ವಕ್ತಾರರು ಬೇಕಾಗಿದ್ದಾರೆ, ವಿದ್ಯಾರ್ಹತೆ: ಯಾವುದೇ ಅಕ್ಷರ ಜ್ಞಾನದ ಅವಶ್ಯಕತೆ ಇಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಕ್ತಾರರು ಬೇಕಾಗಿದ್ದಾರೆ. ದಯವಿಟ್ಟು ಗಮನಿಸಿ, ವಕ್ತಾರರ ಹುದ್ದೆಗಳು ಖಾಲಿ ಇವೆ. ಆಸಕ್ತರು ಅರ್ಜಿ ಸಲ್ಲಿಸಬಹುದು…… ಹುದ್ದೆಗಳ ಸಂಖ್ಯೆ : ಅನಿಯಮಿತ, ವಿದ್ಯಾರ್ಹತೆ : ಯಾವುದೇ ಅಕ್ಷರ ಜ್ಞಾನದ ಅವಶ್ಯಕತೆ ಇಲ್ಲ. ಸೇವಾ ಮನೋಭಾವ ಮಾತ್ರ. ಮೀಸಲಾತಿ : ಮನುಷ್ಯ ಎನಿಸಿಕೊಳ್ಳುವ ಎಲ್ಲರಿಗೂ ಅವಕಾಶವಿದೆ. ವಯಸ್ಸು : ಕನಿಷ್ಠ 25 ವರ್ಷ. ಗರಿಷ್ಠ ಮಿತಿ ಇಲ್ಲ.

- Advertisement - 

ಸಂಬಳ : ಯಾವುದೇ ನಿರೀಕ್ಷೆ ಬೇಡ. ಕೆಲವೊಮ್ಮೆ ಸ್ವಂತ ಹಣ ಖರ್ಚು ಮಾಡಬೇಕಾಗಿ ಬರಬಹುದು.
ಕಾರ್ಯವ್ಯಾಪ್ತಿ : ಭಾರತ ದೇಶದ ಯಾವುದೇ ಸ್ಥಳದಲ್ಲಿ ಕೆಲಸ ನಿರ್ವಹಿಸಬೇಕಾಗಬಹುದು. ವರ್ಗಾವಣೆ : ನಿಮ್ಮ ಇಚ್ಛೆಗೆ ಅನುಗುಣವಾಗಿ. ಸಮಯ : ದಿನದ
24 ಗಂಟೆಗಳು ಮತ್ತು ವರ್ಷದ 365 ದಿನಗಳು, ನಿಮ್ಮ ಅನುಕೂಲಕ್ಕೆ ತಕ್ಕಂತೆ. ಕಾರ್ಯ ವಿಧಾನ ಮತ್ತು ಹುದ್ದೆಯ ಹೆಸರು……

- Advertisement - 

1) ಭಾರತ ದೇಶದ ವಕ್ತಾರರು. 2) ಭಾರತದ ಜನತೆಯ ವಕ್ತಾರರು. 3) ಭಾರತೀಯ ಸಂಸ್ಕೃತಿಯ ವಕ್ತಾರರು. 4) ಭಾರತೀಯ ಭಾಷೆಗಳ ವಕ್ತಾರರು. 5) ಭಾರತೀಯ ಪರಿಸರದ ವಕ್ತಾರರು. 6) ಭಾರತೀಯ ಮೌಲ್ಯಗಳ ವಕ್ತಾರರು. 7) ಮಾನವೀಯ ಮೌಲ್ಯಗಳ ವಕ್ತಾರರು. 8) ಶೋಷಿತ ಸಮುದಾಯಗಳ ವಕ್ತಾರರು. 9) ಅನ್ನದಾತರ ವಕ್ತಾರರು. 10) ಬಾಲ ಕಾರ್ಮಿಕರ ವಕ್ತಾರರು.

ಏಕೆಂದರೆ, ಒಂದಷ್ಟು ಮಾತು, ಒಂದಷ್ಟು ಅಕ್ಷರ, ಒಂದಷ್ಟು ಅರಿವು, ಒಂದಷ್ಟು ಧೈರ್ಯ, ಒಂದಷ್ಟು ಹಣ, ಒಂದಷ್ಟು ಅಧಿಕಾರ, ಒಂದಷ್ಟು ಸಂಪರ್ಕ, ಒಂದಷ್ಟು ಚಾತುರ್ಯ, ಒಂದಷ್ಟು ಕಲೆಗಾರಿಕೆ, ಒಂದಷ್ಟು ಅಧ್ಯಯನ, ಒಂದಷ್ಟು ಜ್ಞಾಪಕ ಶಕ್ತಿ, ಹೀಗೆ ಒಂದಷ್ಟು ಜ್ಞಾನ ಮೂಡಿದರೆ, ಯಾವುದೋ ಪಕ್ಷದ, ಯಾವುದೋ ಜಾತಿಯ, ಯಾವುದೋ ಧರ್ಮದ, ಯಾವುದೋ ಭಾಷೆಯ, ಯಾವುದೋ ಕಂಪನಿಯ, ಯಾವುದೋ ಸಂಘಟನೆಯ, ಯಾವುದೋ ಬೇಡಿಕೆಯ, ಯಾವುದೋ ವಸ್ತುವಿನ, ವಕ್ತಾರರಾಗಲು ಸಾಕಷ್ಟು ಜನರಿದ್ದಾರೆ……

