ಎರಡು ವರ್ಷಗಳಲ್ಲಿ ಕಂದಾಯ ಸೇವೆಗಳಲ್ಲಿ ಮಹತ್ವದ ಸುಧಾರಣೆ- ಮುಖ್ಯಮಂತ್ರಿ ಸಿದ್ದರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೃಷಿಯೇ ದೇಶದ ಬೆನ್ನಲಬು. ನಮ್ಮ ದೇಶ ಹಳ್ಳಿಗಳಿಂದ ಕೂಡಿದೆ. ನಾವೆಲ್ಲರೂ ಹಳ್ಳಿಗಳಿಂದ ಬಂದಿದ್ದೇವೆ. ಹಳ್ಳಿಗಳಲ್ಲಿ ಶೇಕಡ 60 ರಷ್ಟು ಜನ ರೈತರಿದ್ದಾರೆ. ಅವರ ಹಿತ ಕಾಯುವುದು ನಮ್ಮ ಕರ್ತವ್ಯ. ಅವರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು. ಗ್ರಾಮ ಆಡಳಿತಾಧಿಕಾರಿಗಳ ಪ್ರಮುಖ ಕರ್ತವ್ಯ ರೈತರ ಹಿತ ಕಾಯುವುದು. ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯು ಮಹತ್ವದ ಹುದ್ದೆಯಾಗಿದೆ. ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು ರೈತರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ನೂತನವಾಗಿ ನೇಮಕಾತಿ ಹೊಂದಿರುವ ಗ್ರಾಮಾಡಳಿತಾಧಿಕಾರಿಗಳಿಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದರು.

ಕಂದಾಯ ಇಲಾಖೆಯ ವತಿಯಿಂದ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನವಾಗಿ ಆಯ್ಕೆಯಾಗಿರುವ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಾಕತಿ ಆದೇಶ ವಿತರಣೆ, ಅಭಿಶಿಕ್ಷಣ ತರಬೇತಿ ಮತ್ತು 4 ಸಾವಿರ ಗೂಗಲ್ ಕ್ರೋಮ್ ಬುಕ್ (ಲ್ಯಾಪ್ ಟಾಪ್) ವಿತರಣೆ ಹಾಗೂ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ  ರಾಜ್ಯದಲ್ಲಿ ಸುಮಾರು  6.33 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಯಾವುದೇ ಲಂಚವಿಲ್ಲದೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ  ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆ.ಇ.ಎ) ಮೂಲಕ ನೇರವಾಗಿ  ಪರೀಕ್ಷೆ ಬರೆದು, ಮೆರಿಟ್ ಮತ್ತು ಮೀಸಲಾತಿ ಮೂಲಕ ಆಯ್ಕೆಯಾಗಿರುವ 1000 ಅಭ್ಯರ್ಥಿಗಳು  ಪುಣ್ಯವಂತರು ಎಂದರು.

ರಾಜ್ಯದಲ್ಲಿ 8,834 ಗ್ರಾಮ ಆಡಳಿತಾಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದು, ಈಗ ಆಯ್ಕೆಯಾಗಿರುವವರು ಸೇರಿ 9,834 ಗ್ರಾಮ ಆಡಳಿತಾಧಿಕಾರಿಗಳು ಕೆಲಸ ನಿರ್ವಹಿಸುತ್ತಾರೆ.  ಉಳಿದ 500 ಗ್ರಾಮ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಆನ್‍ಲೈನ್ ಮೂಲಕ ದಾಖಲಾತಿ ಒದಗಿಸುತ್ತಿರುವುದರಿಂದ ಮೊದಲ ಹಂತದಲ್ಲಿ 4 ಸಾವಿರ ಕ್ರೋಮ್‍ಬುಕ್ ಲ್ಯಾಪ್ ಟಾಪ್ ವಿತರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ  ಉಳಿದವರಿಗೂ ವಿತರಿಸಲಾಗುವುದು ಎಂದರು.

