ಕ್ಯಾನ್ಸರ್ ರೋಗ ತಪಾಸಣೆ ಮಾಡಿಕೊಳ್ಳಿ-ಡಾ.ಶ್ವೇತಾ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿಂಜರಿಕೆ, ಕೀಳರಿಮೆ, ಸಂಕೋಚ ಬಿಟ್ಟು ಕ್ಯಾನ್ಸರ್ ರೋಗದ ತಪಾಸಣೆ ಮಾಡಿಸಿಕೊಳ್ಳಿ ಎಂದು ಜಿಲ್ಲಾ ಎನ್ಸಿಡಿ ಕನ್ಸ್ಲ್ಟೆಂಟ್ ಡಾ.ಶ್ವೇತಾ ಹೇಳಿದರು.

ಇಲ್ಲಿನ ಮುರುಘ ರಾಜೇಂದ್ರ ನಗರ ಬಿಸಿಎಂ ಹಾಸ್ಟೆಲ್ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,  ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನರಲ್ಲಿ ಇಂದಿಗೂ ಸಹ ಆತಂಕ ಮತ್ತು ಭಯಕ್ಕೆ ಕಾರಣವಾಗುವ ಅತಿ ದೊಡ್ಡ ಮತ್ತು ಹೆಚ್ಚುತ್ತಿರುವ ರೋಗಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಸಾಮಾನ್ಯವಾಗಿ ಸ್ಥನದ ಕ್ಯಾನ್ಸರ್ ಗರ್ಭಕಂಠ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಪ್ರಮುಖವಾಗಿ ಭಾರತದಲ್ಲಿ ಆರೋಗ್ಯ ಸಮಸ್ಯೆಗಳಾಗಿವೆ. ಕಾಲ ಕಾಲಕ್ಕೆ ತಪಾಸಣೆ ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದು. ಪೌಷ್ಟಿಕ ಆಹಾರ ಸೇವನೆ ಜೀವನಶೈಲಿ ಬದಲಾವಣೆ ಮಾಡಿಕೊಳ್ಳುವುದರಿಂದ ನಾವು ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಬಹುದು ಎಂದರು.

ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿ ಮಠ ಮಾತನಾಡಿ, ಮಾರ್ಚ್ 1ರಿಂದ ಗೃಹ ಆರೋಗ್ಯ ಯೋಜನೆ ನಿಮ್ಮ ಮನೆ ಮನೆಗೆ ಆರೋಗ್ಯ ಸೇವೆ ಒದಗಿಸುವ ಸಮುದಾಯ ಆರೋಗ್ಯ ಅಧಿಕಾರಿಗಳು,  ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು,  ಆರೋಗ್ಯ ನಿರೀಕ್ಷಣಾಧಿಕಾರಿಗಳು,  ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಪ್ರತಿ ದಿನ 30 ಮನೆಗಳನ್ನ ನಿಗದಿಗೊಳಿಸಿಕೊಂಡು 30 ವರ್ಷ ಮೇಲ್ಪಟ್ಟ ಕುಟುಂಬದ ಎಲ್ಲಾ ಸದಸ್ಯರಿಗೂ ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಪರೀಕ್ಷೆಗಳು ತಪಾಸಣೆ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಾರೆ. ಅದರೊಂದಿಗೆ ಕ್ಯಾನ್ಸರ್ ರೋಗದ ಬಗ್ಗೆ ಲಕ್ಷಣಗಳನ್ನು ತಿಳಿಸುತ್ತಾ ಉನ್ನತ ಮಟ್ಟದ ಚಿಕಿತ್ಸೆಗೆ ನಿರ್ದೇಶನ ಮಾಡಲು ನೆರವಾಗುತ್ತಾರೆ. ಎಲ್ಲಾ ಕುಟುಂಬಗಳು ಇವರೊಂದಿಗೆ ಸಹಕರಿಸಿ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು. ಸುಟ್ಟ, ಹುರಿದ ಬಣ್ಣ ಬಣ್ಣದ ಆಹಾರಗಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರಬಹುದು. ಅಲ್ಲದೆ ಯುವಕರು ಗುಟ್ಕಾ ತಂಬಾಕು ಜಗಿಯುವುದು, ಮದ್ಯಪಾನ, ಧೂಮಪಾನ ಮಾಡುವುದು ಇಂತಹ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಿ. ಆದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಕ್ಯಾನ್ಸರ್ ಚಿಕಿತ್ಸೆ ತುಂಬಾ ದುಬಾರಿ ಚಿಕಿತ್ಸೆ ಆಗಿರುತ್ತದೆ. ಕುಟುಂಬದ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ದುಶ್ಚಟಗಳ ವ್ಯಸನಿಗಳಾಗದೆ ಕ್ಯಾನ್ಸರ್ ಬರದಂತೆ ಜಾಗೃತೆ ವಹಿಸಿ ಎಂದರು.

ಕಾರ್ಯಕ್ರಮದಲ್ಲಿ ಬಿಸಿಎಂ ವಸತಿ ನಿಲಯ ನಿಲಯ ಪಾಲಕ ಆನಂದ್ ರಾಜ್, ಸಮುದಾಯ ಆರೋಗ್ಯ ಅಧಿಕಾರಿ ಜಯಲತಾ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶಿಲ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ್, ರಾಷ್ಟ್ರೀಯ ಬಾಲ್ಯಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ.ಮಹೇಂದ್ರ, ಸಾರ್ವಜನಿಕರು, ಹಾಸ್ಟೆಲ್ ವಿದ್ಯಾರ್ಥಿಗಳು ಇದ್ದರು.

 

- Advertisement -  - Advertisement -  - Advertisement - 
Share This Article
error: Content is protected !!
";