ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ಸಹಯೋಗದೊಂದಿಗೆ ಅಂಗನವಾಡಿ ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶ ಒದಗಿಸಲು, ರಾಗಿ ಹೆಲ್ತ್ ಮಿಕ್ಸ್ ನೀಡಲು ಯೋಜಿಸುತ್ತಿದೆ.
ಸದ್ಯ ಸರ್ಕಾರಿ ಶಾಲೆಗಳಿಗೆ ಪೌಷ್ಟಿಕಾಂಶ ಭರಿತ ಮಿಶ್ರಣವನ್ನು ಪೂರೈಸಲು ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿದೆ. ತೀವ್ರ ಅಪೌಷ್ಟಿಕತೆ ಮತ್ತು ಮಧ್ಯಮ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಮೇಲೆ ವಿಶೇಷ ಗಮನಹರಿಸುವ ಮೂಲಕ ಈ ಕಾರ್ಯಕ್ರಮವನ್ನು ಅಂಗನವಾಡಿ ಮಕ್ಕಳಿಗೆ ವಿಸ್ತರಿಸುವ ಯೋಜನೆ ಈಗ ಇದೆ. ಜುಲೈ ವೇಳೆಗೆ ಕಾರ್ಯಕ್ರಮ ಆರಂಭವಾಗುವ ನಿರೀಕ್ಷೆ ಇದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಯಾದಗಿರಿ, ಚಾಮರಾಜನಗರ, ಬಾಗಲಕೋಟೆ, ಹಾವೇರಿ ಮತ್ತು ಧಾರವಾಡದಂತಹ ಜಿಲ್ಲೆಗಳಾದ್ಯಂತ ಸುಮಾರು 4,000 ಮಕ್ಕಳಿಗೆ ಮೊಟ್ಟ ಮೊದಲಿಗೆ ಹೆಲ್ತ್ ಮಿಕ್ಸ್ ನೀಡುವ ಯೋಜನೆಯಿದೆ ಎಂದು ಹಿರಿಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುಂದಿನ ಒಂದು ವರ್ಷದೊಳಗೆ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕ್ರಮ ವಿಸ್ತರಿಸಲು ಇಲಾಖೆ ಯೋಜಿಸುತ್ತಿದೆ. ಈ ವಿಸ್ತರಣೆಯು ರಾಜ್ಯದಾದ್ಯಂತ ಪೌಷ್ಠಿಕಾಂಶದ ಬೆಂಬಲದ ವ್ಯಾಪ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಟ್ರಸ್ಟ್ ನಡೆಸುತ್ತಿರುವ ಶ್ರೀ ಮಧುಸೂದನ್ ಸಾಯಿ ಗ್ಲೋಬಲ್ ಹ್ಯುಮಾನಿಟೇರಿಯನ್ ಮಿಷನ್‌ನ ಸಂಸ್ಥಾಪಕ ಶ್ರೀ ಮಧುಸೂದನ್ ಸಾಯಿ ಮಾತನಾಡಿ ಮಕ್ಕಳಿಗೆ ಪೌಷ್ಟಿಕಾಂಶವನ್ನು ಸುಧಾರಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ. ಇದು ಸಾಯಿಸೂರ್ ಮಾಲ್ಟ್ ಮಲ್ಟಿ-ನ್ಯೂಟ್ರಿಯೆಂಟ್ ಹೆಲ್ತ್ ಮಿಕ್ಸ್ ಆಗಿದೆ. ಹಾಲಿಗೆ ಸೇರಿಸಲು ವಿನ್ಯಾಸಗೊಳಿಸಲಾಗಿದೆ. ರಾಗಿ ಮತ್ತು ಬೆಲ್ಲದ ಮಿಶ್ರಣದ ಪೋಷಕಾಂಶಗಳನ್ನು ಹೊಂದಿದೆ.
ಈ ಮಿಶ್ರಣವು ಅಗತ್ಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಮಿಶ್ರಣವನ್ನು ಒಂದು ಲೋಟ ಹಾಲಿನೊಂದಿಗೆ ಬೆರೆಸುವ ಅಗತ್ಯವಿದೆ. ಸರ್ಕಾರವು ಈಗಾಗಲೇ ಹಾಲು ನೀಡುತ್ತಿರುವುದರಿಂದ, ಇದು ಸರ್ಕಾರದ ಯೋಜನೆಗಳಿಗೆ ಪೂರಕವಾಗಿದೆ, ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪ್ರಮುಖ ಪೋಷಕಾಂಶಗಳನ್ನು ಪಡೆಯಬಹುದಾಗಿದೆ ಎಂದು ಅವರು ಹೇಳಿದರು. ರಾಗಿ ಚಿಕ್ಕಿ ಮತ್ತು ಲಡ್ಡೂಗಳಂತಹ ಉತ್ಪನ್ನಗಳ ವಿಸ್ತರಿಸಲು ಟ್ರಸ್ಟ್ ಯೋಜಿಸುತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರ್ಷದ ಬಜೆಟ್‌ನಲ್ಲಿ ಸರ್ಕಾರಿ ಶಾಲೆಗಳಲ್ಲಿ ಪೌಷ್ಠಿಕಾಂಶ ಕಾರ್ಯಕ್ರಮಕ್ಕಾಗಿ ಶೇ. 25 ರಷ್ಟು ವೆಚ್ಚವನ್ನು ಕರ್ನಾಟಕ ಸರ್ಕಾರ ಭರಿಸಲಿದ್ದು, ಉಳಿದ 75% ಅನ್ನು ಟ್ರಸ್ಟ್ ಭರಿಸಲಿದೆ ಎಂದು ಘೋಷಿಸಿದ್ದರು. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂಬರುವ ಕಾರ್ಯಕ್ರಮಕ್ಕೆ ಅನುದಾನ ನೀಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿದು ಬಂದಿದೆ.