ಚಿತ್ರದುರ್ಗದ ವೈದ್ಯಕೀಯ ವಿದ್ಯಾರ್ಥಿನಿಗೆ 15 ಲಕ್ಷ ಪರಿಹಾರ ನೀಡಲು ಸಿದ್ದಾರ್ಥ ಶಿಕ್ಷಣ ಸಂಸ್ಥೆಗೆ ಆದೇಶಿಸಿದ ಹೈಕೋರ್ಟ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ಎಂಬಿಬಿಎಸ್​ ಆಕಾಂಕ್ಷಿ ವಿದ್ಯಾರ್ಥಿನಿಗೆ ಸೀಟು ನೀಡುವುದಾಗಿ ಭರವಸೆ ನೀಡಿ ನಿರಾಕರಿಸಿದ್ದ ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆಗೆ 15 ಲಕ್ಷ ರೂ. ಗಳ ಪರಿಹಾರ ಪಾವತಿಸುವಂತೆ ಹೈಕೋರ್ಟ್​ ಸೂಚನೆ ನೀಡಿ ಆದೇಶಿಸಿದೆ.

ವೈದ್ಯಕೀಯ ಪದವಿಗೆ ಅಗತ್ಯವಿರುವ ಎಲ್ಲ ಅರ್ಹತೆಗಳಿದ್ದು, 2017-18ನೇ ಸಾಲಿನಲ್ಲಿ ವೈದ್ಯಕೀಯ ಸೀಟು ನೀಡಿರಲಿಲ್ಲ. ಇದರ ವಿರುದ್ಧ ತುಮಕೂರಿನ ಸಂಜನಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನುಸಿವರಾಮನ್​ ಮತ್ತು ನ್ಯಾಯಮೂರ್ತಿ ಕೆ. ಮನ್ಮಧರಾವ್​ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ
, ವಿದ್ಯಾರ್ಥಿನಿಗೆ ಆಗಿರುವ ಕಾನೂನು ಬಾಹಿರ ತೊಂದರೆಗೆ ಶಿಕ್ಷಣ ಸಂಸ್ಥೆ ಜವಾಬ್ದಾರಿ ಎಂದು ತಿಳಿಸಿರುವ ನ್ಯಾಯಪೀಠ ಮುಂದಿನ ಎರಡು ತಿಂಗಳಲ್ಲಿ ಪರಿಹಾರ ಮೊತ್ತ ಪಾವತಿಸಬೇಕು ಎಂದು ನಿರ್ದೇಶನ ನೀಡಿದೆ.

- Advertisement - 

ಅರ್ಜಿಗೆ ಸಂಬಂಧಿಸಿದಂತೆ ವಿವಿಯ ವಾದ ತಿರಸ್ಕರಿಸಿರುವ ನ್ಯಾಯಪೀಠ, ಮಂದಿನ ವರ್ಷ ಸೀಟು ನೀಡುವುದಾಗಿ ಕುಲಪತಿಗಳು ನೀಡಿದ್ದಾರೆ ಎಂಬ ಪತ್ರದಲ್ಲಿ ಕುಲಪತಿ, ಪ್ರಾಂಶುಪಾಲರು ಮತ್ತು ಅರ್ಜಿದಾರ ಸಂಜನಾ ಅವರ ಸಹಿಗಳಿವೆ. ಈ ಪತ್ರವನ್ನು ಬಲವಂತವಾಗಿ ಪಡೆದುಕೊಂಡಿದ್ದರೆ ಎಂಬುದರ ಸಂಬಂಧ ದೂರು ದಾಖಲಾಗಿಲ್ಲ. ಜತೆಗೆ, ಅರ್ಜಿದಾರರಾದ ಸಂಜನಾ ಅವರು ನಿಗದಿತ ದಿನಕ್ಕೂ ಮೊದಲೇ ಶುಲ್ಕ ಪಾವತಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಎಲ್ಲ ಅಗತ್ಯತೆಗಳನ್ನು ಪೂರೈಸಿದ್ದಾರೆ. ತಕ್ಷಣ ಬ್ಯಾಂಕ್​ ಗ್ಯಾರೆಂಟಿಯನ್ನೂ ನೀಡಿದ್ದಾರೆ. ಹೀಗಾಗಿ 15 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ನ್ಯಾಯಪೀಠವು ನೀಡಿರುವ ಮಹತ್ವದ ಆದೇಶದಲ್ಲಿ ತಿಳಿಸಿದೆ.

