಆತನ ಸಂಕಟವನ್ನ, ತುಂಟಾಟಿಕೆಯಲ್ಲಿ ಕಂಡು ಖುಷಿ ಪಡುತ್ತಿದ್ದೆ.ದೇವರು.
ಇಂತಹ ಸ್ಥಿತಿಯನ್ನ ಯಾರಿಗೂ ಕೊಡಬಾರದು ಅಂತ, ಇತ್ತೀಚೆಗೆ ಎಷ್ಟೋ ಸಾರಿ ನನಗನ್ನಿಸಿದೆ. ಹಾಗೇ ಕಾಡಿದೆ, ಆ ಘಟನೆಗಳು ನನ್ನಾವರಿಸಿಕೊಂಡಾಗ, ಒಬ್ಬನೇ ಒಮ್ಮೊಮ್ಮೆ ಭಾವುಕನಾಗ್ತಿನಿ. ಆತ ಹಸಿವಾದಾಗ ಅವ್ವಾ ಅಂತ ಕೂಗ್ತಿದ್ದ, ಬಹಿರ್ದೆಸೆಗೆ ಹೋಗಬೇಕು ಅಂದಾಗ್ಲೂ ಕೂಗ್ತಿದ್ದ, ಎಲ್ಲದಕ್ಕೂ ಅವ್ವನ ಅವ್ವ ಓಬಜ್ಜಿಯೇ. ಒಮ್ಮೊಮ್ಮೆ ನಾನೂ ಸಹ ಮಾವನಿಗೆ ಜೊತೆಯಾಗುತ್ತಿದ್ದೆ.
ಕೈ ಹಿಡಕೊಂಡು, ಚೊಂಬು ತಗೊಂಡು ಕರ್ಕೊಂಡು ಹೋಗ್ತಿದ್ದೆ. ಆತನಿಗೆ ಬೀಡಿ ಚಟ, ಯಾರಿಗೂ ಕಾಣದ ಹಾಗೆ, ಅಪ್ಪನ ಕೊರೆ ಬೀಡಿಗಳನ್ನ ಆಯ್ದು ಕೊಡ್ತಿದ್ದೆ. ಎಷ್ಟೋ ಸಾರಿ ಬಹಿರ್ದೆಸೆಗೆ ಅವಸರವಾಗಿ, ಕರ್ಕೊಂಡು ಹೋಗೋಕೆ ಯಾರೂ ಬರದೇ ಇದ್ದಾಗ, ಮನೆಯಲ್ಲಿಯೇ ಮಾಡ್ಕೊಂಡು ಅತ್ತುಬಿಡ್ತಿದ್ದ. ಬಂದವರೆಲ್ಲ ಒದಿಯೋದೆ, ಹೇಗೆ ಬೇಕೋ ಹಾಗೆ ಒದಿಯೋರು.
ಸಾಯಿಬಾರ್ದೇನೋ, ಈ ಕರ್ಮ ನಾವ್ಯಾಕೆ ನೋಡ್ಬೇಕು ಅನ್ನೋರು, ಆದರೆ ಓಬಜ್ಜಿ ಮಾತ್ರ, ಬೈದು ಒದಿಯೋರು, ಅವ್ರೂ ಅತ್ತು ಬಟ್ಟೆಯೆಲ್ಲಾ ಬಿಚ್ಚಿಸಿ, ನೀರಾಕಿ ತೊಳೆದು, ಬೇರೆ ಬಟ್ಟೆ ಹಾಕೋರು, ಅಪ್ಪನ ಬೈಗಳು ತಿನ್ನುತ್ತಲೇ, ಅವ್ವನ ಸಹಾಯವೂ ತಮ್ಮನಿಗೆ ಇರುತ್ತಿತ್ತು. ಕಣ್ಗಳು ಹೋದ ಮೇಲೆ, ಸೂರ ಮಾವ ಬಹಳ ದಿನ ಇರಲಿಲ್ಲ. ಒಂದು ದಿನ ನಮ್ಮೆಲ್ಲರನ್ನ ಬಿಟ್ಟು ಮರೆಯಾದ.
ಆತ ಸತ್ತಾಗ, ಕಣ್ಣೀರು ಹಾಕಿದ್ದು ನನಗೆ ತಿಳಿದ ಹಾಗೆ, ನನ್ನವ್ವ ತಮ್ಮನೆನ್ನುವ ಅಕ್ಕರೆಯ ಪ್ರೀತಿಯಿಂದ, ಇನ್ನೂ ಓಬಜ್ಜಿ ಮಗನೆಂಬ ಮಮತೆಯ ಪ್ರೀತಿಯಿಂದ, ಬಿಟ್ಟರೆ ಮತ್ಯಾರ ಕಣ್ಣಂಚುಗಳು ಒದ್ದೆಯಾಗಿದ್ದು ನಾ ಕಾಣೆ. ಸತ್ತಿದ್ದು ಒಳ್ಳೇದೆ ಆಯ್ತು, ದಿನಾ ಯಾರು ನೋಡಬೇಕಿತ್ತು, ಅಂದವರೇ ಹೆಚ್ಚು ಮಂದಿ.
