ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರೈತರ ಹಾಗೂ ಸಾರ್ವಜನಿಕರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಸದಸ್ಯರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು 2024-25ನೇ ಸಾಲಿನಲ್ಲಿ 46.34 ಲಕ್ಷ ಲಾಭಗಳಿಸಿದೆ ಎಂದು ಸಂಘದ ಪ್ರಭಾರ ಕಾರ್ಯದರ್ಶಿ ಕೆ.ಆನಂದ ಹೇಳಿದರು.
ಅವರು ನಗರದ ಒಕ್ಕಲಿಗರ ಸಂಘದಲ್ಲಿ ಗುರುವಾರ ನಡೆದ 2024-25ನೇ ಸಾಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಲೆಕ್ಕಪತ್ರ ಮಂಡಿಸಿ ಮಾತನಾಡಿದರು.
ಸರ್ಕಾರ ಸರಬರಾಜು ಮಾಡುವ ದರದಲ್ಲಿ ತಾಲ್ಲೂಕಿನ ರೈತರಿಗೆ ಸಕಾಲದಲ್ಲಿ ರಸಗೊಬ್ಬರವನ್ನು ಮಾರಾಟ ಮಾಡುವಲ್ಲಿ ಇಡೀ ಜಿಲ್ಲೆಯಲ್ಲೇ ಸಂಘವು ಪ್ರಥಮ ಸ್ಥಾನದಲ್ಲಿದೆ. ಸಾರ್ವಜನಿಕರಿಗೆ ಗೃಹಬಳಕೆಯ ಗುಣಮಟ್ಟದ ಹಾಗೂ ರಿಯಾಯಿತಿ ದರದಲ್ಲಿ ದಿನಸಿ ವಸ್ತುಗಳು ದೊರೆಯುವಂತೆ ನಗರದ ವಿವಿಧಡೆಗಳಲ್ಲಿನ 5 ಜತನಾ ಬಜಾರ್ ಶಾಖೆಗಳನ್ನು ತೆರೆಯಲಾಗಿದೆ.
ಶೇ10 ರಷ್ಟು ರಿಯಾಯಿತಿ ದರದಲ್ಲಿ ಜನರ ಆರೋಗ್ಯಕ್ಕೆ ಸಂಬಂಧಿಸಿದ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲವನ್ನು ತ್ವರಿತವಾಗಿ ನೀಡುವ ಮೂಲಕ ಆರ್ಥಿಕ ಪ್ರಗತಿಗೆ ಸಹಕಾರ ನೀಡಲಾಗುತ್ತಿದೆ. ಸಂಘದ ಲಾಭದ ಹಣದಲ್ಲಿ ಸದಸ್ಯರ ಹಾಗೂ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ನಗದು ಪ್ರೋತ್ಸವವನ್ನು ನೀಡಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದರು.
ವಾರ್ಷಿಕ ಸಭೆಯಲ್ಲಿ ಸಂಘದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಂಘದ ನಿರ್ದೇಶಕ ವಿ.ಆಂಜನೇಗೌಡ, ಎನ್.ರಂಗಪ್ಪ,ಚುಂಚೇಗೌಡ,80ರ ದಶಕದಲ್ಲಿ ಪ್ರಥಮ ಅಧ್ಯಕ್ಷರಾಗಿದ್ದ ಮಾಜಿ ಸಚಿವರಾದ ಜಿ.ರಾಮೇಗೌಡರಿಂದ ಪ್ರಾರಂಭವಾಗಿರುವ ಸಂಘವು ಪ್ರತಿ ವರ್ಷವು ವೃದ್ಧಿಯಾಗುತ್ತಲೇ ಬರುತ್ತಿದೆ.
ಇದಕ್ಕೆ ಬೆನ್ನೆಲುಬಾಗಿ ಸಂಘದ ಸದಸ್ಯರು ನಿಂತಿದ್ದಾರೆ. ಸಂಘವು ಮತ್ತಷ್ಟು ಅಭಿವೃದ್ದಿಯಾಗಲು ಹಾಗೂ ಸದಸ್ಯರಿಗೆ ಮತದಾನದ ಹಕ್ಕು ದೊರೆಯಲು ಕಡ್ಡಾಯವಾಗಿ ಸಂಘದಲ್ಲಿನ ವ್ಯಾಪಾರ ಮಳಿಗೆಗಳಲ್ಲಿ ವಹಿವಾಟು ನಡೆಸಬೇಕು ಹಾಗೂ ವಾರ್ಷಿಕ ಮಹಾಸಭೆಗಳಿಗೆ ಹಾಜರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಹಾಗೂ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ವೆಂಕಟೇಶ್ ವಹಿಸಿದ್ದರು. ಉಪಾಧ್ಯಕ್ಷ ಕೆ.ಸಿ.ಲಕ್ಷ್ಮೀನಾರಾಯಣ್, ನಿರ್ದೇಶಕರಾದ ಜಿ.ಮಾರೇಗೌಡ, ಡಿ.ಸಿದ್ದರಾಮಯ್ಯ, ಚಂದ್ರಕಲಾ, ಎಂ.ಗೋವಿಂದರಾಜು, ಎಸ್.ದಯಾನಂದ, ಲಕ್ಷ್ಮೀ, ಎಂ.ಆನಂದ, ಎ.ರಾಮಾಂಜಿನಪ್ಪ, ಎ.ಎನ್.ಹರೀಶ್ ಕುಮಾರ್ ಇದ್ದರು.

