ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವನ ವಿರುದ್ಧ ಕ್ರಮಕ್ಕೆ ಒತ್ತಾಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವನ ವಿರುದ್ಧ ಎಫ್‌ಐಆರ್ ದಾಖಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ತಿಳಿಸುವಂತೆ ಬೆಳಗಾವಿ ಎಸ್‌ಪಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಮಧ್ಯ ಪ್ರದೇಶದ ಸಚಿವ ವಿಜಯ್ ಶಾ ಅವರು ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿ, ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿ ಏಕೆ ಇಡೀ ಕರ್ನಾಟಕದ ಹೆಮ್ಮೆಯ ಸೊಸೆ. ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವನ ವಿರುದ್ಧ ಎಫ್‌ಐಆರ್ ಮಾಡಿಕೊಂಡು, ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ತಿಳಿಸುವಂತೆ ಬೆಳಗಾವಿ ಎಸ್‌ಪಿಗೆ ಸೂಚಿಸಿದ್ದೇನೆ. ಬಿಜೆಪಿ ಮುಖಂಡನ ಹೇಳಿಕೆ ಕರ್ನಲ್ ಖುರೇಷಿ ಅವರಿಗಷ್ಟೆ ಅವಮಾನದಂತೆ ಅಲ್ಲ. ಇಡೀ ದೇಶಕ್ಕೆ ಅವಮಾನ ಮಾಡಿದಂತೆ. ಇಂತಹ ಕೀಳು ಮನಸ್ಸು ಯಾರಿಗೂ ಬರಬಾರದು ಎಂದು ಗೃಹ ಸಚಿವರು ಅಭಿಪ್ರಾಯಪಟ್ಟರು. ಕೇಂದ್ರದಿಂದ ರಾಜ್ಯಕ್ಕೆ ನೀಡಬೇಕಿರುವ ಬಾಕಿ ಹಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಳೆದ ಎರಡು ವರ್ಷದಿಂದಲೂ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಮತ್ತಿತರ ಬಾಬ್ತುಗಳಿಗೆ ಬರಬೇಕಾದ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳುತ್ತಿದ್ದೇವೆ.

ಅನೇಕ ಕಾರಣಗಳಿಂದ ನಿಧಾನವಾಗುತ್ತಿದೆ. ಕೆಲವು ಸಂದರ್ಭದಲ್ಲಿ ಬರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ಸಭೆ ನಡೆಸಿದ್ದಾರೆ‌. ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಹಣ ಬಿಡುಗಡೆ ಮಾಡಿಸುವಂತೆ ರಾಜ್ಯದ ಸಂಸದರಿಗೆ ಮನವಿ ಮಾಡಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಐದೂವರೆ ಸಾವಿರ ಕೋಟಿ ರೂ. ತಕ್ಷಣ ಬರಬೇಕು. ರಾಜ್ಯ ಮತ್ತು ಕೇಂದ್ರದ ನಡುವೆ ಇರುವ ಸಂಬಂಧದ ನಿಯಮಗಳನ್ನು ಆಧರಿಸಿ ಒತ್ತಾಯ ಮಾಡಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು.
ಭರವಸೆ ನೀಡಿದ್ದ ಹಣ ಬಿಡುಗಡೆಯಾದರೆ ಅಭಿವೃದ್ಧಿಗೆ ಸಹಾಯವಾಗುತ್ತದೆ. ಹಣ ಬಿಡುಗಡೆ ಮಾಡುವಂತೆ ನಾನೂ ಸಹ ಒತ್ತಾಯಿಸುತ್ತೇನೆ ಎಂದು ಪರಮೇಶ್ವರ ತಿಳಿಸಿದರು.

ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿಯವರ ವತಿಯಿಂದ ಸಂಸದರಿಗೆ ಏನು ಗೌರವ ಕೊಡಬೇಕು ಕೊಟ್ಟಿದ್ದೇವೆ. ಆದರೂ ನಿನ್ನೆ ನಡೆದ ಸಭೆಗೆ ಸಂಸದರು ಯಾವ ಕಾರಣಕ್ಕಾಗಿ ಬಂದಿಲ್ಲವೋ ಅವರಿಗೆ ಗೊತ್ತಿರುತ್ತದೆ. ಕೆಲಸ-ಕಾರ್ಯಗಳಿರುವುದರಿಂದ ಬಂದಿರಲಿಕ್ಕಿಲ್ಲ. ಇದರಲ್ಲಿ ಎರಡು ಮಾತಿಲ್ಲ. ಯಾವ ಕಾರಣಕ್ಕಾಗಿ ಸಭೆಗೆ ಬಂದಿಲ್ಲ ಎಂಬುದು ನಮಗೆ ಗೊತ್ತಿಲ್ಲ‌ಎಂದರು. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇದೇ 20ರಂದು ನಡೆಯುವ ಸಮಾವೇಶ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಮುಖ್ಯವಾಗಿ ಕಂದಾಯ ಇಲಾಖೆಯಿಂದ 50 ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ. ಇದೊಂದು ಸರ್ಕಾರದ ಕಾರ್ಯಕ್ರಮ. ಲೋಕಸಭೆ ವಿರೋಧ ಪಕ್ಷ ನಾಯಕರಾದ ರಾಹುಲ್ ಗಾಂಧಿ, ರಾಜ್ಯಸಭಾ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸುರ್ಜೇವಾಲಾ ಭಾಗವಹಿಸಲಿದ್ದಾರೆ ಎಂದು ಪರಮೇಶ್ವರ ಮಾಹಿತಿ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಸಕ್ತಿಯಿಂದ ಮಾಡಿರುವ ಗ್ರೇಟರ್ ಬೆಂಗಳೂರು ಕಲ್ಪನೆ ಯಶಸ್ವಿಯಾಗಲಿ. ಪ್ರಪಂಚದಲ್ಲಿ ಅನೇಕ ದೊಡ್ಡ ದೊಡ್ಡ ನಗರಗಳನ್ನು ನೋಡಿದ್ದೇವೆ. ಈ ಕಾನ್ಸೆಪ್ಟ್ ಯಾವ ರೀತಿ ಕೆಲಸ ಮಾಡಿದೆ ಎಂಬುದು ಗೊತ್ತಿದೆ. ಇಂದಿನಿಂದ ಪ್ರಾರಂಭವಾಗುತ್ತಿದ್ದು, ನ್ಯೂನತೆಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ. ಗ್ರೇಟರ್ ಬೆಂಗಳೂರಿನಿಂದ ಯೋಜನೆಗಳನ್ನು ನೀಡಲು, ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಹರಿಸಲು ಅನುಕೂಲವಾಗುತ್ತದೆ ಎಂಬುದು ಮುಖ್ಯ ಉದ್ದೇಶ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

 

Share This Article
error: Content is protected !!
";