ಭೂಮಿ ಲೆಕ್ಕ ಇಡುವುದು ಗ್ರಾಮ ಆಡಳಿತಾಧಿಕಾರಿಗಳ ಜವಾಬ್ದಾರಿ.  ಹಳ್ಳಿಗಾಡಿನ ಜನರು ಶಾಂತಿ ನೆಮ್ಮದಿಯಿಂದ ಇರಬೇಕಾದರೆ, ರೆಕಾರ್ಡ್ ಕರಾರುವಕ್ಕಾಗಿ ಇರಬೇಕು.  ಆಧುನಿಕ ಭಾರತದಲ್ಲಿ ತಂತ್ರಜ್ಞಾನ, ವಿಜ್ಞಾನ ಬೆಳೆದಿದೆ.  ಡಿಜಿಟಲೀಕರಣ ಬಂದ ಮೇಲೆ ಈಗ ಭೌತಿಕ ರೂಪದಲ್ಲಿ ದಾಖಲೆಗಳನ್ನು ಶೇಕರಣೆ ಮಾಡುವ ಅಗತ್ಯತೆ ಇಲ್ಲ.  ಆನ್‍ಲೈನ್‍ನಲ್ಲೇ ಎಲ್ಲಾ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಬಂದಿದೆ. ಯಾವ ಕಾರಣಕ್ಕೂ ಡಿಜಿಟಲೀಕರಣ ಮಾಡುವಾಗ ತಪ್ಪುಗಳಾಗದಂತೆ ಎಚ್ಚರ ವಹಿಸಿ ಕೆಲಸ ನಿರ್ವಹಿಸಿ ರೈತರ ಹಿತ ಕಾಪಾಡುವುದು ನಿಮ್ಮೆಲ್ಲರ ಜವಬ್ದಾರಿ ಎಂದು ತಿಳಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ಹುದ್ದೆಯ ಮಹತ್ವವನ್ನು ಅರಿತುಕೊಳ್ಳಬೇಕು. ನಿಮ್ಮ ಮತ್ತು ರೈತರ ಸಂಬಂಧ ಉತ್ತಮವಾಗಿರಬೇಕು. ಪ್ರತೊಯೊಬ್ಬ ರೈತರ ಪರಿಚಯದೊಂದಿಗೆ ಭೂಮಿಗೆ ಬೇಕಾಗುವ ದಾಖಲೆಗಳನ್ನು ರೈತರಿಗೆ ಒದಗಿಸಿಕೊಡಬೇಕು. ಹಿಂದೆ ಶಾನುಭೋಗರು ಇದ್ದರು ಅವರೀಗ ಗ್ರಾಮ ಆಡಳಿತಾಧಿಕಾರಿಗಳಾಗಿದ್ದಾರೆ. ಆಗಿನ ಕಾಲದಲ್ಲಿ ಶಾನುಭೋಗರು ಅಂದರೆ ರೈತರಿಗೆ ಗುರುಗಳು ಇದ್ದಂತೆ, ಅವರು ಹೇಳುವುದೇ ಅಂತಿಮವಾಗಿತ್ತು ಎಂದರು.
ರಾಜ್ಯದಲ್ಲಿ ಸುಮಾರು 6 ಲಕ್ಷ ಸರ್ಕಾರಿ ನೌಕರರಿದ್ದು, ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರು ಜನರ ಕೆಲಸ ದೇವರ ಕೆಲಸ ಎಂದು ನೆನಪಿಟ್ಟುಕೊಂಟು ಜನಪರ ಸೇವೆ ಮಾಡಬೇಕೆಂದರು.

ಕಂದಾಯ ಇಲಾಖೆಯ ಜವಾಬ್ದಾರಿಯನ್ನು ಕೃಷ್ಣ ಬೈರೇಗೌಡ ಅವರಿಗೆ ವಹಿಸುವಾಗ ಇಲಾಖೆಯ ಸುಧಾರಣೆ ಮಾಡುವಂತೆ ಸೂಚಿಸಿದ್ದೆ, ಅದರಂತೆ ಅವರು ಕೆಲವು ಸುಧಾರಣೆ ಮಾಡಿದ್ದು, ಇನ್ನೂ ಕೆಲವು ಸುಧಾರಣೆಯಾಗಬೇಕು ಅದನ್ನು ಮಾಡುತ್ತೇವೆ ಎಂದರು.

ನಮ್ಮ ರಾಜ್ಯದಲ್ಲಿ ಸಣ್ಣ ಇಡುವಳಿದಾರರು ಹೆಚ್ಚಾಗಿ ಇದ್ದು, ವ್ಯವಸಾಯ ಲಾಭದಾಯಕ ಕಸುಬಾಗಿರದೆ ಇರುವುದರಿಂದ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಆಡಳಿತಾಧಿಕಾರಿಗಳು ಅನ್ನದಾತ ರೈತರಿಗೆ ಯಾವುದೇ ಕಿರುಕುಳ ನೀಡದೆ, ಅವರ ಜೊತೆ ಉತ್ತಮ  ಬಾಂಧವ್ಯ ಬೆಳೆಸಿಕೊಂಡು, ಕಂದಾಯ ಇಲಾಖೆಗೆ ತಂದಿರುವ ಸುಧಾರಣೆಗಳನ್ನು ಬಳಸಿಕೊಂಡು ಪ್ರಾಮಾಣಿಕ ಸೇವೆ ಮಾಡುವುದೇ, ನಾಡಿಗೆ ಕೋಡುವ ಕೊಡುಗೆ ಎಂದು ನೂತನ ಗ್ರಾಮ ಆಡಳಿತಾಧಿಕಾರಿಗಳಿಗೆ ಶುಭವಾಗಲಿ ಎಂದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 30 ಜನರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದರು. ಗೂಗಲ್ ಕ್ರೋಮ್ ಬುಕ್ (ಲ್ಯಾಪ್ ಟಾಪ್) ವಿತರಣೆ ಹಾಗೂ ಸಾಧನೆಯ ಹಾದಿಯಲ್ಲಿ ಪುಸ್ತಕ ಬಿಡುಗಡೆ ಮಾಡಿದರು.

 

Share This Article
error: Content is protected !!
";