ಏನಿದು ಪ್ರಕರಣ:
2017ರಲ್ಲಿ ಅರ್ಜಿದಾರರಾದ ಸಂಜನಾ ಅವರು ಅಖಿಲ ಭಾರತ ಮಟ್ಟದ ನೀಟ್​ ಪರೀಕ್ಷೆಯಲ್ಲಿ 1,95,911 ರ‍್ಯಾಂಕ್‌ಪಡೆದುಕೊಂಡಿದ್ದರು. 2017ರ ಸೆಪ್ಟೆಂಬರ್​ ​ 1 ರಂದು ಸಿದ್ಧಾರ್ಥ ಅಕಾಡೆಮಿ ನಡೆಸಿದ್ದ ಕೌನ್ಸೆಲಿಂಗ್​​​ನಲ್ಲಿ ಮೂಲ ದಾಖಲೆಗಳು ಹಾಗೂ 15.6 ಲಕ್ಷ ರೂ. ಗಳ ಡಿಡಿಯೊಂದಿಗೆ ಭಾಗವಹಿಸಿದ್ದರು. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮೌಖಿಕವಾಗಿ ತಿಳಿಸಿದ್ದರೂ, ಈ ಸಂಬಂಧ ವಿದ್ಯಾರ್ಥಿನಿ ಮತ್ತು ಪೋಷಕರಿಗೆ ಯಾವುದೇ ರಸೀದಿ, ಸೀಟು ಹಂಚಿಕೆ ಪತ್ರ ನೀಡಿರಲಿಲ್ಲ.

- Advertisement - 

ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಕೆಲ ದಿನಗಳ ಬಳಿಕ 52 ಲಕ್ಷ ರೂ. ಗಳ ಬ್ಯಾಂಕ್​ ಗ್ಯಾರಂಟಿ ನೀಡಬೇಕು ಎಂದು ಒತ್ತಾಯಿಸಿತ್ತು. ಇದಕ್ಕೆ ಪ್ರತಿಯಾಗಿ 2017ರ ಸೆಪ್ಟಂಬರ್ 8 ರಂದು ವ್ಯವಸ್ಥೆ ಮಾಡಿ ವಿದ್ಯಾರ್ಥಿನಿ ಅದನ್ನೂ ಸಲ್ಲಿಸಿದ್ದರು. ಆದರೆ, ಈಗಾಗಲೇ ಪ್ರವೇಶಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪಟ್ಟಿ ಸಿದ್ದವಾಗಿದ್ದು, ಬ್ಯಾಂಕ್​ ಗ್ಯಾರಂಟಿ ಸ್ವೀಕರಿಸುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ ನಿರಾಕರಿಸಿದ್ದರ ವಿರುದ್ಧ ವಿದ್ಯಾರ್ಥಿನಿ ಸಂಜನಾ ಹೈಕೋರ್ಟ್​ ಮೆಟ್ಟಿಲೇರಿ ಪ್ರಶ್ನಿಸಿದ್ದರು.

ಅರ್ಜಿದಾರರ ಪರ ವಕೀಲರು ವಿಚಾರಣೆ ವೇಳೆ ಅರ್ಜಿದಾರರಿಗೆ ಸೀಟು ನೀಡುವುದಕ್ಕೆ ನಿರಾಕರಿಸಿದ್ದು, ಅವರಿಗಿಂತಲೂ ಕಡಿಮೆ ಪ್ರಮಾಣದ ರ‍್ಯಾಂಕ್‌​ ಪಡೆದಿದ್ದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬಳಿಕ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಉಚಿತ ಸೀಟು ನೀಡುವುದಾಗಿ ವಿವಿಯ ಕುಲಪತಿಗಳು ಭರವಸೆ ಪತ್ರ ನೀಡಿದ್ದರು.

ಆದರೆ, ಅದನ್ನು ಈಡೇರಿಸಿಲ್ಲ. ಇದರಿಂದ ಬೇರೆ ದಾರಿಯಿಲ್ಲದ ಪರಿಣಾಮ ಮತ್ತೆ 2018ರಲ್ಲಿ ಕೆಇಎ ಮೂಲಕ ಕೌನ್ಸಿಲಿಂಗ್​ಗೆ ಹಾಜರಾಗಿ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು ಕಾಲೇಜು ಶುಲ್ಕವಾಗಿ 24.2 ಲಕ್ಷ ರೂ. ಗಳ ಪಾವತಿ ಮಾಡಲಾಗಿದೆ ಎಂದು ಪೀಠಕ್ಕೆ ಮನವರಿಕೆ ಮಾಡಿ ತಿಳಿಸಿದ್ದರು.

ವಿದ್ಯಾರ್ಥಿನಿಯ ವಾದಕ್ಕೆ ಆಕ್ಷೇಪಿಸಿದ್ದ ವಿವಿ ಪರ ವಕೀಲರು, ಸಂಜನಾ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವಲ್ಲಿ ಸಾಕಷ್ಟು ವಿಳಂಬ ಮಾಡಿದ್ದಾರೆ. ಅಲ್ಲದೆ, ಕುಲಪತಿಗಳು ಭರವಸೆ ಪತ್ರ ನೀಡಿದ್ದಾರೆ ಎಂಬ ಅಂಶ ಸತ್ಯಕ್ಕೆ ದೂರವಾಗಿದೆ, ಆ ಪತ್ರ ನಕಲಿಯಾಗಿದೆ. ಬ್ಯಾಂಕ್​ ಗ್ಯಾರೆಂಟಿ ನೀಡುವಲ್ಲಿಯೂ ತಡವಾಗಿದ್ದು, ಶುಲ್ಕ ಪಾವತಿ ಮಾಡದೆ ಸೀಟು ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿ ಹೈಕೋರ್ಟ್ ಪೀಠಕ್ಕೆ ಕೋರಿಕೊಂಡಿದ್ದರು.

 

 

 

 

Share This Article
error: Content is protected !!
";