ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೆರಿಗೆ ವಸೂಲಿ, ಕಂದಾಯ ಬಾಕಿ, ಖಾಲಿ ಉಳಿದ ಅಂಗಡಿ ಮಳಿಗೆಗಳ ಹರಾಜು, ವಿವಿಧ ರೀತಿಯ ತೆರಿಗೆ, ನಗರಸಭೆಯ ಸಂಪನ್ಮೂಲ ಕ್ರೋಡೀಕರಣ ಮುಂತಾದ ವಿಚಾರಗಳಲ್ಲಿ ನಗರಸಭೆಯ ಅಧಿಕಾರಿಗಳ ಬೇಜವಾಬ್ದಾರಿಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ರವರ ಮೊದಲ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮೇಲ್ಕಂಡ ವಿಷಯಗಳಲ್ಲಿ ಅಧಿಕಾರಿಗಳ ಕಾರ್ಯ ನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಸಭೆಯ ಆರಂಭದಲ್ಲಿ ಶಿವಶಂಕರ್, ರವಿಕುಮಾರ್, ತ. ನ. ಪ್ರಭುದೇವ್ ಮಾತನಾಡಿ ಕಂದಾಯ ವಸೂಲಾತಿಯಲ್ಲಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ನಗರಸಭೆಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಸೇರಿದಂತೆ ಹಲವೆಡೆಯ ಸುಮಾರು 40ವಾಣಿಜ್ಯ ಮಳಿಗೆಗಳು ಎರಡು ವರ್ಷದಿಂದ ಖಾಲಿ ಇವೆ.
ಒಳ ಚರಂಡಿ ಸಂಪರ್ಕ ಶುಲ್ಕ, ಹಾಗೂ ಕುಡಿಯುವ ನೀರಿನ ಸಂಪರ್ಕ ಶುಲ್ಕ ವಸೂಲಾತಿಯಲ್ಲಿ ಬಾಗಷಃ ಪ್ರಗತಿ ಯಾಗಿಲ್ಲ. ವಾರ್ಷಿಕ ನೀರಿನ ಶುಲ್ಕ 2.87ಕೋಟಿ ವಸೂಲಾಗಬೇಕು. ಆದರೆ ಒಂದು ಕೋಟಿ ವಸೂಲಾಗಿದೆ. ನೀರಿನ ಶುಲ್ಕ 8ಕೋಟಿ ಬಾಕಿ ಇದ್ದು ಆದರೆ ವಸೂಲಿ ಒಂದು ಕೋಟಿ ಎಂದು ಲೆಕ್ಕದಲ್ಲಿ ತೋರಿಸಲಾಗಿದೆ. ಹೀಗಾದರೆ ನಗರ ಸಭೆಗೆ ಆದಾಯ ಹೇಗೆ ಸಾಧ್ಯ. ಇದು ಹೀಗೆ ಮುಂದುವರೆದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಇದಕ್ಕೆ ಇಂದ್ರಾಣಿ, ನಾಗರತ್ನ, ಆನಂದ್, ಚಂದ್ರ ಮೋಹನ್ ಭಾಸ್ಕರ್ ಮುಂತಾದವರು ದನಿಗೂಡಿಸಿದರು.
ಚಿತ್ರಮಂದಿರಗಳು, ಕಲ್ಯಾಣ ಮಂದಿರ, ಪಾರ್ಟಿ ಹಾಲ್, ಪೆಟ್ರೋಲ್ ಬಂಕ್, ಖಾಸಗಿ ಶಾಲಾ ಕಾಲೇಜುಗಳು ಸೇರಿದಂತೆ ಹಲವಾರು ವಾಣಿಜ್ಯ ಕಟ್ಟಡಗಳ ತೆರಿಗೆ ಬಾಕಿ ಬಗ್ಗೆ ತ. ನ. ಪ್ರಭುದೇವ್ ತೀರಾ ಆಕ್ರೋಶ ವ್ಯಕ್ತಪಡಿಸಿ, ಪ್ರತಿ ಸಭೆಯಲ್ಲೂ ಇದರ ಬಗ್ಗೆ ಪ್ರಸ್ತಾಪಿಸಿದಾಗ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಾರೆ. ನಗರದಲ್ಲಿ ಎಷ್ಟು ವಾಣಿಜ್ಯ ಮಳಿಗೆಗಳಿವೆ ಎಂಬ ನಿಖರ ಮಾಹಿತಿಯೇ ಅಧಿಕಾರಿಗಳಿಗೆ ಗೊತ್ತಿಲ್ಲವೆಂದರೆ ಏನು ಹೇಳಬೇಕು.
