ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ವಿಕಲಚೇತನರಿಗಾಗಿಯೇ ಸ್ವಾವಲಂಬನ ಆರೋಗ್ಯ ವಿಮೆ ಯೋಜನೆ ಜಾರಿಗೆ ತಂದಿದ್ದರು. ಅದು ನಮಗೆ ಬಹಳ ಅನುಕೂಲವಾಗಿತ್ತು. ಆದರೆ, ಯೋಜನೆ ಈಗ ನಿಂತು ಹೋಗಿದೆ. 3,330 ಪ್ರೀಮಿಯಂನ ವಿಮೆಗೆ ನಾವು ಕೇವಲ 330 ಕೊಟ್ಟರೆ 2 ಲಕ್ಷ ಮೊತ್ತದವರೆಗೆ ಅತ್ಯುತ್ತಮವಾದ ಉಚಿತ ಆರೋಗ್ಯ ಸೌಲಭ್ಯ ದೊರೆಯುತ್ತಿತ್ತು. ಲಕ್ಷೋಪಲಕ್ಷ ಕುಟುಂಬಗಳಿಗೆ ಇದು ವರದಾನವಾಗಿತ್ತು. ಈ ಯೋಜನೆಯನ್ನು ಪುನಾರಂಭ ಮಾಡಿಸಬೇಕು ಎಂದು ವಿಕಲಚೇತನ ಉದ್ಯೋಗಿಗಳು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.
ಈ ಬಗ್ಗೆ ಸಂಬಂಧಪಟ್ಟವರ ಜತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಕಲಚೇತನರ ಶ್ರೇಯೋವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದು, ಅವುಗಳನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳುವಂತೆ ಕುಮಾರಸ್ವಾಮಿ ಸಲಹೆ ನೀಡಿದರು.
ರಾಜ್ಯ ಸರ್ಕಾರದ ಬೆಸ್ಕಾಂ ಸೇರಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಹೆಚ್.ಡಿ.ಕುಮಾರಸ್ವಾಮಿ ಅವರ ನಿವಾಸಕ್ಕೆ ಸಂಕ್ರಾಂತಿ ಹಬ್ಬದೊಂದು ಮಂಗಳವಾರ ಆಗಮಿಸಿ ಸಚಿವರ ಜೊತೆಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿ ಸಂಭ್ರಮಿಸಿದರು.
2019ರಿಂದಲೂ ಇವರೆಲ್ಲರೂ ಪ್ರತೀ ವರ್ಷ ತಪ್ಪದೇ ನನ್ನೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡು ಬರುತ್ತಿರುವ ಇವರೆಲ್ಲರೂ ನನ್ನ ಮೇಲೆ ಇಟ್ಟಿರುವ ಅಪರಿಮಿತ ಪ್ರೀತಿ, ವಾತ್ಸಲ್ಯಕ್ಕೆ ಆಭಾರಿ ಆಗಿದ್ದೇನೆ ಎಂದು ಕುಮಾರಸ್ವಾಮಿ ಅವರು ಭಾವುಕರಾದರು.
2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಎಸ್ಎಸ್ಎಲ್ಸಿ ಪಾಸಾಗಿದ್ದ 300, ಪದವೀಧರರಾಗಿದ್ದ 300 ವಿಕಲಚೇತನರಿಗೆ ಇಂಧನ ಇಲಾಖೆಯಲ್ಲಿ ಉದ್ಯೋಗವಕಾಶ ಕಲ್ಪಿಸಿ ನೇಮಕಾತಿ ಆದೇಶ ನೀಡಿದ್ದ ಕುಮಾರಸ್ವಾಮಿ ಅವರು, ಆ ನಂತರ ಅವರ ಸೇವೆ ಕಾಯಂ ಆಗಿರಲಿಲ್ಲ. ಎರಡನೇ ಬಾರಿಗೆ ಕುಮಾರಸ್ವಾಮಿ ಅವರು ಸಿಎಂ ಆದ ಮೇಲೆ 2019ರ ಸಂಕ್ರಾಂತಿ ಹಬ್ಬದ ದಿನವೇ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 600 ವಿಕಲಚೇತನರ ಸೇವೆಯನ್ನು ಕಾಯಂ ಮಾಡಿ ಆದೇಶ ಹೊರಡಿಸಿದ್ದರು. ಅಂದಿನಿಂದ ಇವರೆಲ್ಲರೂ ಪ್ರತೀ ವರ್ಷ ಕುಟುಂಬ ಸಮೇತ ಬಂದು ಕುಮಾರಸ್ವಾಮಿ ಅವರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸುತ್ತಿರುವುದು ಅತ್ಯಂತ ವಿಶೇಷವಾಗಿದೆ.