- Advertisement - 

ಹೊಟ್ಟೆ ಪಾಡಿಗಾಗಿಯೋ, ಬದುಕಿನ ಅನಿವಾರ್ಯತೆಗಾಗಿಯೋ, ಸಾಧನೆಯ ಉದ್ದೇಶದಿಂದಲೋ, ಅಧಿಕಾರದ ಆಸೆಗಾಗಿಯೋ, ಪ್ರಶಸ್ತಿಯ ಕನಸಿನಲ್ಲಿಯೋ, ವ್ಯಾವಹಾರಿಕ ಚತುರತೆಯಿಂದಲೋ, ವಕ್ತಾರರಾಗುವವರು ಸಹ ಸಾಕಷ್ಟು ಜನರಿದ್ದಾರೆ….

ಮಾಧ್ಯಮಗಳ ಮುಖಾಂತರ, ಸಾಮಾಜಿಕ ಜಾಲತಾಣಗಳ ಮುಖಾಂತರ, ಲಲಿತ ಕಲೆಗಳ ಮುಖಾಂತರ, ಪ್ರಖ್ಯಾತರಾದವರು ಒಂದು ಹಂತದ ನಂತರ ವಕ್ತಾರರಾಗುವುದನ್ನು ಕಾಣುತ್ತಿದ್ದೇವೆ……

ವಕ್ತಾರರ ಮೂಲ ನಿಯಮ, ತಮ್ಮ ವಸ್ತು, ವಿಚಾರ, ಸಿದ್ದಾಂತ, ವ್ಯಕ್ತಿಗೆ ನಿಷ್ಠರಾಗಿ ಅದನ್ನು ಸಮರ್ಥಿಸಿಕೊಳ್ಳುವುದು, ಎಷ್ಟೇ ತಪ್ಪು ಮಾಡಿದರು ಅದರ ಪರವಾಗಿ ನಿಲ್ಲುವುದು. ‌ಆದರೆ ನಾವು ಸೃಷ್ಟಿಸುತ್ತಿರುವ ವಕ್ತಾರರ ಕೆಲಸ ಸತ್ಯ ಮತ್ತು ವಾಸ್ತವದ ಹುಡುಕಾಟ ಮತ್ತು ನಿಷ್ಪಕ್ಷಪಾತ ಧೋರಣೆ. ಸ್ವ ಹಿತಾಸಕ್ತಿಗಿಂತ ಜೀವಪರ ನಿಲುವುಗಳೇ ಮುಖ್ಯವಾಗಬೇಕು……

ಈ ಆಧುನಿಕ ಮಾರುಕಟ್ಟೆಯಲ್ಲಿ ಕೆಲವು ವಕ್ತಾರರು ಮಾರಾಟವಾಗುತ್ತಿದ್ದಾರೆ. ಇತರರನ್ನು ವಂಚಿಸುವುದಕ್ಕಿಂತ ತನ್ನನ್ನೇ ವಂಚಿಸಿಕೊಳ್ಳುವುದು ಅತ್ಯಂತ ಹೇಯ ಮಾನವೀಯ ನಡವಳಿಕೆ “

ಆದ್ದರಿಂದ ಇಂದಿನ ಅವಶ್ಯಕತೆ ಈ ಸಮಾಜದ ಎಲ್ಲಾ ಒಳ್ಳೆಯ ಗುಣಗಳ ವಕ್ತಾರರಾಗುವವರು ನಾವಾಗಬೇಕು. ಪ್ರತಿ ವ್ಯಕ್ತಿಯು ತನ್ನ ನೆಲೆಯಲ್ಲಿ ತಾನೇ ಆತ್ಮಸಾಕ್ಷಿಯ ವಕ್ತಾರರಾಗುವುದು ಸಾಧ್ಯವಾಗುವುದಾದರೆ ಇಡೀ ಸಮಾಜ ಒಂದು ಮಾದರಿಯಾಗುತ್ತದೆ…..

ಇದಕ್ಕಾಗಿ ನೀವು ಯಾವುದೇ ಹಣ ಖರ್ಚು ಮಾಡಬೇಕಾಗಿಲ್ಲ, ಶ್ರಮ ಪಡಬೇಕಾಗಿಲ್ಲ, ಅಧ್ಯಯನ ಮಾಡಬೇಕಾಗಿಲ್ಲ, ಕೇವಲ ಒಂದಷ್ಟು ಒಳ್ಳೆಯತನ ಮತ್ತು ವಿಶಾಲ ಮನೋಭಾವ ಹೊಂದಿದ್ದರೆ ಸಾಕು. ಯಾರು ಬೇಕಾದರು, ಯಾವಾಗ ಬೇಕಾದರು ವಕ್ತಾರರಾಗಬಹುದು…..

ಅದಕ್ಕಾಗಿ ಸಂಪರ್ಕಿಸಬೇಕಾದ ವಿಳಾಸ : ನಮ್ಮದೇ ಮನಸ್ಸುಗಳ ಅಂತರಂಗ. ಲೇಖನ:ವಿವೇಕಾನಂದ. ಎಚ್. ಕೆ. 9663750451

 

Share This Article
error: Content is protected !!
";