ಶವ ಇದ್ದ ರಾತ್ರಿ ಕಳೆಯುವುದು ಬಹಳ ಕಷ್ಟ, ಇದ್ದಂತವರು ಭಜನೆ ಮತ್ತೇನೇನೋ, ಕಾರ್ಯಕ್ರಮಗಳನ್ನ ಮಾಡಿ ಬೆಳಕರಿಸುತ್ತಾರೆ. ಇಲ್ಲಿ ಅವಕ್ಕೆಲ್ಲಾ ದುಡ್ಡಿಲ್ಲ, ಅಸಲಿಗೆ ಯಾರೂ ಇಲ್ಲ, ಶವ ಕಾಯಬೇಕು, ಬೆಳಕಿಗೆ ಲಾಂದ್ರನೂ ಇಲ್ಲ, ಸೀಮೆಎಣ್ಣೆ ಬುಡ್ಡಿ ಬೆಳಕು, ಸೂರಮಾವನ ಶವದ ಮೇಲೆ, ಒಂದು ಉದ್ದನೆಯ ಟವೆಲ್ ಹಾಕಿದ್ದು ಬಿಟ್ರೆ, ಬೇರೇನೂ ಇಲ್ಲ. ಒಂದಷ್ಟು ಜನ ಸಂಬಂಧಿಕರಿಗೆ ಸಾವು ಸುದ್ದಿಯೇನೋ ಹೋಗಿತ್ತು. ನನ್ನಪ್ಪ ಕೊಟ್ಟ ನಾಲ್ಕಾಣೆ, ಶೆಟ್ಟರ ಅಂಗಡಿಗೋಗಿ ಬೆಲ್ಲ, ಟೀ ಪುಡಿ ತಂದು, ಅವ್ವನ ಕೈಗೆ ಕೊಟ್ಟಿದ್ದೆ.
ನನ್ನಪ್ಪನಲ್ಲೊಬ್ಬ ಅದ್ಭುತ ಕಥೆಗಾರ ಇದಾನೆ ಅಂತ, ನನ್ನ ಅರಿವಿಗೆ ಬಂದಿದ್ದು ಆ ದಿನವೇ.ಶವ ಇಟ್ಟುಕೊಂಡು ನಿದ್ದೆ ಮಾಡೋ ಹಾಗಿರಲಿಲ್ಲ. ಇಡೀ ರಾತ್ರಿ ಬೆಲ್ಲ, ಟೀ ಪುಡಿಯಲ್ಲೇ, ಕಾಲ ಕಳೆಸಿದ್ದ ನನ್ನಪ್ಪ, ರಾತ್ರಿ ಹತ್ತು ಗಂಟೆಗೆ ಪ್ರಾರಂಭ ಮಾಡಿದ”ಏಳು ಸಮುದ್ರಗಳಾಚೆಯ ಒಬ್ಬ ರಾಜಕುಮಾರನ ಕಥೆ” ಮಧ್ಯದಲ್ಲಿ ಮೂರೊತ್ತು ಟೀ ಕುಡಿದ ಸಮಯ ಬಿಟ್ರೆ, ಬೆಳಿಗ್ಗೆ ಆರು ಗಂಟೆಯವರೆಗೆ, ಒಂದೇ ಕಥೆಯನ್ನ ಹೇಳಿದ್ದ.
ಮಧ್ಯ ಯಾವ ಉಪಕಥೆಗಳು ಇರಲಿಲ್ಲ, ಅನಕ್ಷರಸ್ಥ ನನ್ನಪ್ಪ, ಇಡೀ ರಾತ್ರಿಯೆಲ್ಲಾ ಹೇಳುವಂತಹ ದೊಡ್ಡ ಕಥೆಗಳನ್ನ ತನ್ನೊಳಗೇ ಬಚ್ಚಿಟ್ಟುಕೊಂಡಿದ್ದ. ನನಗಂತೂ ಸೋಜಿಗ, ಅಪ್ಪನನ್ನೇ ದಿಟ್ಟಿಸಿ ನೋಡುತ್ತಿದ್ದೆ. ಹೂ ಗುಟ್ಟುವವರು ಒಬ್ಬರಿರಬೇಕು ಆತನಿಗೆ, ಆತನ ನಿರೂಪಣಾ ಶೈಲಿ ಮೆಚ್ಚಲೇಬೇಕು, ಎಂತಹ ಅದ್ಭುತ ಕಥೆಗಾರ, ಧ್ಯಾನಿಸಿ ಅಡಗಿಸಿಟ್ಟುಕೊಂಡ ಕಥೆಗಳವು. ಬರೆದಿಟ್ಟರೆ ಪುಸ್ತಕಗಳಾಗುವಂತಹ ಕಥೆಗಳನ್ನು ನೆನಪಿನಲ್ಲಿಟ್ಟುಕೊಂಡು, ಸಾಂದರ್ಭಿಕವಾಗಿ ಬಳಸಿಕೊಳ್ಳುತ್ತಿದ್ದ.