ಇದನ್ನೆಲ್ಲಾ ಸಹಿಸಲಾಗದು. ಮುಂದಿನ ಸಭೆಯ ವೇಳೆಗೆ ವಾಣಿಜ್ಯ ಮಳಿಗೆಗಳ ಸಂಪೂರ್ಣ ಪಟ್ಟಿ ಹಾಗೂ ಕರ ವಸೂಲಿಯ ಪ್ರಗತಿ ಪಟ್ಟಿ ಸದಸ್ಯರ ಗಮನಕ್ಕೆ ತರಬೇಕು. ಪೌರ ಕಾರ್ಮಿಕರ ವಸತಿ ಕಾಮಗಾರಿ ಪೂರ್ಣವಾಗಲು ಇನ್ನೆಷ್ಟು ದಿನಬೇಕು. ಈ ಬಗ್ಗೆ ನಿಮ್ಮ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಅಧಿಕಾರಿಗಳ ಬಗ್ಗೆ ತೀವ್ರ ಕೋಪ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮದ್ಯೆ ಪ್ರವೇಶಿಸಿದ ಶಂಕ್ರಿ ಮಾತನಾಡಿ ಕಳೆದ ಸಭೆಯಲ್ಲಿ ಕಾಮಗಾರಿ ಮುಗಿಯಲು ಹಣಕಾಸಿನ ಸಮಸ್ಯೆ ಇದೆ ಎಂದಾಗ ಕೂಡಲೇ 50ಲಕ್ಷ ಬಿಡುಗಡೆ ಯಾಗಿದೆ ಈಗ ಮತ್ತೆ ವಿಳಂಬ ಎಂದರೆ ಹೇಗೆ ಎಂದಾಗ ಕಾರ್ಯ ನಿರ್ವಾಹಕ ಎಂಜಿನಿಯರ್ ರಾಮೇಗೌಡ ವಿಳಂಬದ ಬಗ್ಗೆ ಮಾಹಿತಿ ನೀಡಿದರು ಇದಕ್ಕೆ ಪ್ರಭು ತೀರಾ ಆಕ್ರೋಶ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಬೇಕಾದಿತೆಂದು ಎಚ್ಚರಿಸಿದರು.
ಸದಸ್ಯೆ ಇಂದ್ರಾಣಿ ನಾಗರತ್ನ ಕೃಷ್ಣಮೂರ್ತಿ ಮಾತನಾಡಿ ಮುಖ್ಯ ದ್ವಾರಗಳ ನಿರ್ಮಾಣ ಹಾಗೂ ಸೂಚನಾ ಫಲಕ ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಹೀಗೆ ಮಾಡೋದು ಸರಿಯಲ್ಲ ಅಭಿವೃದ್ಧಿ ವಿಚಾರ ದಲ್ಲಿ ಎಲ್ಲಾ ವಾರ್ಡಗಳನ್ನು ಸಮಾನವಾಗಿ ನೋಡಬೇಕು ಎಂದರು ಇದನ್ನು ನಾಗರಾಜ್, ಆನಂದ್ ಚಂದ್ರಮೋಹನ್, ಪ್ರಭಾ ನಾಗರಾಜ್ ಶಿವಣ್ಣ ಮುಂತಾದವರು ಸಹಮತ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ನಮಗೆ ಎಲ್ಲಾ ವಾರ್ಡಗಳು ಒಂದೇ ಮುಂದೆ ತಾರತಮ್ಯ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.