ಪ್ರಧಾನಿಗಳಾದ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ವಿಕಲಚೇತನರ ಆರ್ಥಿಕ ಸಬಲೀಕರಣ ಹಾಗೂ ಅವರ ಸ್ವಾಭಿಮಾನದ ಬದುಕಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅದೆಲ್ಲವನ್ನೂ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಅವರೆಲ್ಲರಿಗೂ ಕುಮಾರಸ್ವಾಮಿ ಅವರು ತಿಳಿ ಹೇಳಿದರು.
ವಿಕಲಚೇತನರು ತಮ್ಮ ಕುಟುಂಬ ಸಮೇತವಾಗಿ ಕುಮಾರಸ್ವಾಮಿ ಅವರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿಕೊಳ್ಳಲು ರಾಜ್ಯದ ಎಲ್ಲ ಭಾಗಗಳಿಂದ ಬಂದಿದ್ದರು. ಹಬ್ಬದ ದಿನ ಕುಮಾರಸ್ವಾಮಿ ಅವರು ಎಲ್ಲಿರುತ್ತಾರೋ ಅಲ್ಲಿಗೆ ಬಂದು ತಮ್ಮ ಮಕ್ಕಳ ಜತೆ ಸೇರಿಕೊಂಡು ಹಬ್ಬ ಆಚರಿಸುತ್ತೇವೆ ಎಂದು ವಿಕಲಚೇತನರು ತಿಳಿಸಿದರು.
ಕಳೆದ ಆರು ವರ್ಷಗಳಿಂದ ನಾವೆಲ್ಲರೂ ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದೇವೆ. ಈ ಹಬ್ಬಕ್ಕೆ ಉದ್ಯೋಗಿಗಳೆಲ್ಲ ಮಂಗಳವಾರ ಸಚಿವರ ಬೆಂಗಳೂರಿನ ಜೆ.ಪಿ.ನಗರದ ನಿವಾಸಕ್ಕೆ ಬಂದು ಹಬ್ಬ ಆಚರಿಸಿದೆವು.
ಭಾವುಕರಾದ ಸಚಿವರು:
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಎಲ್ಲರಿಗೂ ಶುಭ ಕೋರಿ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ ಆಗಿದ್ದೇನೆ. ನಿಮ್ಮ ಹೃದಯದಲಿ ಸ್ಥಾನ ಕೊಟ್ಟಿದ್ದಕ್ಕೆ ನಾನು ಆಭಾರಿ. ನಿಮ್ಮ ಹಾರೈಕೆ ಪ್ರೀತಿಯೇ ನನಗೆ ಶ್ರೀರಕ್ಷೆ ಎಂದು ಭಾವುಕರಾಗಿ ಹೇಳಿದರು.
ಮುಂದುವರೆದು ಮಾತನಾಡಿದ ಕುಮಾರಸ್ವಾಮಿ ಅವರು, ಅವಕಾಶ ಸಿಕ್ಕಾಗ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ವಿಕಲಚೇತನರಿಗೆ ಸಾಧ್ಯವಾದಷ್ಟು ನೆರವು ಕೊಟ್ಟಿದ್ದೇನೆ. ಮುಂದೆಯೂ ದೈಹಿಕವಾಗಿ ಶಕ್ತಿ ಇಲ್ಲದ ಯಾರೇ ಇದ್ದರೂ ಅವರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ಪ್ರಾಮಾಣಿಕವಾಗಿ ಅಂತಹವರ ಒಳಿತಿಗಾಗಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ವಿಕಲಚೇತನರು, ದೈಹಿಕವಾಗಿ ಅಶಕ್ತರ ಬಗ್ಗೆ ನಮಗೆ ಅನುಕಂಪಕ್ಕಿಂತ ಮಿಗಿಲಾಗಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಕೆಲಸ ಆಗಬೇಕಿದೆ. ನನಗೆ ಅವಕಾಶ ಸಿಕ್ಕಿದಾಗ ನಾನು ಇಂಥವರ ಪರವಾಗಿ ಕೆಲಸ ಮಾಡುತ್ತೇನೆ. ನನ್ನ ಪಾಲಿಗೆ ಇವರು ದೇವರ ಸಮಾನರು ಎಂದು ಹೇಳಿದರು.