ನನ್ನಪ್ಪ ಇಂತೊಬ್ಬ ಕಥೆಗಾರ ಅಂತ ಗೊತ್ತಾಗಿದ್ದೇ, ನನ್ನ ಸೂರಮಾವ ಸತ್ತ ದಿನವೇ. ಗರಿಷ್ಠದಲ್ಲಿ ನನ್ನಪ್ಪ, ಒಬ್ಬ ಕ್ರೂರಿ, ಕೊಲೆಗಾರ, ಮೆದುಗಿನಕೆರೆ ಗೌಡನ ಮನೆಲ್ಲಿ ಸಂಬಳವಿದ್ದಾಗ, ಅವರು ಕೈ, ನಾನು ಅಸ್ತ್ರ ಅಷ್ಟೇ, ಗೌಡ್ರು ಅವನನ್ನ ಕೊಲೆ ಮಾಡಿ ಬಾ ಅಂದಾಗ, ಮಾಡಿ ಬಂದಿದೀನಿ, ಅದು ನಾನು ಮಾಡಿದ್ದಲ್ಲ, ಮಾಡಿಸಿದ್ದು ಅಂತ ಸಮಜಾಯಿಸಿಕೊಡುತ್ತಿದ್ದ. ಯೌವ್ವನದ ದಿನಗಳಲ್ಲಿ, ಆದಂತಹ ತಪ್ಪುಗಳು ನನ್ನವಲ್ಲ, ನನ್ನನ್ನ ಸಂಬಳಕ್ಕಿಟ್ಟುಕೊಂಡಿದ್ದ, ಧಣಿಗಳವೂ ಅನ್ನುತ್ತಿದ್ದ. ಆದರೇ ಆತನಲ್ಲಿ ಒಬ್ಬ, ಅದ್ಭುತ ಕತೆಗಾರನೂ ಸಹ ಬದುಕಿದ್ದ.
ಹಟ್ಟಿಯಲ್ಲಿ ಶ್ರಾವಣ ಮಾಸದ ದಿನಗಳಲ್ಲಿ, ಯಾರ ಮನೆಯಲ್ಲಾದ್ರೂ, ಶನಿ ಪುರಾಣಗಳು ಏರ್ಪಟ್ಟರೆ, ನನ್ನಪ್ಪನಿಗೆ ಬುಲಾವ್ ಬರುತ್ತಿತ್ತು. ಪುರಾಣದ ಮಧ್ಯೆ ಬರುವ ಉಪಕಥೆಗಳಿಗೆ ನನ್ನಪ್ಪನೇ ಧ್ವನಿ. ಇಂಥಹ ಸಂದರ್ಭಗಳನ್ನ, ಹೆಚ್ಚಾಗಿ ಅಪ್ಪನ ಜೊತೆ ಬಳಸಿಕೊಂಡಿದ್ದು ನಾನೇ ಅನಿಸುತ್ತದೆ.
ನನ್ನಪ್ಪ ಒಬ್ಬ ಪಾರಿವಾಳಗಳ ಶೋಕಿದಾರ. ದುರ್ಗದಲ್ಲಿ ಈ ದಿನಕ್ಕೂ, ಸಾಕು ಪಾರಿವಾಳಗಳ ವಿಚಾರ ಬಂದರೆ, ಬಡಪ್ಪನ ಹೆಸರೇ ಆ ದಿನಗಳಲ್ಲಿ ಮುಂಚೂಣಿಯಲ್ಲಿರುತ್ತಿತ್ತು. ಯಾವ ಹಕ್ಕಿಗೆ, ಯಾವ ಜೊತೆ ಹಾಕಿದರೆ, ಎಂಥಹ ಪಾರಿವಾಳ ಹುಟ್ಟತ್ತೆ, ಅನ್ನುವಂತ ಕಲೆಗಾರ ನನ್ನಪ್ಪ.
ಆತ ಬದುಕಿದ್ದ ದಿನಗಳಲ್ಲಿ, ಪಾರಿವಾಳದ ಪಂದ್ಯಗಳು ಏರ್ಪಡುತ್ತಿದ್ದವು, ದುರ್ಗದ ದೊಡ್ಡ ಗರಡಿಯ ಪೈಲ್ವಾನ್ ನಂಜಪ್ಪನಿಗೆ, ನನ್ನಪ್ಪ ಪಾರಿವಾಳದ ಗೆಳೆಯ.