ರಾಷ್ಟ್ರಿಯ ಹಬ್ಬಗಳ ಆಚರಣ ಸಮಿತಿಯ ಎಲ್ಲಾ ಕಾರ್ಯಕ್ರಮಗಳಿಗೆ ನಗರಸಭೆಯಿಂದಲೇ ಖರ್ಚುಗಳನ್ನು ಬರಿಸಬೇಕು ಎಂಬ ಹೊಸ ಸಂಪ್ರದಾಯ ಪ್ರಾರಂಭವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ಎಲ್ಲಾ ಇಲಾಖೆಗಳು ಖರ್ಚು ಗಳನ್ನು ಬರಿಸಬೇಕು ಎಂದು ಉಪಾಧ್ಯಕ್ಷ ಮಲ್ಲೇಶ್, ರವಿಕುಮಾರ್, ಬಂತಿ ವೆಂಕಟೇಶ್, ಪದ್ಮನಾಭ, ಸಭೆಯಲ್ಲಿ ಗಮನ ಸೆಳೆದರು. ಜೊತೆಗೆ ಸ್ವತಂತ್ರೋತ್ಸವ ಸಂದರ್ಭದಲ್ಲಿ ಪ್ರತಿವರ್ಷ ನಗರಸಭೆ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಕೊಡಲಾಗುತ್ತದೆ.
ಈಗ ಖಾಸಗಿ ಶಾಲೆಗಳವರು ನಮ್ಮ ಶಾಲೆಗಳಿಗೂ ಸಿಹಿ ತಿಂಡಿ ಕೊಡಬೇಕೆಂಬ ಡಿಮ್ಯಾಂಡ್ ಇಟ್ಟಿದಾರೆ ಆದರೆ ಡೊನೆಷನ್ ರೂಪದಲ್ಲಿ ಪೋಷಕರಿಂದ ವಿನಾಕಾರಣ ಹಣ ಕೀಳುವ ಖಾಸಗಿ ಶಾಲೆಗಳಿಗೆ ಏಕೆ ನಗರಸಭೆ ಯಿಂದ ಕೊಡಬೇಕು. ಇದನ್ನು ತಿರಸ್ಕರಿಸಬೇಕೆಂದು ಬಹಳಷ್ಟು ಸದಸ್ಯರು ಒಪ್ಪಿಗೆ ಸೂಚಿಸಿದರು. ಇದಕ್ಕೆ ಭಾಸ್ಕರ್, ಶಿವರಾಜ್, ಶಿವಶಂಕರ್ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿ ಮಕ್ಕಳೆಂದರೆ ಎಲ್ಲಾ ಒಂದೇ. ಇದರಲ್ಲಿ ತಾರತಮ್ಯ ಮಾಡುವುದು ಬೇಡ. ನಮ್ಮ ಹಲವು ಸದಸ್ಯರ ಮಕ್ಕಳೇ ಖಾಸಗಿ ಶಾಲೆಗಳಲ್ಲಿ ಎಂಬುದು ಗಮನದಲ್ಲಿರಲಿ ಎಂದರು.
ಯೋಜನಾ ಪ್ರಾಧಿಕಾರದಿಂದ ಅನುಮೋದಿಸಿದ 20ಕ್ಕೂ ಬಡಾವಣೆ ಗಳಿವೆ. ನಗರ ವ್ಯಾಪ್ತಿಯ ಈ ಬಡಾವಣೆಗಳಲ್ಲಿ ನಗರಸಭೆ ಪರವಾನಗಿ ಇಲ್ಲದೆ ನೂರಾರು ಕಟ್ಟಡಗಳು ನಿರ್ಮಾಣವಾಗುತ್ತಿವೆ. ಆದರೆ ಕಟ್ಟಡ ನಿರ್ಮಾಣ ಅನುಮತಿಗೆ ನೂರೆಂಟು ಅರ್ಜಿಗಳು ಬಂದಿದ್ದು ಅದರಲ್ಲಿ 25ಕ್ಕೆ ಮಾತ್ರ ನಗರಸಭೆಯಿಂದ ಅನುಮೋದನೆ ಸಿಕ್ಕಿದೆ. ಉಳಿದಂತೆ ಯಾವಕ್ಕು ಅನುಮತಿಯಿಲ್ಲ. ಈ ಎಲ್ಲಾ ಬಡಾವಣೆಗಳಿಗೆ ನಗರ ಸಭೆಯಿಂದ ರಸ್ತೆ, ನೀರು, ಬೀದಿ ದೀಪ, ಒಳಚರಂಡಿ ವ್ಯವಸ್ಥೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಕೊಡಬೇಕು.
ಆದರೆ ಪರವಾನಗಿ ಮಾತ್ರ ಬೇಡ ಎಂದರೆ ಹೇಗೆ. ಇದರಿಂದ ನಗರಸಭೆ ಆದಾಯ ಕಡಿತವಾಗುತ್ತದೆ. ಎಂದು ರವಿಕುಮಾರ್, ಶಂಕ್ರಿ, ಪ್ರಭು ಆಕ್ಷೇಪ ವ್ಯಕ್ತ ಪಡಿಸಿದರು. ಇದರ ಬಗ್ಗೆ ಗಮನ ಹರಿಸದೆ ಒಳಗೊಳಗೇ ಮಾಲೀಕರಿಂದ ಹಣ ಪಡೆದು ಸುಮ್ಮನಾಗುವ ಅಧಿಕಾರಿಗಳಿದ್ದಾರೆ. ಜೊತೆಗೆ ನಮ್ಮ ಸದಸ್ಯರೇ ಮಾಲೀಕರ ಜೊತೆ ಶಾಮಿಲಾಗಿದ್ದಾರೆ ಎಂದು ರವಿಕುಮಾರ್ ಆರೋಪ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಭಾಸ್ಕರ್, ಸುಬ್ಬು, ಬಂತಿ ವೆಂಕಟೇಶ್, ಶಿವರಾಜ್, ಪದ್ಮನಾಭ ಮುಂತಾದವರು ಅದ್ಯಾರೆಂದು ಬಹಿರಂಗ ಪಡಿಸಿ. ಎಲ್ಲಾ ಸದಸ್ಯರ ಮೇಲೆ ಆರೋಪ ಮಾಡುವುದು ಬೇಡ. ಈ ವಿಚಾರದಲ್ಲಿ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳಿಗೆ ಸಂಬಳ ಏಕೆ ಕೊಡಬೇಕು ಎಂದರು.
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಪೌರಯುಕ್ತ ಕಾರ್ತಿಕೇಶ್ವರ್, ನಾನು ತೆರಿಗೆ ವಸೂಲಿ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಈಗ ಮಾಸಿಕ ಶೇ 60ರಿಂದ 70ರಷ್ಟು ಪ್ರಗತಿಯಾಗಿದೆ. ವರ್ಷ ಅಂತ್ಯಕ್ಕೆ 90ರಷ್ಟು ಗುರಿ ಮುಟ್ಟುವ ಉದ್ದೇಶವಿದೆ ಹೊಸ ಕಟ್ಟಡಗಳ ನಿರ್ಮಾಣ ಪರವಾನಗಿ ನೀಡಲು ಸರ್ಕಾರದ ಕೆಲವು ಕಠಿಣ ನಿಯಮಗಳಿವೆ ಅದರ ಪ್ರಕಾರವೇ ಪರವಾನಗಿ ನೀಡಬೇಕು. ಈಗಾಗಲೇ ಪರವಾನಗಿ ಪಡೆಯದ ಹಲವು ಭೂ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ನಗರಸಭೆಯಿಂದ ನೋಟಿಸ್ ನೀಡುತ್ತಿದ್ದಂತೆ ನ್ಯಾಯಾಲಯದಿಂದ ತಡೆ ಯಾಜ್ಞೆ ತರುತ್ತಾರೆ. ಇದರಿಂದ ಕ್ರಮ ಸಾಧ್ಯವಾಗುತ್ತಿಲ್ಲ. ಆದರೆ ನಿರ್ಮಾಣದ ನಂತರ ಎರಡು ಪಟ್ಟು ತೆರಿಗೆ ವಿಧಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ರಚನೆಗೆ ಸಭೆ ಅನುಮೋದಿಸಿತು. ಚರ್ಚೆಯಲ್ಲಿ ಉಪಾಧ್ಯಕ್ಷ ಮಲ್ಲೇಶ್, ಪ್ರಭುದೇವ್, ರವಿಕುಮಾರ್, ಶಿವ ಶಂಕರ್, ಇಂದ್ರಾಣಿ ನಾಗರತ್ನ, ಪ್ರಭಾ ನಾಗರಾಜ್, ನಾಗವೇಣಿ, ಚಂದ್ರಮೋಹನ್ ಆನಂದ್, ಪದ್ಮನಾಭ, ಶಿವಣ್ಣ, ಬಂತಿ ವೆಂಕಟೇಶ್, ಶಿವರಾಜ್ ಭಾಸ್ಕರ್, ಸುಬ್ಬು ಸೇರಿದಂತೆ ಹಲವು ಸದಸ್ಯರು ಭಾಗವಹಿಸಿದ್ದರು.