ತೆಂಗು, ಅಡಿಕೆ ಬೆಳೆಯಲ್ಲಿ ವಿವಿಧ ರೋಗಗಳ ಹತೋಟಿ ಕ್ರಮ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಿಲ್ಲೆಯಲ್ಲಿ ತೆಂಗು ಮತ್ತು ಅಡಿಕೆ ಬೆಳೆಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು
ಈ ಬಾರಿ ಹೆಚ್ಚಿನ  ಮಳೆಯಿಂದ ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗ, ಅಣಬೆ ರೋಗ ಅಥವಾ ಬುಡಕೊಳೆ ರೋಗ, ಸುಳಿ ತಿಗಣೆ ಹುಳು ಬಾಧೆ, ಹೊಂಬಾಳೆ ಪೀಚು ಉದುರುವ, ಕಾಯಿ ಸೀಳುವ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. 

ಅದೇ ರೀತಿ ನಿರಂತರ ಮಳೆಯಿಂದ ತೆಂಗು ಬೆಳೆಯಲ್ಲಿ ಕಾಂಡ ಸೋರುವ ರೋಗ ಅಥವಾ ಕಾಂಡ ಸ್ರಾವ, ಅಣಬೆ ರೋಗವು ಕಂಡು ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ತೆಂಗು ಮತ್ತು ಅಡಿಕೆ ಬೆಳೆಯುವ ರೈತ ಬಾಂಧವರು ಮುಂಜಾಗ್ರತಾ ಕ್ರಮವನ್ನು ಅನುಸರಿಸುವುದು ಸೂಕ್ತವಾಗಿದೆ.

ಅಧಿಕ ಮಳೆಯಿಂದ ತೆಂಗು ಮತ್ತು ಅಡಿಕೆ ತೋಟಗಳಲ್ಲಿ ನೀರು ನಿಲ್ಲುವಿಕೆ, ಹೆಚ್ಚು ತೇವಾಂಶ ಹಾಗೂ ಆರ್ದ್ರ್ರತೆ ಇರುವುದರಿಂದ   ತೆಂಗು ಮತ್ತು ಅಡಿಕೆ ಬೆಳೆಗಳು ರೋಗಗಳಿಗೆ ತುತ್ತಾಗಿ ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. 

ತೆಂಗು ಮತ್ತು ಅಡಿಕೆ ತೋಟಗಳಲ್ಲಿ ನೀರು ನಿಂತಿದ್ದಲ್ಲಿ ಬಸಿಗಾಲುವೆ(೨ ಅಡಿ ಆಳ ೧ ಅಡಿ ಅಗಲ) ಯನ್ನು ತೆಗೆಯಬೇಕು.  ಪ್ರತಿ ಎಕರೆ ಅಡಿಕೆ ಬೆಳೆಗೆ ಕೊಟ್ಟಿಗೆ ಗೊಬ್ಬರ ೨೫ ಕೆ.ಜಿ ಮತ್ತು ಜಿಪ್ಸಂ ೨೦೦ ಕೆ.ಜಿ ಹಾಕಬೇಕು. ಬೋರೆಕ್ಸ್ ೨ ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಅಥವಾ ಪ್ರತಿ ಗಿಡದ ಬುಡಕ್ಕೆ ೩೦ ಗ್ರಾಂ ಬೋರಾಕ್ಸ್ ಹಾಕಬೇಕು. ಪ್ರತಿ ಅಡಿಕೆ ಮರಕ್ಕೆ ೨.೫ ಕೆಜಿ.ಯಂತೆ ಬೇವಿನ ಹಿಂಡಿ ಕೊಡಬೇಕು.

ತೆಂಗಿನಲ್ಲಿ ರೋಗ ಬಾಧಿಸಿದಾಗ ಗಿಡದ ಬುಡಕ್ಕೆ ೭೦ ಗ್ರಾಂ ಬೋರಾಕ್ಸ್ ಹಾಗೂ ಪ್ರತೀ ತೆಂಗಿನ ಮರಕ್ಕೆ ೫ ಕೆ.ಜಿ.ಯಂತೆ ಬೇವಿನ ಹಿಂಡಿ ಕೊಡಬೇಕು.  

ತೆಂಗಿನಲ್ಲಿ ಕಾಂಡಸ್ರಾವ ರೋಗ ಲಕ್ಷಣಗಳುಃ
ಅಸಮರ್ಪಕ ಪೋ?ಕಾಂಶ ಮತ್ತು ನೀರು ನಿರ್ವಹಣೆ ಹಾಗೂ ಸಮಸ್ಯಾತ್ಮಕ ಮಣ್ಣಿನಿಂದ ತೆಂಗಿನಲ್ಲಿ   ರಸ ಸೋರುವ ರೋಗ ಅಥವಾ ಕಾಂಡ ಸ್ರಾವ ರೋಗಕ್ಕೆ ಪ್ರಮುಖ ಕಾರಣವಾಗಿದ್ದು, ರೋಗ ತಗುಲಿದಾಗ   ಮೊದಲ ಹಂತದಲ್ಲಿ ಕಾಂಡದಲ್ಲಿ ಕೆನ್ನೆತ್ತರು ಬಣ್ಣದ ರಸ ಸೋರುವ ಚಿಹ್ನೆ ಕಂಡು ಬರುತ್ತದೆ. ಕ್ರಮೇಣ ಕಾಂಡದಲ್ಲಿ ರಸ ಸೋರುವಿಕೆ ಹೆಚ್ಚಾಗುತ್ತಾ ಮೇಲ್ಮುಖವಾಗಿ ಹಬ್ಬುತ್ತದೆ. ಇಂತಹ ಮರಗಳಲ್ಲಿ ಹರಳು ಮತ್ತು ಕಾಯಿ ಉದುರುತ್ತವೆ.