ಈ ಹುಚ್ಚು ಹಿರಿಯವನಿಗೆ ಅಚ್ಚುಮೆಚ್ಚಿನ ಚಟವಾಗಿ, ಪಾರಿವಾಳ ಸಾಕುವ ಚಾಳಿ ಇಂದಿಗೂ ಆತನಿಗಿದೆ. ನನ್ನಪ್ಪನ ಕಥೆಗಳನ್ನೇ ಹೊದ್ದುಕೊಂಡವ ನಾನು, ಒಂದಷ್ಟು ಅಕ್ಷರಗಳ ಜೊತೆ, ಸಮಯವಿದ್ದಾಗ ಗುದ್ದಾಡಿಕೊಂಡಿರುತ್ತೇನೆ.
ಇನ್ನು ಮೂರನೇಯವ, ಚಿಕ್ಕಂದಿನಿಂದಲೂ ದುಡಿಮೆ, ಮನೆ ಜವಾಬ್ದಾರಿಗಳೊತ್ತುಕೊಂಡವ, ಹೊರಬರಲಾರದೆ, ಯಾರಿಗೂ ಪರಿಚಯವಿಲ್ಲದೆ, ಒಳಗೇ ಸವೆಯುತ್ತಿದ್ದಾನೆ.
ಇನ್ನು ನಾಲ್ಕನೆಯವ, ಅಪ್ಪ ಹೋದಮೇಲೆ ಅಪ್ಪನೆತ್ತರಕ್ಕೆ ಬೆಳೆದು ನಿಂತವ, ಎತ್ತಾಡಿಸಿದ ಕೂಸಾದರೂ, ಬುದ್ಧಿ ಹೇಳುವ ಹಂತಕ್ಕೆ ಬೆಳೆದಿದೆಯಲ್ಲಾ, ಅನ್ನುವ ಖುಷಿ ಇದೆ.
ನಾಲ್ಕು ಜನರಲ್ಲಿ ಯಾರಿಗೆ ಎಷ್ಟು ಅನುಭವವಾಗಿದೆಯೋ ಗೊತ್ತಿಲ್ಲ, ಆದರೆ ನನ್ನನ್ನ ಈ ವಿಚಾರದಲ್ಲಿ ಬಹಳವಾಗಿ ಕಾಡಿದೆ, ಈ ಊರಲ್ಲಿ ನನ್ನನ್ನ ಗುರ್ತಿಸುವುದು, ಬಡಪ್ಪನ ಮಗ ಅಂತ ಅಲ್ಲ, ಕಾಂತರಾಜ್ ಅಣ್ಣ ಅಂತ, ಕರಿಯಪ್ಪ ಅಂತ ಬಂದ ಜಾತಕದ ಹೆಸರನ್ನ, ಕಾಂತರಾಜ್ ಆಗಿ ಪರಿವರ್ತಿಸಿದ್ದೇ, ಅದೇ ಹೆಸರು ನನ್ನನ್ನೂ ಆವರಿಸಿ, ನನಗೂ ಹೆಸರಾಗಿದ್ದುದು ಆಶ್ಚರ್ಯವೇ ! ಖುಷಿಯಿದೆ.
ಹಿರಿಯ ಮೂವರಲ್ಲಿ, ಅಪ್ಪನ ಒಂದೊಂದು ಗುಣಗಳು ಒಬ್ಬೊಬ್ಬರಿಗೆ ಮೇ ಳೖಸಿದ್ದರೆ, ಇವನಿಗೆ ಒಟ್ಟು, ಎಲ್ಲಾ ಗುಣಗಳು ಸಿದ್ಧಿಸಿಬಿಟ್ಟಿವೆ. ನಮ್ಮೆಲ್ಲರಿಗಿಂತ ಕಿರಿಯನಾದರೂ, ಊರು ಹಿರಿತನ ಕೊಟ್ಟು, ಜವಾಬ್ದಾರಿಗಳನ್ನ ನಿರೀಕ್ಷಿಸಿದೆ. ಅಪ್ಪನ ಕುಟುಂಬ ಅಲಕ್ಷ್ಯವಾದರೂ, ಊರಿಗೆ ಲಕ್ಷ್ಯ ಕೊಟ್ಟು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂಬ ಆಶಯ, ಇವನು ಊರಿಗೆ ಒಂದು ಹೂವಾದರೇ, ಕುಟುಂಬದ ನಾವು ನಾರಾಗಿ ಜೊತೆಗಿರುತ್ತೇವಲ್ಲ, ಅದೇ ಖುಷಿ ನನಗೆ. ಮುಂದುವರೆಯುವುದು…….
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.