ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಕೇಳಿ ಬಂದಿರುವ ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಕುರಿತ ಆದೇಶ ಸದ್ಯಕ್ಕಿಲ್ಲ. ತನಿಖೆ ಮುಂದುವರೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾ. ಸಂತೋಷ್ ಗಜಾನನ ಭಟ್ ಅವರಿದ್ದ ಪೀಠ ಸೂಚನೆ ನೀಡಿದೆ.
ಜಾರಿ ನಿರ್ದೇಶನಾಲಯ(ಇಡಿ) ಕೂಡಾ ತಕರಾರು ಅರ್ಜಿ ಸಲ್ಲಿಸಬಹುದು. ಲೋಕಾಯುಕ್ತ ಪೊಲೀಸರ ಅಂತಿಮವರದಿ ಬಳಿಕವೇ ಬಿ ರಿಪೋರ್ಟ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
ಲೋಕಾಯುಕ್ತ ಪೊಲೀಸರು ತನಿಖೆ ಇನ್ನೂ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಲು ಸೂಚನೆ ನೀಡಿ ಮೇ 7 ಕ್ಕೆ ಕೋರ್ಟ್ ವಿಚಾರಣೆ ಮುಂದೂಡಿದೆ.
ಸರ್ಕಾರಕ್ಕೆ ಛೀಮಾರಿ:
ಮುಖ್ಯಮಂತ್ರಿಗಳ ಕುಟುಂಬವನ್ನು ಲೋಕಾಯುಕ್ತ ಅಧಿಕಾರಿಗಳು ರಕ್ಷಣೆ ಮಾಡಲು ತನಿಖೆ ಪೂರ್ಣಗೊಳಿಸದೆ ವರದಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಕೋರ್ಟ್, ಅಂತಿಮ ವರದಿ ಸಲ್ಲಿಸುವಂತೆ ಸೂಚಿಸಿದೆ. ತನಿಖಾಧಿಕಾರಿಗಳಿಗೆ ತನಿಖೆಯ ಬಗ್ಗೆ ತಿಳಿದಿಲ್ಲ. ನ್ಯಾಯಾಲದ ಇಂದಿನ ಆದೇಶ ಸರ್ಕಾರಕ್ಕೆ ಛೀಮಾರಿ ಹಾಕಿದಂತಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗ ಪಡಿಸಿಕೊಂಡು ಕೇಸ್ ಮುಚ್ಚಿ ಹಾಕುವ ಪ್ರಯತ್ನಕ್ಕೆ ನಾನು ಅವಕಾಶ ಕೊಡಲ್ಲ. ನನ್ನ ಬಳಿ ಇರುವ ದಾಖಲೆ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯಗೆ ಶಿಕ್ಷೆ ಕೊಡಿಸುತ್ತೇನೆ. ಸಿಎಂ ಮೊದಲು ರಾಜಿನಾಮೆ ಕೊಟ್ಟು ತನಿಖೆಗೆ ಸಹಕಾರ ನೀಡಲಿ. ನನ್ನ ಹೋರಾಟ ಮುಂದುವರೆಸುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದರು. ತಕರಾರು ಅರ್ಜಿಯಲ್ಲಿ ಏನಿದೆ?
ದೂರುದಾರ ಸ್ನೇಹಮಯಿ ಕೃಷ್ಣ ಅವರು 39 ಪುಟಗಳ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ತನಿಖಾಧಿಕಾರಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿ ನನ್ನ ಪ್ರಕಾರ ಈ ಪ್ರಕರಣಕ್ಕೆ ಸಂಬಂಧಿಸಿದ ಬಿ ಅಂತಿಮ ವರದಿಯಾಗಿರುವುದಿಲ್ಲ. ಆದರೂ ಬಿ ಅಂತಿಮ ವರದಿ ಸಲ್ಲಿಸಿದ್ದರೂ ಕೂಡ ಮಾನ್ಯ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆ ಮಾಡಬಹುದು ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯವು, ಇಂಡಿಯಾ ಕಾರೆಟ್ ಪ್ರೈ.ಲಿ. ವಿರುದ್ಧ ಕರ್ನಾಟಕ ರಾಜ್ಯ ಎಂಬ ಪ್ರಕರಣದ ತೀರ್ಪಿನಲ್ಲಿ ಹೇಳಿದೆ. ಹೀಗಾಗಿ, ತೀರ್ಪಿನ ಪ್ರತಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಅದರಲ್ಲಿನ ಅಂಶಗಳನ್ನು ಪರಿಗಣಿಸಿ, ಸೂಕ್ತ ಆದೇಶ ಮಾಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಕರಾರು ಸಲ್ಲಿಸಿದ್ದರು.
ಮುಂದುವರೆದು, ತನಿಖಾಧಿಕಾರಿಯು 1 ರಿಂದ 4ನೇ ಆರೋಪಿಗಳ ವಿಚಾರದಲ್ಲಿ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸಬೇಕಾಗಿಯೂ ಲಭ್ಯವಿರುವ ಮತ್ತು ಮುಂದೆ ಲಭ್ಯವಾಗುವ ಸಾಕ್ಷ್ಯಾಧಾರಗಳ ಮೂಲಕ 1 ರಿಂದ 4ನೇ ಆರೋಪಿಗಳ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತು ಪಡಿಸಲು ಬೇಕಾದ ಮುಂದಿನ ಕಾನೂನು ಪ್ರಕ್ರಿಯೆ ನಡೆಸಲು ಅನುಮತಿ ನೀಡಬೇಕಾಗಿಯೂ, ಮಾನ್ಯ ನ್ಯಾಯಾಲಯಕ್ಕೆ ಸೂಕ್ತ ಮತ್ತು ನ್ಯಾಯ ಸಮ್ಮತ ಎಂದು ಕಂಡು ಬರುವ ಇತರೆ ಸೂಕ್ತ ಆದೇಶವನ್ನು ಮಾಡಬೇಕೇಂದು ನ್ಯಾಯ ಪೀಠಕ್ಕೆ ಅವರು ಮನವಿ ಮಾಡಿದ್ದರು.