ಕಾಂಡ ಸ್ರಾವ ರೋಗದ ಹತೋಟಿ ಕ್ರಮಗಳು:
ರೋಗ ತೀವ್ರವಾದ ಮರಗಳಿಗೆ ಹೆಕ್ಸಾಕೊನಜೋಲ್ ೫ ಮಿ.ಲೀ ಔ?ಧಿಯನ್ನು ೧೦೦ ಮಿ.ಲೀ ನೀರಿಗೆ ಬೆರೆಸಿ ೩ ತಿಂಗಳ ಅಂತರದಲ್ಲಿ ವ?ಕ್ಕೆ ೪ ಬಾರಿಯಂತೆ ಬೇರೋಪಚಾರ ಮಾಡಬೇಕು. ಬೇರಿನಿಂದ ಹೀರಲ್ಪಟ್ಟ ಶೀಲಿಂಧ್ರನಾಶಕದ ಅಂಶ ಕಾಯಿಗಳಲ್ಲಿ ಮತ್ತು ಎಳನೀರಿನಲ್ಲಿ ಸೇರುವುದರಿಂದ ೪೫ ದಿನಗಳವರೆಗೆ ಉಪಚಾರ ಮಾಡಿದ ಮರಗಳಿಂದ ಕಾಯಿ ಅಥವಾ ಎಳನೀರನ್ನು ಕೀಳಬಾರದು.

ತೆಂಗಿನ ಮರದ ಕಾಂಡದ ಮೇಲೆ ೧ ಮೀಟರ್‌ವರೆಗೆ ಬೋರ್ಡೋಪೇಸ್ಟ್ ಲೇಪಿಸುವುದರಿಂದ ಅಥವಾ ಸುಣ್ಣ ಹೊಡೆಯುವುದರಿಂದ ರೋಗಾಣುಗಳು ಮರವನ್ನು ಪ್ರವೇಶಿಸುವುದನ್ನು ಮತ್ತು ಕೀಟಗಳು ಮೊಟ್ಟೆ ಇಡುವುದನ್ನು ತಪ್ಪಿಸಬಹುದು. ರೋಗ ಪೀಡಿತ ಭಾಗಕ್ಕೆ ಶೇ.೫ರ ಹೆಕ್ಸಾಕೊನಜೋಲ್ (Hexaconazole) ಲೇಪಿಸುವುದರಿಂದ ಕಾಂಡ ಸ್ರಾವ ರೋಗವನ್ನು ಹತೋಟಿಗೆ ತರಬಹುದು.      

ಅಡಿಕೆಯಲ್ಲಿ ಎಲೆಚುಕ್ಕೆ ರೋಗದ ಲಕ್ಷಣಗಳು:
ಅಡಿಕೆ ಮರದ ಎಲೆಗಳ ಮೇಲೆ ಬೂದು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳು ಗೋಚರಿಸಿ ದೊಡ್ಡದಾಗಿ ಕೂಡಿಕೊಂಡು ಎಲೆ ಸುಟ್ಟಂತೆ ಕಂಡು ಬರುವುದು ಹಾಗೂ ತೀವ್ರ ಬಾಧೆಗೊಳಗಾದ ಎಲೆಗಳು ಒಣಗಿ ಉದುರುವುದು ಎಲೆಚುಕ್ಕೆ ರೋಗದ ಲಕ್ಷಣವಾಗಿದೆ.

ಎಲೆಚುಕ್ಕೆ ರೋಗ ಕಾಣಿಸಿಕೊಂಡಾಗ ೨ ಗ್ರಾಂ ಮ್ಯಾಂಕೋಜೆಬ್ ೭೫ ಡಬ್ಲ್ಯೂ.ಪಿ. ಅಥವಾ ೩ಗ್ರಾಂ ತಾಮ್ರದಆಕ್ಸಿಕ್ಲೋರೈಡ್ ೫೦ ಡಬ್ಲ್ಯೂ.ಪಿ. ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಎಲೆ ಚುಕ್ಕೆ ರೋಗವನ್ನು ನಿಯಂತ್ರಿಸಬಹುದೆಂದು ತೋಟಗಾರಿಕೆ ಉಪನಿರ್ದೇಶಕಿ ಶಾರದಮ್ಮ ತಿಳಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";