ಸಮಾಜದಲ್ಲಿ ಇನ್ನೂ ಹೆಚ್ಚಿನ ವಿಕಲಚೇತನರು ಸಂಕಷ್ಟದಲ್ಲಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಮುಂದೆ ಜನರು, ಮತ್ತು ದೇವರು ಅವಕಾಶ ಕೊಡಬಹುದು ಎಂದು ನಂಬಿದ್ದೇನೆ. ನಿಮ್ಮ ಮಕ್ಕಳಿಗೆ ಶುಭವಾಗಲಿ, ಅವರನ್ನು ಚೆನ್ನಾಗಿ ಓದಿಸಿ ಎಂದು ಕುಮಾರಸ್ವಾಮಿ ಶುಭ ಹಾರೈಸಿದರು.
ಅಂಗವೈಕಲ್ಯ ಬಂತೆಂದು ಹೆದರಬೇಡಿ. ವಿಕಲಚೇತನರು, ದೈಹಿಕವಾಗಿ ಶಕ್ತಿ ಇಲ್ಲದವರು ಧೃತಿಗೆಡಬೇಡಿ. ದೇವರಿದ್ದಾನೆ, ನಿಮಗೂ ಅವಕಾಶ ಬಂದೆ ಬರುತ್ತದೆ. ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಇವತ್ತು ಭಾರತ ಯಾರೂ ಊಹೆ ಮಾಡದ ರೀತಿಯಲ್ಲಿ ಪ್ರಗತಿ ಹೊಂದುತ್ತಿದೆ. ಅವಕಾಶಗಳು ಹೆಚ್ಚುತ್ತಿವೆ. ಯಾರು ದೃತಿಗೆಡಬಾರದು. ಕಷ್ಟಗಳು ಬಂದರೆ ಧೈರ್ಯವಾಗಿ ಎದುರಿಸಿ, ಯಾವುದೇ ಸಮಸ್ಯೆ ಬಂದರೂ ಕೆಚ್ಚೆದೆಯಿಂದ ಎದುರಿಸಿ ಗೆಲ್ಲಬೇಕು. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ. ಕೌಟುಂಬಿಕವಾಗಿ ಒಳ್ಳೆಯ ಬಾಂಧವ್ಯ ರೂಢಿಸಿಕೊಳ್ಳಿ ಎಂದು ಸಚಿವ ಕುಮಾರಸ್ವಾಮಿ ಹೇಳಿದರು.
ಉದ್ಯೋಗಾವಕಾಶ ನೀಡಲು ಮನವಿ:
ಸಚಿವ ಕುಮಾರಸ್ವಾಮಿ ಅವರಿಗೆ ಅಹವಾಲು ಸಲ್ಲಿಸಿದ ವಿಕಲಚೇತನ ಉದ್ಯೋಗಿಗಳು, ಇವತ್ತು ನಿಮಗೆ ಶುಭ ಕೋರಲು ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿದ್ದೇವೆ. ಮುಂದಿನ ವರ್ಷ ದೇಶದ ಎಲ್ಲೆಡೆಯಿಂದ ಬಂದು ನಿಮಗೆ ಶುಭ ಕೋರುವಂತಾಗಬೇಕು. ತಾವು ಹೆಚ್ಚು ಪ್ರಮಾಣದಲ್ಲಿ ದೇಶಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಲ್ಲಿ ವಿಕಲಚೇತನರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದು ವಿಕಲಚೇತನರು ಮನವಿ ಮಾಡಿದರು.
ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಉದ್ಯೋಗಿಗಳು:
ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವಾಗ ನಮ್ಮ ವೇತನ 3000 ರೂ. ಇತ್ತು. ನಮ್ಮ ಸೇವೆ ಕಾಯಂ ಆದ ಮೇಲೆ 80,000 ರೂ.ರಿಂದ 90,000 ರೂ. ಮೀರಿ ವೇತನ ಪಡೆಯುತ್ತಿದ್ದೇವೆ. ನಾವು ಸ್ವಂತ ಮನೆ ಕಟ್ಟಿಕೊಂಡಿದ್ದೇವೆ, ಸ್ವಂತ ಕಾರು ಖರೀದಿ ಮಾಡಿದೇವೆ.
ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುತ್ತಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು ಕುಮಾರಸ್ವಾಮಿ ಅವರಿಂದ. ಹೀಗಾಗಿ ನಾವು ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಅವರ ಜತೆಯಲ್ಲಿ ಆಚರಿಸುತ್ತೇವೆ ಎಂದು ವಿಕಲಚೇತನರು ಹೇಳಿ ಕುಮಾರಸ್ವಾಮಿ ಅವರು ಹೆಚ್ಚಿನ ಕಾಲ ಆರೋಗ್ಯವಂತರಾಗಿ ಬಾಳಬೇಕು, ನಮ್ಮಂತವರ ಸೇವೆ ಮಾಡಬೇಕು ಎಂದು ವಿಕಲಚೇತನರು ಪ್ರಾರ್ಥಿಸಿದರು.